ADVERTISEMENT

ಕೆ.ಗುಡಿ: ಸೋಲಿಗರ ಆರೋಗ್ಯ ತಪಾಸಣೆ

ಮುಟ್ಟಿನ ಸಂದರ್ಭದಲ್ಲಿ ನೈರ್ಮಲ್ಯ: ಮಹಿಳೆಯರಲ್ಲಿ ಅರಿವು, ಮುಟ್ಟಿನ ಕಪ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 15:20 IST
Last Updated 22 ಜನವರಿ 2023, 15:20 IST
ಕೆ.ಗುಡಿಯಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದ ಸೋಲಿಗರು
ಕೆ.ಗುಡಿಯಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದ ಸೋಲಿಗರು   

ಚಾಮರಾಜನಗರ: ಬೆಂಗಳೂರಿನ ಭರವಸೆ ಟ್ರಸ್ಟ್ ಹಾಗೂ ಸೂರ್ಯ ಫೌಂಡೇಶನ್ ಸಹಯೋಗದಲ್ಲಿ ಬಿಆರ್‌ಟಿ ಅರಣ್ಯ ವ್ಯಾಪ್ತಿಯ ತಾಲ್ಲೂಕಿನ ಕೆ.ಗುಡಿಯಲ್ಲಿ ಸೋಲಿಗರಿಗಾಗಿ ಭಾನುವಾರ ಆರೋಗ್ಯ ತಪಾಸಣಾ ಶಿಬಿರ ಹಾಗೂ ಏಡ್ಸ್‌ ಜಾಗೃತಿ ಕಾರ್ಯಕ್ರಮ ನಡೆಯಿತು.

ಖ್ಯಾತ ವೈದ್ಯ ಡಾ.ಆಂಜನಪ್ಪ ನೇತೃತ್ವದಲ್ಲಿ ಶಿಬಿರದಲ್ಲಿ ಸುತ್ತಮುತ್ತಲಿನ ಪೋಡುಗಳ 250ಕ್ಕೂ ಹೆಚ್ಚು ಸೋಲಿಗರು ಭಾಗವಹಿಸಿದ್ದರು.

ಐವರು ವೈದ್ಯರ ತಂಡವು ಮಧುಮೇಹ, ರಕ್ತದೊತ್ತಡ, ಇಸಿಜಿ ಪರೀಕ್ಷೆ ನಡೆಸಿತು. ಔಷಧವನ್ನು ಉಚಿತವಾಗಿ ವಿತರಿಸಲಾಯಿತು.

ADVERTISEMENT

ಇದಕ್ಕೂ ಮೊದಲು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಆಂಜನಪ್ಪ, ಆದಿವಾಸಿ ಸಮುದಾಯದವರಿಗೆ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದಕ್ಕೆ ಭರವಸೆ ತಂಡದ ಸದಸ್ಯರನ್ನು ಅಭಿನಂದಿಸಿದರು.

ಆರೋಗ್ಯದ ಕಾಪಾಡಿಕೊಳ್ಳುವ ಅಗತ್ಯ, ಏಡ್ಸ್, ಕ್ಯಾನ್ಸರ್‌ ಸೇರಿದಂತೆ ಹಲವು ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರು. ಕುಡಿತ, ಬೀಡಿ, ಸಿಗರೇಟ್‌ಗಳಿಂದಾಗುವ ಸಮಸ್ಯೆಗಳನ್ನು ವಿವರಿಸಿ, ಅವುಗಳಿಂದ ದೂರ ಇರುವಂತೆ ಕಿವಿಮಾತು ಹೇಳಿದರು.

ಸೋಲಿಗರಿಗೆ ಉಚಿತವಾಗಿ ಹರ್ನಿಯಾ ಚಿಕಿತ್ಸೆ, ಅಪೆಂಟಿಸೈಟಿಸ್‌ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು. ಕಿಮ್ಸ್‌ ಆಸ್ಪತ್ರೆಯಲ್ಲಿ ಎಲ್ಲ ಚಿಕಿತ್ಸೆಗಳನ್ನು ರಿಯಾಯಿತಿ ದರದಲ್ಲಿ ಮಾಡಿಸಿಕೊಡುವುದಾಗಿ ಹೇಳಿದರು.

ದೂರದ ಪೋಡುಗಳಿಂದ ಸೋಲಿಗರನ್ನು ಕರೆತರಲು ಬಸ್ ವ್ಯವಸ್ಥೆಯನ್ನು ಭರವಸೆ ತಂಡ ಮಾಡಿತ್ತು.

ನೈರ್ಮಲ್ಯ ಜಾಗೃತಿ: ಇದೇ ಸಂದರ್ಭದಲ್ಲಿ ಸೋಲಿಗ ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಭರವಸೆ ತಂಡದ ಸದಸ್ಯರಾದ ಪವಿತ್ರ ಕೃಷ್ಣ ಹಾಗೂ ಪವಿತ್ರ ರಮೇಶ್ ನೆರೆದಿದ್ದ 50ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ, ಮುಟ್ಟು ನೈರ್ಮಲ್ಯದ ಜೊತೆಗೆ ಪರಿಸರ ಸ್ನೇಹಿ ಮುಟ್ಟಿನ ಕಪ್ ಬಳಕೆ ಕುರಿತು ಮನವರಿಕೆ ಮಾಡಿಕೊಟ್ಟರು.

ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಮುಟ್ಟಿನ ಕಪ್‌ಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.