ADVERTISEMENT

ಚಿಕನ್ ಊಟ ಸೇವಿಸಿ ಮಕ್ಕಳು ಅಸ್ವಸ್ಥ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಅಮಾನತು

ತಾಲ್ಲೂಕಿನ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 15:26 IST
Last Updated 19 ಜುಲೈ 2023, 15:26 IST
ಚಿಕನ್
ಚಿಕನ್    

ಗುಂಡ್ಲುಪೇಟೆ: ತಾಲ್ಲೂಕಿನ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಿಕನ್ ಊಟ ಸೇವಿಸಿ ಮಕ್ಕಳು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲ ಎಂ.ಕುಮಾರಸ್ವಾಮಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಆದೇಶ ಹೊರಡಿಸಿದೆ. 

‘ಕುಮಾರಸ್ವಾಮಿ ಅವರು ವಿವಿಧ ಕರ್ತವ್ಯ ಲೋಪಗಳನ್ನು ಮಾಡಿದ್ದು,  ಜಿಲ್ಲೆಯ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್‌ ಅವರು ನೀಡಿರುವ ವರದಿ ಆಧಾರದಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ನವೀನ್‌ ಕುಮಾರ್‌ ರಾಜು ಅವರು ಮಂಗಳವಾರ ಹೊರಡಿಸಿರುವ ಆದೇಶದಲ್ಲಿ ಹೇಳಿದ್ದಾರೆ. 

ಭಾನುವಾರ ರಾತ್ರಿ ಹಾಸ್ಟೆಲ್‌ನಲ್ಲಿ ಚಿಕನ್‌ ಊಟ ಸೇವಿಸಿದ್ದ ಮಕ್ಕಳ ಪೈಕಿ 24 ಮಂದಿ ಅಸ್ವಸ್ಥರಾಗಿ ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಘಟನೆಗೆ ಪ್ರಾಂಶುಪಾಲರೇ ಕಾರಣ ಎಂದು ಪೋಷಕರು ದೂರಿದ್ದರು. ಇದಲ್ಲದೇ, ವಸತಿ ಶಾಲೆಯ ನಿರ್ವಹಣೆ ಸರಿಯಾಗಿಲ್ಲ. ಶೌಚಾಲಯಗಳಲ್ಲಿ ಶುಚಿತ್ವವಿಲ್ಲ ಎಂಬುದು ಸೇರಿದಂತೆ ಹಲವು ಆರೋಪಗಳನ್ನು ಪೋಷಕರು ಮಾಡಿದ್ದರು. 

ADVERTISEMENT

ಮಕ್ಕಳು ಅಸ್ವಸ್ಥಗೊಂಡಿರುವ ಪ್ರಕರಣ ಹಾಗೂ ಪ್ರಾಂಶುಪಾಲ ಕುಮಾರಸ್ವಾಮಿ ಅವರ ಮೇಲೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್‌, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ವರದಿ ನೀಡಿದ್ದರು. ಪ್ರಾಂಶುಪಾಲರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದರು. 

ವರದಿಯಲ್ಲಿ ಏನಿದೆ?

‘ಪ್ರಾಂಶುಪಾಲರು ಒಂದು ವಾರದಿಂದ ನಿಲಯಪಾಲಕರ ಪ್ರಭಾರವನ್ನು ಬೇರೆಯವರಿಗೆ ವಹಿಸಿದೆ ತಾವೇ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳು ಅಸ್ವಸ್ಥರಾದ ಘಟನೆ ಬಗ್ಗೆ ಮೇಲಾಧಿಕಾರಿಗಳಿಗೆ ಹಾಗೂ ಪೋಷಕರಿಗೆ ವಿಷಯ ತಿಳಿಸಿಲ್ಲ. ಈ ಹಿಂದೆ ಲೋಕಾಯುಕ್ತ ಡಿವೈಎಸ್‌ಪಿ ಕೂಡ ಭೇಟಿ ನೀಡಿ ಶಾಲೆಯ ಸ್ವಚ್ಛತೆ ಮತ್ತು ಆಹಾರ ನಿರ್ವಹಣೆಯ ಬಗ್ಗೆ ಎಚ್ಚರಿಕೆ ನೀಡಿದ್ದರೂ ಆಡಳಿತ ನಿರ್ವಹಣೆಯ ಲೋಪವಾಗಿದೆ. ಅಡುಗೆ ಸಿಬ್ಬಂದಿಗೆ ಸೂಕ್ತ ರೀತಿಯ ಆಹಾರ ನಿರ್ವಹಣೆ ಮತ್ತು ಸ್ವಚ್ಛತೆಯ ಬಗ್ಗೆ ತಿಳಿವಳಿಕೆ ನೀಡಿಲ್ಲ. ಊಟದ ಸಂದರ್ಭದಲ್ಲಿ ನರ್ಸ್ ಬಿಟ್ಟು ಬೇರೆ ಸಿಬ್ಬಂದಿ ಹಾಜರಿ ಇದ್ದಿರಲಿಲ್ಲ. ಶೌಚಾಲಯ ಮತ್ತು ಸ್ನಾನ ಗೃಹಗಳು ಅಶುಚಿತ್ವದಿಂದ ಕೂಡಿರುತ್ತವೆ. ಅಡುಗೆ ಸಿಬ್ಬಂದಿ ನಡುವೆ ಹೊಂದಾಣಿಕೆ ಇಲ್ಲ. ಒಟ್ಟಾರೆಯಾಗಿ ಸಮಾಜ ಕಲ್ಯಾಣ ಇಲಾಖೆಯ ನಿಯಮಾನುಸಾರ ವಸತಿ ಶಾಲೆಯ ನಿಲಯಾರ್ಥಿಗಳಿಗೆ ಊಟ ವಸತಿಗಳನ್ನು ನೀಡದಿರುವುದು ಕಂಡು ಬರುತ್ತದೆ. ಶಾಲೆಯ ಪ್ರಾಂಶುಪಾಲರು  ಕರ್ತವ್ಯ ನಿರ್ವಹಿಸುವುದರಲ್ಲಿ ವಿಫಲವಾಗಿರುವುದರಿಂದ ಶಿಸ್ತು ಕ್ರಮವಹಿಸಬಹುದು’ ಎಂದು ವರದಿಯಲ್ಲಿ ಮಲ್ಲಿಕಾರ್ಜುನ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.