ADVERTISEMENT

ಮಹಿಳೆಯೊಂದಿಗೆ ಅಶ್ಲೀಲ ವರ್ತನೆ; ಹೆಡ್‌ ಕಾನ್‌ಸ್ಟೆಬಲ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 12:34 IST
Last Updated 29 ಜನವರಿ 2023, 12:34 IST
ಮುನಿಯಪ್ಪ
ಮುನಿಯಪ್ಪ   

ಚಾಮರಾಜನಗರ: ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಚಾಮರಾಜನಗರ ಪೂರ್ವ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಮುನಿಯಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಎರಡು ದಿನಗಳ ಹಿಂದೆ ಸಿಮ್ಸ್‌ ಆಸ್ಪತ್ರೆಗೆ ಬಂದಿದ್ದ ಹನೂರು ತಾಲ್ಲೂಕಿನ ಮಹಿಳೆಯೊಬ್ಬರನ್ನು ಮುನಿಯಪ್ಪ ಅವರು ತಮ್ಮ ವಸತಿಗೃಹಕ್ಕೆ ಕರೆದುಕೊಂಡು ಹೋಗಿ ಅವರೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದರು ಎಂದು ಆರೋಪಿಸಲಾಗಿದೆ. ಆ ಬಳಿಕ ಅಸ್ವಸ್ಥಗೊಂಡ ಅವರನ್ನು ಸಿಮ್ಸ್‌ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದರು. ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಸಂಬಂಧ ಮಹಿಳೆ ದೂರು ನೀಡಿಲ್ಲ. ಆದರೆ, ಆಸ್ಪತ್ರೆಯಿಂದ ಠಾಣೆಗೆ ಬಂದ ಎಂಎಲ್‌ಸಿ (ಮೆಡಿಕಲ್‌ ಲೀಗಲ್‌ ಕೇಸ್‌) ಆಧಾರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ಅವರು ಮುನಿಯಪ್ಪ ಅವರನ್ನು ಅಮಾನತು ಮಾಡಿ ಶನಿವಾರ ಸಂಜೆ ಆದೇಶ ಹೊರಡಿಸಿದ್ದಾರೆ.

ADVERTISEMENT

ಪ್ರಕರಣದ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ವಿಚಾರಿಸಿದಾಗ, ‘ಮಹಿಳೆ ಅಸ್ವಸ್ಥಗೊಂಡು ಬಂದಿರುವುದು ನಿಜ. ನಾವು ಚಿಕಿತ್ಸೆಯನ್ನೂ ನೀಡಿದ್ದೇವೆ. ತಾನು ಬಿದ್ದು ಅಸ್ವಸ್ಥಗೊಂಡೆ ಎಂದು ಹೇಳಿಕೆ ನೀಡಿದ್ದಾರೆ’ ಎಂದರು.

‘ಮಹಿಳೆ ನಮಗೆ ದೂರು ಕೊಟ್ಟಿಲ್ಲ. ಆದರೆ ನಮ್ಮ ಸಿಬ್ಬಂದಿಯೊಬ್ಬರು ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವ ಮಾಹಿತಿ, ಅದಕ್ಕೆ ಪೂರಕ ದಾಖಲೆ ನಮಗೆ ಸಿಕ್ಕಿದೆ. ಹಾಗಾಗಿ, ಸ್ವಯಂ ಪ್ರೇರಿತವಾಗಿ ಈ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ವೈದ್ಯರು ನಗರದ ಪಟ್ಟಣ ಠಾಣೆಗೆ ಮಹಿಳೆ ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಪ್ರಕರಣ ಮಹಿಳಾ ಠಾಣೆ ವ್ಯಾಪ್ತಿಗೆ ಬರುವುದರಿಂದ, ಮಹಿಳಾ ಠಾಣೆಯ ಅಧಿಕಾರಿಗಳ ಗಮನಕ್ಕೆ ಪಟ್ಟಣ ಪೊಲೀಸರು ಈ ವಿಚಾರ ತಂದಿದ್ದರು ಎಂದು ಗೊತ್ತಾಗಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.