ADVERTISEMENT

ಹಳ್ಳಿಕಾರ್‌ ತುಪ್ಪ ಬ್ರ್ಯಾಂಡ್‌: ಅರಣ್ಯ ಇಲಾಖೆ ಯೋಜನೆ

ಮಲೆ ಮಹದೇಶ್ವರ ವನ್ಯಧಾಮ: ಪೊನ್ನಾಚಿಯಲ್ಲಿ ಘಟಕ, ಸ್ಥಳೀಯರಿಗೆ ಉದ್ಯೋಗ, ಹೈನುಗಾರಿಕೆಗೆ ಪ್ರೋತ್ಸಾಹ

ಬಿ.ಬಸವರಾಜು
Published 27 ಜುಲೈ 2021, 2:36 IST
Last Updated 27 ಜುಲೈ 2021, 2:36 IST
ಹಾಲು ಹಾಗೂ ತುಪ್ಪ ತಯಾರಿಕಾ ಘಟಕ ನಿರ್ಮಾಣಕ್ಕಾಗಿ ಅರಣ್ಯ ಅಧಿಕಾರಿಗಳು ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದ ಚಿತ್ರ
ಹಾಲು ಹಾಗೂ ತುಪ್ಪ ತಯಾರಿಕಾ ಘಟಕ ನಿರ್ಮಾಣಕ್ಕಾಗಿ ಅರಣ್ಯ ಅಧಿಕಾರಿಗಳು ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದ ಚಿತ್ರ   

ಹನೂರು: ಕಾಡಂಚಿನ ಗ್ರಾಮಸ್ಥರು ಹಣ ಸಂಪಾದನೆಗಾಗಿ ಅರಣ್ಯದ ಮೇಲೆ ಅವಲಂಬಿಸುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಗ್ರಾಮದಲ್ಲೇ ಅವರು ಹೈನುಗಾರಿಕೆ ನಡೆಸಿ, ಅದರಿಂದ ಉತ್ತಮ ಆದಾಯಗಳಿಸುವಂತಹ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲು ಮಲೆ ಮಹದೇಶ್ವರ ವನ್ಯಧಾಮದ ಆಡಳಿತ ಯೋಜನೆ ರೂಪಿಸಿದೆ.

ಸಮುದಾಯದ ಭಾಗೀದಾರಿಕೆಯಲ್ಲಿ ದೇಸಿ ಹಸುವಾದ ಹಳ್ಳಿಕಾರ್‌ ತಳಿಯ ಹಾಲಿನಿಂದ ತುಪ್ಪವನ್ನು ತಯಾರಿಸಿ ಅದರ ಬ್ರ್ಯಾಂಡ್‌ ಸೃಷ್ಟಿಸಿ ಹೊರಗಡೆ ಮಾರಾಟ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಪೊನ್ನಾಚಿ ಗ್ರಾಮದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ‘ಹಳ್ಳಿಕಾರ್‌ ಸಾವಯವ ತುಪ್ಪ’ ಎಂಬ ಬ್ರ್ಯಾಂಡ್‌ನಡಿ ತುಪ್ಪ ತಯಾರಿಸಲು ಸಿದ್ಧತೆ ನಡೆಸಿದೆ.

ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಹಾಗೂ ಅರಣ್ಯವಾಸಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆಯುಈಗಾಗಲೇ ಮಲೆ ಮಹದೇಶ್ವರ ಪೊನ್ನಾಚಿ ಗ್ರಾಮದಲ್ಲಿ ಬಿದಿರು ಉತ್ಪನ್ನಗಳ ತಯಾರಿಕಾ ಘಟಕ ಆರಂಭಿಸಿದ್ದು, 100ರಷ್ಟು ಮಹಿಳೆಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಆದಾಯಕ್ಕಾಗಿ ಕೃಷಿ ಜೊತೆಗೆ ಹೈನುಗಾರಿಕೆಯನ್ನೂ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಹಳ್ಳಿಕಾರ್‌ ತಳಿಯ ಹಸುಗಳನ್ನು ಹೆಚ್ಚು ಸಾಕಲಾಗುತ್ತದೆ. ಇತ್ತಿಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಅರಣ್ಯಗಳು ವನ್ಯಧಾಮಗಳಾಗಿ ಪರಿವರ್ತಿತವಾದ ಮೇಲೆ ಕಠಿಣ ನಿಯಮ ಜಾರಿಗೊಂಡ ಕಾರಣದಿಂದ ಜಾನುವಾರುಗಳನ್ನು ಕಾಡಿಗೆ ಬಿಡುವುದಕ್ಕೆ ಆಗುತ್ತಿಲ್ಲ.

ಅರಣ್ಯದೊಳಗೆ ಹಸುಗಳನ್ನು ಮೇಯಿಸಲು ಅವಕಾಶ ಕಲ್ಪಿಸಬೇಕು, ದನಗಳ ದೊಡ್ಡಿ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂಬ ವಿಚಾರದಲ್ಲಿ ಏಳೆಂಟು ವರ್ಷಗಳಿಂದಲೂ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತರು ನಡೆಸುತ್ತಿರುವ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವ ಮೂಲಕ ಅರಣ್ಯದ ಮೇಲಿನ ಅವರ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಇಲಾಖೆ ಈ ಯೋಜನೆ ಕೈಗೆತ್ತಿಕೊಂಡಿದೆ.

