ADVERTISEMENT

ಗುಂಡ್ಲುಪೇಟೆ: ಈರುಳ್ಳಿಗೆ ಟ್ವಿಸ್ಟರ್‌ ಶಿಲೀಂಧ್ರ ಬಾಧೆ

​ಪ್ರಜಾವಾಣಿ ವಾರ್ತೆ
Published 1 ಮೇ 2020, 16:07 IST
Last Updated 1 ಮೇ 2020, 16:07 IST
ರೋಗ ಬಾಧಿತ ಈರುಳ್ಳಿ ಗಿಡಗಳು
ರೋಗ ಬಾಧಿತ ಈರುಳ್ಳಿ ಗಿಡಗಳು   

ಗುಂಡ್ಲುಪೇಟೆ:ತಾಲ್ಲೂಕಿನ ಬೇರಾಂಬಡಿ, ಚೆನ್ನ ಮಲ್ಲಿಪುರ, ಹೊಂಗಳ್ಳಿ, ಬರಗಿ, ದೇಶಿಪುರ, ಆಲತ್ತೂರು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳೆದ ಸಾಂಬಾರ್‌ ಈರುಳ್ಳಿ ಬೆಳೆಗಳಿಗೆ ಟ್ವಿಸ್ಟರ್ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಈ ರೋಗವು ಬಿತ್ತನೆಯಾದ 35ರಿಂದ 40 ದಿನದ ಅನುಪಾಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಈಗ ತಾನೇ ರೈತರು ಲಾಕ್‌ಡೌನ್‌ನಿಂದಾಗಿ ಬಿತ್ತನೆ ಈರುಳ್ಳಿಗೆ ಕ್ವಿಂಟಲ್‌ಗೆ ₹6,500ರಿಂದ 7,000 ಖರೀದಿಸಿ ಕೃಷಿ ಚಟುವಟಿಕೆ ಮಾಡಿದ್ದಾರೆ. ಒಂದು ಎಕರೆಗೆ ನಾಲ್ಕರಿಂದ ಐದು ಕ್ವಿಂಟಲ್ ಬಿತ್ತನೆ ಈರುಳ್ಳಿ ಬೇಕಾಗುತ್ತದೆ. ಬಿತ್ತನೆ ಮಾಡುವಾಗ ಕೂಲಿ, ಗೊಬ್ಬರ, ಔಷಧ ಸೇರಿದಂತೆ ಒಂದು ಎಕರೆಗೆ ಸುಮಾರು ₹70 ಸಾವಿರ ಖರ್ಚು ಮಾಡಿದ್ದಾರೆ’ ಎಂದು ರೈತ ಮಹದೇವಪ್ಪ ತಿಳಿಸಿದರು.

‘ಮಳೆ, ಮೋಡ ಕವಿದ ವಾತಾವರಣದಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ.ರೋಗಕ್ಕೆ ತುತ್ತಾದ ಎಲೆಗಳು ಮತ್ತು ಕಾಂಡದ ಭಾಗವು ತಿರುಚಿಗೊಂಡು ನೆಲಕ್ಕೆ ಬೀಳುತ್ತದೆ. ರೋಗದ ತೀವ್ರತೆ ಹೆಚ್ಚಾದರೆ ಸುಟ್ಟಂತೆ ಆಗುತ್ತದೆ. ಬೆಳವಣಿಗೆಯೂ ಕುಂಠಿತವಾಗುತ್ತದೆ. ಗಾಳಿಯ ಮೂಲಕ ರೋಗವು ಹರಡುತ್ತದೆ. ತೇವಾಂಶವನ್ನು ಕಡಿಮೆ ಮಾಡುವುದಕ್ಕೆ ಮಣ್ಣಿನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು’ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ADVERTISEMENT

ಅಧಿಕಾರಿಗಳ ಭೇಟಿ

ಈ ಮಧ್ಯೆ, ರೋಗ ಕಂಡು ಬಂದ ಜಮೀನುಗಳಿಗೆ ಭೇಟಿ ನೀಡಿರುವ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ನಿಯಂತ್ರಣಕ್ಕೆ ತೆಗದುಕೊಳ್ಳಬೇಕಾದ ಕ್ರಮಗಳ ಕುರಿತು ರೈತರಿಗೆ ಸಲಹೆ ನೀಡಿದ್ದಾರೆ.

‘ರೋಗದ ನಿರ್ವಹಣೆಗೆ ಥಿಯೋಪಿನೈಟ್ ಮಿಥೈಲ್ ಒಂದು ಗ್ರಾಂ ಅನ್ನು ಪ್ರತಿ ಲೀಟರ್‌ನಲ್ಲಿ ಅಥವಾ ಹೆಕ್ಸಕೋನಾಜೋಲ್ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು. ಆರರಿಂದ ಏಳು ದಿನಗಳ ನಂತರ ಎರಡು ಗ್ರಾಂಗಳಷ್ಟು ಬೋರಾನ್ ಜಿಂಕ್ ಮತ್ತು ಮ್ಯಾಂಗನೀಸ್ ಲಘು ಪೋಷಕಾಂಶವನ್ನು ಪ್ರತಿ ಲೀಟರ್‌ಗೆ ಬೆರಸಿ ಸಿಂಪಡಣೆ ಮಾಡಬೇಕು’ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ತಿಳಿಸಿದರು.

ರೋಗದ ಬಗ್ಗೆ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರದ ರೋಗ ತಜ್ಞ ಡಾ.ಬಿ.ಪೊಂಪನಗೌಡ (7406 152815) ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ರೈತರು ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.