ಗುಂಡ್ಲುಪೇಟೆ: ತಾಲ್ಲೂಕಿನ ನೇನೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ನಿವಾಸಿಗಳು ಅಧಿಕಾರಿಗಳು ಹಾಗೂ ಆಡಳಿತ ವರ್ಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡಾವಣೆಯಲ್ಲಿ 80 ಮನೆಗಳಿದ್ದು, ಕಳೆದ ಮೂರು ತಿಂಗಳಿಂದಲೂ ಕುಡಿಯುವ ನೀರಿನ ಪೂರೈಕೆ ಇಲ್ಲದ ಕಾರಣ ನೀರಿಗಾಗಿ ಜನರು ಪರಿತಪಿಸುವಂತಾಗಿದೆ. ದಿನ ಕಳೆದಂತೆ ಸಮಸ್ಯೆ ಹೆಚ್ಚಾದ ಕಾರಣ ನಿವಾಸಿಗಳು ಖಾಸಗಿ ಟ್ಯಾಂಕರ್‌ಗೆ ₹700 ಹಣ ನೀಡಿ ನೀರು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಕುಡಿಯುವ ನೀರು ಪೂರೈಕೆ ಮಾಡುವಂತೆ ಗ್ರಾಪಂ ಪಿಡಿಒಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ಪಂಚಾಯಿತಿ ಮುಂದೆ ಧರಣಿ ನಡೆಸುವುದಾಗಿ ನಿವಾಸಿಗಳಾದ ಗಣೇಶ್, ಬಾಲು, ಪುಟ್ಟರಂಗಯ್ಯ, ಮಹೇಶ್, ಕುಮಾರ್, ಮಾದೇವಪ್ಪ, ಅರ್ಚನಾ, ಆನಂದ್, ಸುಧಾ, ಮೇಘಶ್ರೀ, ಸವಿತಾ, ಶಶಾಂಕ್ ಎಚ್ಚರಿಸುದ್ದಾರೆ.
ಶಾಸಕರ ಭರವಸೆಯೂ ವಿಫಲ: ‘ಶಾಸಕ ಎಚ್.ಎಂ.ಗಣೇಶಪ್ರಸಾದ್ ಬಡಾವಣೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿ, ಬೋರ್ ಕೊರೆಸಿ ನೀರಿನ ವ್ಯವಸ್ಥೆ ಮಾಡುವುದಾಗಿ ಕಳೆದ ಆರು ತಿಂಗಳ ಹಿಂದೆ ನೀಡಿದ ಭರವಸೆ ಈಡೇರಿಲ್ಲ’ ಎಂದು ನಿವಾಸಿ ಚೇತನ್ ಅಸಮಾಧಾನ ಹೊರ ಹಾಕಿದರು.
‘ಬಡಾವಣೆಯಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿರುವ ಕಾರಣ ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಾಡಾಗಿದೆ. ಬೀದಿ ದೀಪಗಳು ಕೆಟ್ಟು ನಿಂತಿರುವುದರಿಂದ ರಾತ್ರಿ ವೇಳೆ ಜೀವ ಭಯದಲ್ಲಿ ಓಡಾಡಬೇಕಾಗಿದೆ. ಸಂಬಂಧಪಟ್ಟವರು ಸಮಸ್ಯೆ ಪರಿಹರಿಸಬೇಕು’ ಎಂದರು.
‘ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿರುವ ಪರಿಣಾಮ ನೀರು ನಿಂತಲ್ಲೆ ನಿಂತಿದೆ. ಇದರಿಂದ ಚರಂಡಿಗಳಲ್ಲಿ ಹೂಳು ತುಂಬಿ ಗಬ್ಬೆದ್ದು ನಾರುತ್ತಿದೆ’ ಎಂದು ನಿವಾಸಿ ಅಸಮಾಧಾನ ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.