‌ಪೊನ್ನಾಚಿ ಗ್ರಾಮದಲ್ಲಿ ತುಪ್ಪ ತಯಾರಿಕಾ ಘಟಕ ತಲೆ ಎತ್ತಲಿದೆ. ಪೊನ್ನಾಚಿ ಗ್ರಾಮದಲ್ಲಿ 1,500ರಷ್ಟು ಹಳ್ಳಿಕಾರ್‌ ಹಸುಗಳಿವೆ. ಈ ಗ್ರಾಮ ಮಾತ್ರವಲ್ಲದೇ, ಸುತ್ತಮುತ್ತಲಿನ ಗ್ರಾಮದವರೂ ಈ ಯೋಜನೆಯ ಸದುಪಯೋಗ ಪಡೆಯಬಹುದು. ಅರಣ್ಯ ಅಧಿಕಾರಿಗಳು ಈಗಾಗಲೇ ಪೊನ್ನಾಚಿ ಗ್ರಾಮದಲ್ಲಿ ಸಭೆ ನಡೆಸಿ ಗ್ರಾಮಸ್ಥರ ಒಪ್ಪಿಗೆಯನ್ನೂ ಪಡೆದಿದ್ದಾರೆ.

‘ರೈತರಿಂದ ನೇರವಾಗಿ ಹಾಲನ್ನು ಖರೀದಿಸಿ ಅದರಲ್ಲಿ ತುಪ್ಪ ತಯಾರಿಸಲಾಗುವುದು. ತಯಾರಿಸಿದ ತುಪ್ಪವನ್ನು “ಹಳ್ಳಿಕಾರ್ ಸಾವಯವ ತುಪ್ಪ” ಎಂಬ ಹೆಸರಿನಡಿ ಮಾರಾಟ ಮಾಡಲಾಗುವುದು. ಇದನ್ನು ಸಂಪೂರ್ಣವಾಗಿ ಸಾವಯವಾಗಿ ತಯಾರಿಸುವುದರಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ಬೇಡಿಕೆ ಇರಲಿದೆ. ತುಪ್ಪ ಮಾತ್ರವಲ್ಲದೇ ಹಾಲನ್ನು ಪ್ಯಾಕಿಂಕ್‌ ಮಾಡಿ ಮಾರಾಟ ಮಾಡುವುದಕ್ಕೂ ಅವಕಾಶ ಇದೆ’ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಘಟಕ ನಿರ್ಮಾಣಕ್ಕೆ ₹ 20 ಲಕ್ಷ
‘ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ತುಪ್ಪ ಹಾಗೂ ಹಾಲಿನ ಪ್ಯಾಕಿಂಗ್ ಯಂತ್ರಗಳಿಗೆ ₹10 ಲಕ್ಷ ಹಾಗೂ ಕಟ್ಟಡ ನಿರ್ಮಾಣಕ್ಕೆ ₹10 ಲಕ್ಷ ಹಣ ಬೇಕಾಗಿದೆ. ಈ ಯೋಜನೆಯ ಬಗ್ಗೆ ಕೆಲವು ದಾನಿಗಳಿಗೆ ಮಾಹಿತಿ ನೀಡಲಾಗಿದ್ದು, ಇಷ್ಟು ಮೊತ್ತವನ್ನು ಆ ದಾನಿಗಳು ಮುಂದೆ ಬಂದಿದ್ದಾರೆ. ಕೋವಿಡ್ನಿಂದಾಗಿ ಯೋಜನೆ ಕೊಂಚ ತಡವಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ ಇದಕ್ಕೆ ಚಾಲನೆ ದೊರೆಯಲಿದೆ’ ಎಂದು ವಿ. ಏಡುಕುಂಡಲು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹುಲ್ಲು ಬೆಳೆಸಲು ಪ್ರೋತ್ಸಾಹ: ರೈತರು ಹಸುಗಳನ್ನು ಕಾಡಿನೊಳಗೆ ಮೇಯಿಸಲು ಕಳುಹಿಸುವ ಬದಲಾಗಿ ತಮ್ಮ ಜಮೀನುಗಳಲ್ಲೇ ಹುಲ್ಲು ಬೆಳೆಸಲು ಅರಣ್ಯ ಇಲಾಖೆ ವತಿಯಿಂದ ಪ್ರೋತ್ಸಾಹ ನೀಡಲು ಇಲಾಖೆ ಚಿಂತಿಸಿದೆ. ಮೂವರು ಅಥವಾ ನಾಲ್ಕು ರೈತರ ಜಮೀನುಗಳಿಗೆ ಅನುಕೂಲವಾಗುವಂತೆ ಒಂದು ಕೊಳವೆ ಬಾವಿ ಕೊರೆಸಿ ನೀರಿನ ವ್ಯವಸ್ಥೆ ಕಲ್ಪಿಸಲೂ ಅದು ಯೋಜನೆ ರೂಪಿಸಿದೆ.

--

ಈ ಯೋಜನೆಯಿಂದ ಕಾಡಂಚಿನ ಗ್ರಾಮದ ರೈತರು ಆರ್ಥಿಕವಾಗಿ ಸಬಲರಾಗಲಿದ್ದರೆ, ಮಾತ್ರವಲ್ಲದೇ ಗ್ರಾಮದಲ್ಲಿ ಉದ್ಯೋಗವೂ ಸೃಷ್ಟಿಯಾಗಲಿದೆ.
-ವಿ.ಏಡುಕುಂಡಲು, ಡಿಸಿಎಫ್‌, ಮಲೆಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.