ADVERTISEMENT

ಹನೂರು | ಕಾವೇರಿ ವನ್ಯಧಾಮ: ವ್ಯಕ್ತಿ ಅನುಮಾನಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 2:29 IST
Last Updated 15 ಅಕ್ಟೋಬರ್ 2025, 2:29 IST
ವೀರಣ್ಣ, ಮೃತ ವ್ಯಕ್ತಿ
ವೀರಣ್ಣ, ಮೃತ ವ್ಯಕ್ತಿ   

ಹನೂರು: ಇಂಡಿಗನತ್ತ ಗ್ರಾಮದ ವೀರಣ್ಣ ಎಂಬುವವರ ಮೃತದೇಹ ತಾಲ್ಲೂಕಿನ ಕಾವೇರಿ ವನ್ಯಧಾಮದ ಇಂಡಿಗನತ್ತ ಬೀಟ್‌ನ ಪಡಸಲನತ್ತ ಅರಣ್ಯ ಪ್ರದೇಶದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತ ವ್ಯಕ್ತಿ ವೀರಣ್ಣ ಎಂದು ತಿಳಿದುಬಂದಿದೆ. ವೀರಣ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪುತ್ರ ನಾಗರಾಜು ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದೂರಿನಲ್ಲಿ ಏನಿದೆ: ಸಾವಿಗೆ ಮುರುಗೇಶ್ ಎಂಬಾತ ಕಾರಣ ಎಂದು ತಾವುನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ತಂದೆ ವೀರಣ್ಣ ಪಡಸಲನತ್ತ ಗ್ರಾಮ ಸಮೀಪದ ಅರಣ್ಯದಲ್ಲಿ ಜಾನುವಾರು ಮೇಯಿಸುವಾಗ ಮುರುಗೇಶ ಎಂಬಾತ ಹಲ್ಲೆ ನಡೆಸಿದ್ದಾನೆ. ಬಳಿಕ ತಂದೆ ನಾಪತ್ತೆಯಾಗಿದ್ದು ಎರಡು ದಿನಗಳ ನಂತರ ದನದ ದೊಡ್ಡಿ ಹಾಕಿಕೊಂಡಿದ್ದ 1 ಕಿ.ಮೀ ದೂರದಲ್ಲಿ ಶವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುರುಗೇಶ ಹಲ್ಲೆ ಮಾಡಿದ್ದರಿಂದ ತಂದೆ ವೀರಣ್ಣ ನೇಣುಹಾಕಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಮತ್ತೆ ತಲೆಎತ್ತಿದ ದನದ ದೊಡ್ಡಿ: 

ತಾಲ್ಲೂಕಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮತ್ತೆ ಅರಣ್ಯದೊಳಗೆ ದನದ ದೊಡ್ಡಿಗಳು ತಲೆ ಎತ್ತಿರುವುದು ವೀರಣ್ಣ ಅವರ ಸಾವಿನ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಇಂಡಿಗನತ್ತ ಗ್ರಾಮದ ಹಲವರು ಕಾವೇರಿ ವನ್ಯಧಾಮದ ಗೋಪಿನಾಥಂ ವನ್ಯಜೀವಿ ವಿಭಾಗದ ಅರಣ್ಯದೊಳಗೆ ದನದ ದೊಡ್ಡಿ ನಿರ್ಮಿಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಣಿಗಳಿಗೆ ವಿಷವಿಕ್ಕುತ್ತಿರುವ ಪ್ರಕರಣ ನಡೆಯುತ್ತಿರುವ ಹೊತ್ತಿನಲ್ಲಿ ಅರಣ್ಯದೊಳಗೆ ದನದ ದೊಡ್ಡಿಗಳನ್ನು ಹಾಕಲು ಅವಕಾಶ ನೀಡಿರುವುದು ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಲು ಕಾರಣವಾಗಲಿದೆ ಎಂದು ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯೆ:

 ಅರಣ್ಯದೊಳಗೆ ದನಗಾಹಿಯೊಬ್ಬರು ನೇಣು ಹಾಕಿಕೊಂಡಿರುವ ವಿಚಾರ ಗಮನಕ್ಕೆ ಬಂದಿದ್ದು ದನದ ದೊಡ್ಡಿಯನ್ನು ಅರಣ್ಯದೊಳಗೆ ಹಾಕಿಕೊಂಡಿದ್ದರೇ ಎಂದು ಪರಿಶೀಲಿಸಲಾಗುವುದು. ಮಾನವ ಮತ್ತು ವನ್ಯಜೀವಿ ಸಂಘರ್ಷದ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿಕೊಟ್ಟು ಅರಣ್ಯದೊಳಗಿರುವ ದೊಡ್ಡಿಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾವೇರಿ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮರಿಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.