ADVERTISEMENT

ಹನೂರು | ಮದ್ಯದಂಗಡಿ ಸ್ಥಳಾಂತರಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:58 IST
Last Updated 28 ಜನವರಿ 2026, 7:58 IST
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ರಸ್ತೆ ಸಮೀಪದಲ್ಲಿರುವ ಮದ್ಯದಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಪ್ರಭಾರ ಉಪ ವಿಭಾಗಾಧಿಕಾರಿ ಬಸವರಾಜು ಭೇಟಿ ನೀಡಿ ಮನವಿ ಆಲಿಸಿದರು 
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ರಸ್ತೆ ಸಮೀಪದಲ್ಲಿರುವ ಮದ್ಯದಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಪ್ರಭಾರ ಉಪ ವಿಭಾಗಾಧಿಕಾರಿ ಬಸವರಾಜು ಭೇಟಿ ನೀಡಿ ಮನವಿ ಆಲಿಸಿದರು    

ಹನೂರು: ರಸ್ತೆಯ ಸನಿಹದಲ್ಲಿರುವ ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕೆಂದು 11 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಕೊಳ್ಳೇಗಾಲ ತಹಶೀಲ್ದಾರ್ ಹಾಗೂ ಪ್ರಭಾರ ಉಪ ವಿಭಾಗಾಧಿಕಾರಿ ಬಸವರಾಜ್ ಮಂಗಳವಾರ ಭೇಟಿ ನೀಡಿದರು.

ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಕಾರರ ಮನವಿ ಸ್ವೀಕರಿಸಿ ನಂತರ ಮಾತನಾಡಿದ ಅವರು, ರಸ್ತೆ ಸನಿಹದಲ್ಲಿರುವ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದೆ. ಮುಂದಿನ ದಿನಗಳಲ್ಲಿ ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಸಹ ಪ್ರತಿಭಟನೆ ಕೈಬಿಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಪ್ರತಿಭಟನಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೂ ಸಹ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ADVERTISEMENT

ಪ್ರತಿಭಟನೆಯ ನೇತೃತ್ವ ವಹಿಸಿರುವ ಮರುದ ಮಾತನಾಡಿ, ‘ನನ್ನ ಕುಟುಂಬ, ನನ್ನ ವೈಯಕ್ತಿ ಹಿತಕ್ಕೆ ಸ್ಥಳಾಂತರ ಮಾಡಿಕೊಡಿ ಎಂದು ಕೇಳುತ್ತಿಲ್ಲ. ಸಮಾಜದ ಹಿತದೃಷ್ಟಿಗಾಗಿ ಮದ್ಯದ ಅಂಗಡಿಗಳನ್ನು ರಸ್ತೆಯಿಂದ ಕನಿಷ್ಠ 100 ಮೀಟರ್ ಅಂತರಕ್ಕೆ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿದ್ದೇನೆ. ರಸ್ತೆ ಸನಿಹದಲ್ಲಿರುವಂತಹ ಮದ್ಯದಂಗಡಿಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಭ್ಯಸ್ತರಿಗೆ ತುಂಬ ಅನಾನುಕೂಲ ಉಂಟಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕು’ ಎಂದು ಒತ್ತಾಯ ಮಾಡಿದರು.

12ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ:

ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ, ಮಕ್ಕಳಿಗೆ, ವಯೋವೃದ್ಧರಿಗೆ, ಪ್ರಯಾಣಿಕರಿಗೆ ಅನನುಕೂಲ ಉಂಟಾಗಲಿದೆ ಎಂದು ಮರುದ ಭುವನ ಸಹಿತ, ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ 12ನೇ ದಿನಕ್ಕೆ ಕಾಲಿಟ್ಟಿದೆ.

ಮದ್ಯದ ಅಂಗಡಿ ಸ್ಥಳಾಂತರಗೊಳ್ಳುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲವೆಂದು ಪಟ್ಟು ಹಿಡಿದು ಗ್ರಾಮಸ್ಥರು ಹಗಲು–ರಾತ್ರಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.