
ಹನೂರು: ತಾಲ್ಲೂಕಿನ ನಾಗಣ್ಣ ನಗರವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಇಂಡಿಯನ್ ಆಯಿಲ್ ಬಂಕ್ ಹತ್ತಿರ ಜಮಾಯಿಸಿದ ಪ್ರತಿಭಟನನಿರತರು ತಮ್ಮ ಹಕ್ಕು ಮತ್ತು ಬೇಡಿಕೆಗಳನ್ನು ಈಡೇರಿಸುವಂತ ನಾಮಫಲಕ ಹಿಡಿದು ಸರ್ಕಾರ, ಜಿಲ್ಲಾಡಳಿತ, ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರ ಕೂಗಿ, ಖಾಸಗಿ ಬಸ್ ನಿಲ್ದಾಣ ಹಾಗೂ ಡಾ.ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿದರು. ಈ ವೇಳೆ ಕೆಲ ಕಾಲ ತಹಶೀಲ್ದಾರ್ ಕಚೇರಿ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು.
ಚುನಾವಣೆ ಬಹಿಷ್ಕಾರ: ನಾಗಣ್ಣ ನಗರ ಗ್ರಾಮವನ್ನು ಕಂದಾಯ ಗ್ರಾಮ ಮಾಡುವುದು ಹಾಗೂ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸದೆ ಹೋದರೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನ ಸ್ಥಳಕ್ಕೆ ತಹಶೀಲ್ದಾರ್ ಕೆ.ಎನ್. ಚೈತ್ರಾ ಅವರು ಧಾವಿಸಿದಾಗ ಪ್ರತಿಭಟನೆಯ ಮುಂದಾಳತ್ವ ವಹಿಸಿದ ಯುವ ಮುಖಂಡ ಮಂಜುನಾಥ್ ಮಾತನಾಡಿ, ನಾಗಣ್ಣ ನಗರವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸದೆ, ವಸತಿ, ಜಮೀನಿನ ಆಸ್ತಿಯ ಡಿಮ್ಯಾಂಡ್ ರಿಜಿಸ್ಟರ್ ಹಾಗೂ ಇಸ್ವತ್ತು ಸೌಲಭ್ಯವನ್ನು ಗ್ರಾಮ ಪಂಚಾಯಿತಿಯವರು ಮಾಡಿಕೊಡುತ್ತಿಲ್ಲ. ಗ್ರಾಮವು ರಾಮಾಪುರ ಗ್ರಾ.ಪಂ. ವ್ಯಾಪ್ತಿಗೆ ಸೇರಿದ್ದು, ಈ ಗ್ರಾಮಕ್ಕೆ ಮೂಲಸೌಕರ್ಯ ಇಲ್ಲದಿರುವುದು ಗ್ರಾಮ ಪಂಚಾಯಿತಿಯ ತಂತ್ರಾಂಶದಲ್ಲಿ ಅಂದರೆ ಪಂಚತಂತ್ರದಲ್ಲಿ ಸೇರದೆ ತೊಡಕಾಗಿದೆ. ನಮ್ಮ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ಹಾಗೂ ಶಾಲಾ ಕಟ್ಟಡ ಶಿಥಿಲಾಸ್ಥಿತಿಯಲ್ಲಿದ್ದು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದರು.
ಪ್ರತಿಭಟನನಿರತರ ಮನವಿ ಆಲಿಸಿದ ತಹಶೀಲ್ದಾರ್ ಚೈತ್ರ ಅವರು, ನಾಗಣ್ಣ ನಗರವನ್ನು ಕಂದಾಯ ಗ್ರಾಮವನ್ನಾಗಿ ಮಾಡುವ ಬಗ್ಗೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ನಿಮ್ಮ ಗ್ರಾಮ ಅಜ್ಜೀಪುರ ಹಾಗೂ ರಾಮಾಪುರ ಗ್ರಾಮ ಪಂಚಾಯಿತಿಗೆ ಸೇರಿದೆಯೋ ಎಂಬುದಷ್ಟೇ ನಿರ್ಣಯ ಆಗಬೇಕಾಗಿದೆ. ಈ ಸಂಬಂಧ ಜಿ.ಪಂ. ಹಾಗೂ ತಾ.ಪಂ.ಹಿರಿಯ ಅಧಿಕಾರಿಗಳ ನಿರ್ದೇಶನ ಬಂದ ತಕ್ಷಣ ಕ್ರಮಕೈಗೊಳ್ಳುವ ಮೂಲಕ ನಿಮ್ಮ ಬಹು ದಿನಗಳ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮುನಿಸ್ವಾಮಿ, ಕುಮಾರ್, ಗೋವಿಂದರಾಜು, ಪಳನಿ, ಮಣಿ, ಮಾದೇಶ್, ಷಣ್ಮುಖ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.