ADVERTISEMENT

ಗುಂಡ್ಲುಪೇಟೆ | ಕಾಡುಪ್ರಾಣಿ ಹಾವಳಿ; ಅರಣ್ಯಾಧಿಕಾರಿಗೆ ದಿಗ್ಬಂಧನ

ಓಂಕಾರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಘಟನೆ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 14:19 IST
Last Updated 2 ಜುಲೈ 2025, 14:19 IST
ಗುಂಡ್ಲುಪೇಟೆ ತಾಲ್ಲೂಕಿನ ಕುರುಬರಹುಂಡಿ ಗ್ರಾಮದಲ್ಲಿ ರೈತರು ಅರಣ್ಯಾಧಿಕಾರಿಗಳಿಗೆ ದಿಗ್ಬಂಧನ ಹಾಕಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಗುಂಡ್ಲುಪೇಟೆ ತಾಲ್ಲೂಕಿನ ಕುರುಬರಹುಂಡಿ ಗ್ರಾಮದಲ್ಲಿ ರೈತರು ಅರಣ್ಯಾಧಿಕಾರಿಗಳಿಗೆ ದಿಗ್ಬಂಧನ ಹಾಕಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು   

ಗುಂಡ್ಲುಪೇಟೆ: ಕಾಡು ಪ್ರಾಣಿಗಳ ಉಪಟಳವನ್ನು ತಡೆಯುವಂತೆ ಆಗ್ರಹಿಸಿ ಓಂಕಾರ ವಲಯ ಅರಣ್ಯ ವ್ಯಾಪ್ತಿಯ ರೈತರು ತಾಲ್ಲೂಕಿನ ಕುರುಬರಹುಂಡಿ ಗ್ರಾಮದ ಸಮೀಪ ಬುಧವಾರ ಅರಣ್ಯಾಧಿಕಾರಿಗಳಿಗೆ ದಿಗ್ಬಂಧನ ಹಾಕಿ ಪ್ರತಿಭಟಿಸಿದರು.

ಗ್ರಾಮದ ರೇಚಪ್ಪ ಅವರ ಸರ್ವೇ ನಂ–367ರ ಜಮೀನಿನ ಮೇಲೆ ಮಂಗಳವಾರ ತಡರಾತ್ರಿ ಕಾಡಾನೆ ದಾಳಿ ನಡೆಸಿ ಟೊಮೆಟೊ, ಬೀನ್ಸ್ ಫಸಲು ನಾಶ ಪಡಿಸಿ, ಶೀಟ್‌ನಿಂದ ನಿರ್ಮಿಸಿದ್ದ ಶೆಡ್ ಮತ್ತು ಬೈಕ್ ಅನ್ನು ತುಳಿದು ಜಖಂಗೊಳಿಸಿದೆ. ಜತೆಗೆ ಮಾಲೀಕರನ್ನು ಅಟ್ಟಾಡಿಸಿದ್ದು, ರೇಚಪ್ಪ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಪಕ್ಕದ ಜಮೀನಿನ ಕುಮಾರ್ ಅವರ ಸೋಲಾರ್ ತಂತಿ ಬೇಲಿಯನ್ನೂ ತುಳಿದು ಹಾಕಿತ್ತು.

ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿ ಪರಿಶೀಲನೆಗೆ ಮುಂದಾದ ಡಿಆರ್‌ಎಫ್‍ಒ ಶಶಿಕುಮಾರ್‌ಗೆ ರೈತರು ದಿಗ್ಭಂಧನ ಹಾಕಿ, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದಿದರು.

ADVERTISEMENT

ನಂತರ ಆಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು, ‘ಓಂಕಾರ ವಲಯ ವ್ಯಾಪ್ತಿಯ ಮಂಚಹಳ್ಳಿ, ದೇಶಿಪುರ, ಕುರುಬರಹುಂಡಿ, ಕೋಟೆಕೆರೆ, ಹೊಸಪುರ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಜಮೀನುಗಳಲ್ಲಿ ಬೆಳೆದ ಫಸಲುಗಳನ್ನು ಹಾಗೂ ಸೋಲಾರ್ ತಂತಿ ಬೇಲಿ ತುಳಿದು ನಾಶಪಡಿಸುತ್ತಿವೆ. ಹೀಗಿದ್ದರೂ ಅರಣ್ಯ ಇಲಾಖೆ ಕಾಡಾನೆಗಳಿಗೆ ಕಡಿವಾಣ ಹಾಕಲು ಮುಂದಾಗಿಲ್ಲ. ಇದರಿಂದ ರೈತರಿಗೆ ಅಪಾರ ನಷ್ಟ ಉಂಟಾಗುತ್ತಿದೆ. ಆದ್ದರಿಂದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುವ ಮೂಲಕ ಶಾಶ್ವತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ರೈತರ ಸಮಸ್ಯೆ ಆಲಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ‘ಕಾಡಾನೆಗಳು ಅರಣ್ಯದಿಂದ ಹೊರಬರದಂತೆ ತಡೆಯಲು ಗಸ್ತು ತಿರುಗಲಾಗುವುದು. ಜೊತೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪದ ರೈತರು ಈಗಾಗಲೇ ಹಲವು ಬಾರಿ ಭರವಸೆ ನೀಡಿದ್ದೀರಾ, ಆದರೂ ಕಾಡಾನೆ ಹಾವಳಿ ನಿಂತಿಲ್ಲ. ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.

ರೈತ ಮುಖಂಡರಾದ ಷಣ್ಮುಖಸ್ವಾಮಿ, ಪ್ರದೀಪ್, ಮಾಧು, ಮಾದಪ್ಪ, ಶಿವರಾಜು, ಮಹೇಶ್, ಕುಮಾರ್, ಮಹದೇವಸ್ವಾಮಿ, ಮಂಚಹಳ್ಳಿ ಹರೀಶ್ ಸೇರಿದಂತೆ ಹಲವು ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.