ಚಾಮರಾಜನಗರ: ‘ನೊಂದವರ ಪರವಾಗಿ ಸದಾ ತುಡಿಯುತ್ತಿದ್ದ ಬಸವಣ್ಣನವರ ಸಾಮ್ರಾಜ್ಯ ಅತ್ಯಂತ ಸಾಂಪ್ರದಾಯಿಕ ಕಲ್ಯಾಣ ಸಾಮ್ರಾಜ್ಯ’ಎಂದು ತಿ.ನರಸೀಪುರ ತಾಲ್ಲೂಕು ಮುಡುಕನಪುರ ಹಲವಾರು ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಅವರು ಮಾತನಾಡಿದರು.
‘ನೊಂದು ಬಂದವರಿಗೆ ವಚನಗಳ ಮೂಲಕಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಬಸವಣ್ಣನವರು ಮಾಡುತ್ತಿದ್ದರು. ಬಸವಣ್ಣ ಎಂದಾಕ್ಷಣ ಇವರಆಪ್ತ ಸಹಾಯಕರಾಗಿದ್ದ ಹಡಪದ ಅಪ್ಪಣ್ಣ ಅವರ ನೆನಪಾಗುತ್ತದೆ. ವಚನ ಚಳವಳಿ, ಬಸವಣ್ಣ ಇದ್ದ ಕಡೆ ಅಪ್ಪಣ್ಣ ಅವರು ಕೂಡ ಇರುತ್ತಾರೆ’ ಎಂದರು.
ಆಯುಧಗಳಿಲ್ಲದ ಸಂಘರ್ಷವಾಗಬೇಕು: ‘ಸಂಘಟನೆ ಶಕ್ತಿ ತುಂಬುತ್ತದೆ. ಎಲ್ಲರೂ ಸಂಘಟಿತರಾಗಿಆಯುಧಗಳಿಲ್ಲದ ಸಂಘರ್ಷಕ್ಕೆ ಮುಂದಾದರೆ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಬಹುದು. ಇದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಸಂಘಟನೆಯ ಸಂಘರ್ಷ ನಿರಂತರವಾಗಿ ಚಾಲ್ತಿಯಲ್ಲಿರಬೇಕು. ಯಾವುದೇ ನ್ಯಾಯ, ಹಕ್ಕನ್ನುಹೋರಾಟ ಮಾಡಿ ಪಡೆದುಕೊಳ್ಳಬೇಕು ಎಂದು ಅಂಬೇಡ್ಕರ್ ಅವರು ಜನಸಾಮಾನ್ಯರಿಗೆ ತಿಳಿವಳಿಕೆ ನೀಡುತ್ತಾರೆ’ ಎಂದು ಹೇಳಿದರು.
ಬೇಡಿಕೆ ಈಡೇರಿಸಬೇಕು: ‘ನಮ್ಮ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕು. ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ₹ 25 ಕೋಟಿ ಅನುದಾನ ಮೀಸಲಿಟ್ಟು ಅಭಿವೃದ್ಧಿಗೆ ಮುಂದಾಗಬೇಕು. ನಮಗೆನೋವಾಗುವಂತಹ ಪದ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದುಸವಿತಾ ಸಮಾಜದ ಮೈಸೂರು ಘಟಕದ ಅಧ್ಯಕ್ಷ ಎನ್.ಆರ್. ನಾಗೇಶ್ಬೇಡಿಕೆ ಮುಂದಿಟ್ಟರು.
ಮೆರವಣಿಗೆ: ಇದಕ್ಕೂ ಮೊದಲು, ಚಾಮರಾಜಶೇಶ್ವರಸ್ವಾಮಿ ದೇವಸ್ಥಾನದಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದವರೆಗೆ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ವೇದಿಕೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಚಂದಕವಾಡಿಯ ಸಿದ್ದರಾಜು ಮತ್ತು ತಂಡದವರು ನಾದಸ್ವರ ಸಂಗೀತ ಕಛೇರಿ ನಡೆಸಿಕೊಟ್ಟರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶಿವಮ್ಮ, ಸದಸ್ಯ ಸಿ.ಎನ್. ಬಾಲರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಬಸವಣ್ಣ, ಎಎಸ್‌ಪಿ ಅನಿತಾಬಿ.ಹದ್ದಣ್ಣವರ್, ತಹಶೀಲ್ದಾರ್ ನಾಗಭೂಷಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ, ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಇದ್ದರು.
ಮನುಕುಲದ ಪರವಾಗಿ ವಚನ ಚಳವಳಿ
‘ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಹಾಗೂ ಮನುಕುಲದ ಪರವಾಗಿ ವಚನ ಚಳವಳಿ ನಡೆಯಿತು. ಸಮ ಸಮಾಜದ ನಿರ್ಮಾಣಕ್ಕಾಗಿ ವಚನ ಚಳವಳಿ ಹುಟ್ಟಿಕೊಂಡಿತು. ಸಿಂಧೂನಾಗರಿಕತೆಯಲ್ಲಿ ಬದುಕುತ್ತಿದ್ದ ಜನರಿಗೆ ದೇವರ ಪೂಜೆ, ಜಾತಿ ಇರಲಿಲ್ಲ. ವೈದಿಕ ಧರ್ಮ ಬಂದು ಜಾತಿ ತಾರತಮ್ಯ ತಂದೊಡ್ಡಿತು. ಜಾತಿ ವ್ಯವಸ್ಥೆ ಜಾರಿಗೆ ತಂದಿತು’ ಎಂದು ಪ್ರಗತಿಪರ ಮುಖಂಡ ಅರಕಲವಾಡಿ ನಾಗೇಂದ್ರ ಬೇಸರ ವ್ಯಕ್ತಪಡಿಸಿದರು.
‘ನಮ್ಮ ದೇಶದಲ್ಲಿ 6,500 ಜಾತಿಗಳಿವೆ. ಬಸವಣ್ಣ ಅವರು ಜಾತಿ ತಾರತಮ್ಯ ಹೋಗಲಾಡಿಸಲು ವಚನ ಚಳವಳಿ ಪ್ರಾರಂಭ ಮಾಡಿದರು. ಈ ವೇಳೆ ಅವರ ಆಪ್ತ ಸಹಾಯಕರಾಗಿ ಹಡಪದ ಅಪ್ಪಣ್ಣ ಅವರನ್ನು ನೇಮಕ ಮಾಡಿಕೊಂಡಿದ್ದರು. ಇವರು 246ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಎಲ್ಲ ವಚನಗಳು ಜಾತೀಯತೆ ವಿರುದ್ಧ ರಚನೆಯಾಗಿವೆ’ ಎಂದರು.
‘ಕೇಂದ್ರ ಸರ್ಕಾರ ಹಿಂದುಳಿದ ಸಮಾಜಗಳಿಗೆ ₹ 15 ಲಕ್ಷದವರೆಗೆ ಸಾಲ ಕೊಡಬೇಕು ಎನ್ನುವ ಚಿಂತನೆಯಲ್ಲಿದೆ. ಈ ತರಹದ ಜನ ದೇಶದೊಳಗೆ 150 ಕೋಟಿ ಇದ್ದಾರೆ. ಇವರಲ್ಲಿ ಬಂಡವಾಳ, ಭೂಮಿ ಇಲ್ಲದಿರುವ 37 ಕೋಟಿ ಜನರಿದ್ದಾರೆ ಎನ್ನುವುದನ್ನು ಸರ್ಕಾರ ಲೆಕ್ಕ ಹಾಕಿದೆ’ ಎಂದು ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.