ADVERTISEMENT

ಗಾಂಧಿ ಗ್ರಾಮ ಪುರಸ್ಕಾರ: ಹಂಗಳಕ್ಕೆ ಒಲಿಯುತ್ತಿರುವುದು ನಾಲ್ಕನೇ ಬಾರಿ

ಮಲ್ಲೇಶ ಎಂ.
Published 30 ಸೆಪ್ಟೆಂಬರ್ 2019, 19:45 IST
Last Updated 30 ಸೆಪ್ಟೆಂಬರ್ 2019, 19:45 IST
ಹಂಗಳ ಗ್ರಾಮ ಪಂಚಾಯಿತಿ ಕಚೇರಿ
ಹಂಗಳ ಗ್ರಾಮ ಪಂಚಾಯಿತಿ ಕಚೇರಿ   

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ನಾಲ್ಕನೇ ಬಾರಿಗೆ ಒಲಿದಿದೆ. ಇದಕ್ಕೂ ಮೊದಲು 2013–14, 2015–16, ಮತ್ತು 2017-18‌ರಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿತ್ತು.

ಈ ವರ್ಷ ತಾಲ್ಲೂಕಿನ ಬೇಗೂರು ಹೋಬಳಿಯ ರಾಘವಾಪುರ ಹಾಗೂ ಹಂಗಳ ಹೋಬಳಿಯ ಪುತ್ತನಪುರ ಗ್ರಾಮ ಪಂಚಾಯಿತಿಗಳು ಪ್ರಶಸ್ತಿಗಾಗಿ ಪ್ರಯತ್ನ ನಡೆಸಿದ್ದವು.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ, ಶೌಚಾಲಯ ನಿರ್ಮಾಣ, ಸ್ವಚ್ಛತೆ, ತೆರಿಗೆ ವಸೂಲಾತಿ ಪ್ರಗತಿ, ಸಭೆಗಳ ಆಧಾರದಲ್ಲಿ ಗ್ರಾಮ ಪಂಚಾಯಿತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.

ADVERTISEMENT

‘2017–18ನೇ ಸಾಲಿನಲ್ಲಿ ಹಂಗಳ ಗ್ರಾಮ ಪಂಚಾಯಿತಿ ತಾಲ್ಲೂಕಿನಲ್ಲೇ ಅಧಿಕ ತೆರಿಗೆ ವಸೂಲಿ ಮಾಡಿತ್ತು. ಇತರೆ ಯೋಜನೆಗಳ ಸದ್ಬಳಕೆ ಹಾಗೂ ಈ ಸಾಲಿನ ಪ್ರಗತಿಯಲ್ಲೂ ಮುಂಚೂಣಿಯಲ್ಲಿತ್ತು. ಇದಕ್ಕಾಗಿ ಜಿಲ್ಲಾ ಪಂಚಾಯಿತಿ 150 ಅಂಕಗಳಿಗೆ 125 ಅಂಕಗಳನ್ನು ನೀಡಿತ್ತು. ಪುರಸ್ಕಾರಕ್ಕೆ ಆಯ್ಕೆಯಾಗಲು ಇದು ಕೂಡ ಕಾರಣ. ನರೇಗಾ ಮತ್ತು ಸ್ವಚ್ಛ ಭಾರತ್ ಯೋಜನೆಯಲ್ಲಿ ಮನೆ ಮನೆಗೆ ತೆರಳಿ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರಯತ್ನ ನಡೆಸಲಾಗಿದೆ’ ಎಂದುಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಬಯಲು ಬಹಿರ್ದೆಸೆಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ. ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಒಟ್ಟಾಗಿ ಕೆಲಸ ಮಾಡಿದ್ದಕ್ಕೆ ಈ ಪುರಸ್ಕಾರ ಲಭ್ಯವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಜೊತೆ ಮಾತನಾಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್‌ ಅವರು, ‘ಗ್ರಾಮಸ್ಥರ ನೆರವಿನಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. ಗ್ರಾಮಸ್ಥರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

*
ಗ್ರಾಮದಲ್ಲಿ ಮೂಲಸೌಕರ್ಯ ಕೊರತೆ ಕಂಡು ಬರದಂತೆ ಸಿಬ್ಬಂದಿ ಕಾರ್ಯನಿರ್ವಹಿದ್ದಾರೆ, ಸ್ವಚ್ಚತೆ, ಬಯಲು ಶೌಚಾಲಯ ಮುಕ್ತ ಗುರಿ ಸಾಧಿಸಲು ಗ್ರಾಮಸ್ಥರು ಸಹಕಾರ ನೀಡಿದ್ದಾರೆ
- ಕುಮಾರಸ್ವಾಮಿ, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.