ADVERTISEMENT

‌ಗುಂಡ್ಲುಪೇಟೆ | ಜಾತಿನಿಂದನೆ: 17 ಮಂದಿ ವಿರುದ್ಧ ಪ್ರಕರಣ

ಸುಳ್ಳು ದೂರು ನೀಡಲಾಗಿದೆ ಎಂದು ಠಾಣೆ ಎದುರು ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:43 IST
Last Updated 20 ಅಕ್ಟೋಬರ್ 2025, 6:43 IST
ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗ್ರಾಮಸ್ಥರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಚಾಮರಾಝನಗರದ ಪೊಲೀಸ್ ಠಾಣೆ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗ್ರಾಮಸ್ಥರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಚಾಮರಾಝನಗರದ ಪೊಲೀಸ್ ಠಾಣೆ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

‌ಗುಂಡ್ಲುಪೇಟೆ: ತಾಲ್ಲೂಕಿನ ವೀರನಪುರ ಗ್ರಾಮದಲ್ಲಿ ದೇಗುಲ ಪ್ರವೇಶ ನಿರಾಕರಣೆ ಸಂಬಂಧ ಆಯೋಜಿಸಿದ್ದ ‌ಶಾಂತಿ ಸಭೆಯಲ್ಲಿ ಜಾತಿನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ 17 ಮಂದಿ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವೀರನಪುರ ಗ್ರಾಮದ ಶಿವಕುಮಾರ್ ನೀಡಿದ ದೂರಿನಂತೆ ಅದೇ ಗ್ರಾಮದ ಗುರುಪ್ರಸಾದ್, ನಾಗಸುಂದರ್, ಮಹದೇವಪ್ಪ, ಶಂಭಪ್ಪ, ಮಂಜು, ನಾಗರಾಜು, ಮಂಜುನಾಥ್, ಮಲ್ಲು ಕಮರಹಳ್ಳಿ, ಮಲ್ಲು, ಗಣೇಶ, ಮಣಿ, ನಾಗಪ್ಪ, ಕುಮಾರ, ಮಧುಮಲ್ಲಪ್ಪ, ಮಧು, ವೀರಭದ್ರೇಶ್ವರ ದೇಗುಲ ಅರ್ಚಕರಾದ ಸೋಮಶೇಖರ್ ಹಾಗೂ ಶಿವಮೂರ್ತಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪ ಏನು: ವೀರನಪುರ ಗ್ರಾಮದಲ್ಲಿ ಅ.17ರಂದು ವೀರಭದ್ರಸ್ವಾಮಿ, ಸಿದ್ದಪ್ಪಾಜಿ, ಮಾರಮ್ಮ ದೇಗುಲಗಳ ಪ್ರವೇಶಕ್ಕೆ ನಿರಾಕರಣೆ ಮಾಡಲಾಗುತ್ತಿದೆ ಹಾಗೂ ದೇವಾಲಯದ ಆಸ್ತಿಯನ್ನು ಹರಾಜು ಹಾಕದೆ ಲಿಂಗಾಯತ ಸಮುದಾಯ ಅನುಭವಿಸುತ್ತಿದೆ ಎಂಬ ಆರೋಪದಡಿ ಗ್ರಾಮದ ಎಲ್ಲ ಸಮುದಾಯಗಳ ಮುಖಂಡರು ಶಾಂತಿ ಸಭೆ ನಡೆಸಿದ್ದರು. ಸಭೆಯಲ್ಲಿ ಜಾತಿನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಶಿವಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಠಾಣೆ ಮುಂದೆ ಪ್ರತಿಭಟನೆ: ಶಿವಕುಮಾರ್ ನೀಡಿರುವ ದೂರಿನಲ್ಲಿ ಸತ್ಯಾಂಶವಿಲ್ಲ; ಆದರೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಚಾಮರಾಜನಗರ ಟೌನ್ ಪೊಲೀಸ್ ಠಾಣೆ ಎದುರು ಭಾನುವಾರ ವೀರನಪುರದ ಹಲವು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 

ಮಂಟೇಸ್ವಾಮಿ (ಸಿದ್ದಪ್ಪಾಜಿ) ದೇವಾಲಯದ ಜೀರ್ಣೋದ್ಧಾರಕ್ಕೆ ಗ್ರಾಮದ ಎಲ್ಲ ಸಮುದಾಯದವರು ಭೂಮಿಪೂಜೆ ನೆರವೇರಿಸಲು ನಿರ್ಧರಿಸಿದ್ದರೂ ಗ್ರಾಮದ ಎನ್.ಶಿವಕುಮಾರ್ ನಿರ್ದಿಷ್ಟ ಸಮುದಾಯದ 17 ಮಂದಿ ವಿರುದ್ಧ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ದೂರು ನೀಡಿದ್ದಾರೆ. ತಹಶೀಲ್ದಾರ್, ಇನ್‌ಸ್ಪೆಕ್ಟರ್, ರಾಜಸ್ವ ನಿರೀಕ್ಷಕರ ಸಮ್ಮುಖದಲ್ಲಿಯೇ ಗ್ರಾಮಸ್ಥರ ಸಭೆ ನಡೆದಿದ್ದು ಸಭೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಆದರೂ ಗ್ರಾಮದಲ್ಲಿ ಶಾಂತಿ ಕದಡಲು ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಎನ್.ಶಿವಕುಮಾರ್ ದೂರು ನೀಡಿದ್ದು ನಂಜುಂಡಸ್ವಾಮಿ, ಸಿದ್ದಮಲ್ಲೇಶ್ವರ ಮತ್ತು ಮಲ್ಲೇಶ್ ಎಂಬುವರು ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಒತ್ತಾಯಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ನಿರ್ದೇಶನದಂತೆ ನಗರ ಡಿವೈಎಸ್‌ಪಿ ಸ್ನೇಹರಾಜ್ ವೀರನಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಅಭಿಪ್ರಾಯ ಪಡೆದುಕೊಂಡರು. ಈ ಮಧ್ಯೆ ವೀರನಪುರ ಗ್ರಾಮಸ್ಥರು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರತಿ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.