ADVERTISEMENT

ರಾಜ್ಯದಾದ್ಯಂತ ಆಸ್ಪತ್ರೆ ವಾಸ್ತವ್ಯ: ಶ್ರೀರಾಮುಲು

ಐದು ಗಂಟೆ ತಡವಾಗಿ ಬಂದ ಸಚಿವ, ರೋಗಿಗಳ ಕುಂದುಕೊರತೆ ಆಲಿಕೆ, ಅಧಿಕಾರಿಗಳೊಂದಿಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 9:32 IST
Last Updated 26 ಸೆಪ್ಟೆಂಬರ್ 2019, 9:32 IST
ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಹೂಡಿದರು
ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಹೂಡಿದರು   

ಚಾಮರಾಜನಗರ: ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಜನರ ಸಮಸ್ಯೆಗಳನ್ನು ತಿಳಿಯುವುದಕ್ಕಾಗಿ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ರಾತ್ರಿ ವಾಸ್ತವ್ಯ ಮಾಡುವುದಾಗಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಮಂಗಳವಾರ ಹೇಳಿದರು.

ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಲು ಬಂದಿದ್ದ ಅವರು, ‘ಪ್ರವಾಸ ಮಾಡುವ ಸಂದರ್ಭದಲ್ಲಿ ಪ್ರವಾಸಿ ಮಂದಿರ, ಅತಿಥಿಗೃಹಗಳಲ್ಲಿ ರಾತ್ರಿ ಉಳಿದುಕೊಳ್ಳುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೇ ವಾಸ್ತವ್ಯ ಮಾಡುತ್ತೇನೆ. ಇದರಿಂದ ಆಸ್ಪತ್ರೆಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ರೋಗಿಗಳ ಸಮಸ್ಯೆಗಳನ್ನು ಹತ್ತಿರದಿಂದ ಕಾಣಬಹುದು’ ಎಂದರು.

ನಿಗದಿಯಂತೆ ಸಚಿವರು ಮಧ್ಯಾಹ್ನ 3.30ಕ್ಕೆ ಆಸ್ಪತ್ರೆಗೆ ಬರಬೇಕಿತ್ತು. ಆದರೆ, ಅವರು ನಗರ ತಲುಪುವಾಗ ರಾತ್ರಿ 7.30 ಕಳೆದಿತ್ತು. ನಂತರ ಪ್ರವಾಸಿ‌ ಮಂದಿರಕ್ಕೆ ತೆರಳಿ ಜಿಲ್ಲಾಧಿಕಾರಿ, ಇಲಾಖೆಯ ಅಧಿಕಾರಿಗಳು ಹಾಗೂ ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚೆ ನಡೆಸಿದರು.

ADVERTISEMENT

ಕಾದು ಕಾದು ಸುಸ್ತಾದ ಜನ: ಸಚಿವರು ಬರುತ್ತಾರೆ ಎಂದು ಜನ ಸಾಮಾನ್ಯರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಮಧ್ಯಾಹ್ನದಿಂದಲೇ ಕಾದು ಕುಳಿತಿದ್ದರು. ಸಂಜೆ ಆರು ಗಂಟೆಯಾದರೂ ಸಚಿವರು ಬರದೇ ಇದ್ದುದರಿಂದ ಕೆಲವರು ಮರಳಿದರು. ಜನರೊಂದಿಗೆ ಸಂವಾದ ನಡೆಸಲು ಆಸ್ಪತ್ರೆಯ ಆವರಣದಲ್ಲಿ ಶಾಮಿಯಾನ ಹಾಕಿ ವೇದಿಕೆ ಸಿದ್ಧಪಡಿಸಲಾಗಿತ್ತು. ರಾತ್ರಿಯಾಗಿದ್ದರೂ ಅರ್ಜಿ ಹಿಡಿದು ಜನರು ನಿಂತಿದ್ದರು. ಎಂಟೂವರೆ ಹೊತ್ತಿಗೆ ಆಸ್ಪತ್ರೆಗೆ ಬಂದ ಶ್ರೀರಾಮುಲು ಅವರು ವೇದಿಕೆಯತ್ತ ಸಾಗದೇ ನೇರವಾಗಿ ವಾರ್ಡ್‌ಗಳಿಗೆ ತೆರಳಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಇದರಿಂದ ಅರ್ಜಿ ಹಿಡಿದು ನಿಂತಿದ್ದ ಜನರು ನಿರಾಸೆ ಅನುಭವಿಸಬೇಕಾಯಿತು.

ಸಮಸ್ಯೆ ಆಲಿಕೆ: ಆಸ್ಪತ್ರೆಯ ಹಳೆಯ ಕಟ್ಟಡ ಹಾಗೂ ಹೊಸ ಕಟ್ಟದ ವಿವಿಧ ವಾರ್ಡ್‌ಗಳಿಗೆ ತೆರಳಿ ರೋಗಿಗಳಿಂದ ಆಸ್ಪತ್ರೆಯಲ್ಲಿನ ಸೌಕರ್ಯ ಹಾಗೂ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು. ಎಲ್ಲರಿಗೂ ಉತ್ತಮವಾಗಿ ಚಿಕಿತ್ಸೆ ನೀಡಬೇಕು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ವಿಶೇಷ ಕೊಠಡಿಯಲ್ಲಿ ವಾಸ್ತವ್ಯ: ಹೊಸ ಕಟ್ಟಡದ ಎರಡನೇ ಮಹಡಿಯ ಪ್ರಾತ್ಯಕ್ಷಿಕೆ ಕೊಠಡಿಯಲ್ಲಿ (ಡೆಮಾ‌ನ್ಸ್ಟ್ರೇಷನ್‌ ರೂಮ್‌) ಸಚಿವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಕೋಣೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ, ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚೆ ನಡೆಸಿ ಆಸ್ಪತ್ರೆಯ ಆಡಳಿತ, ಕಾರ್ಯನಿರ್ವಹಣೆ, ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.ಮಲಗುವುದಕ್ಕೂ ಮುನ್ನ ಶ್ರೀರಾಮುಲು ಅವರು ಬ್ರೆಡ್‌, ಹಾಲು ಬಾಳೆಹಣ್ಣು ಸೇವಿಸಿದರು.

ದಿಢೀರ್‌ ಭೇಟಿ: ಶ್ರೀರಾಮುಲು ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ರಾತ್ರಿ ವಾಸ್ತವ್ಯ ಹೂಡುವ ಮಾಹಿತಿ ಮಂಗಳವಾರ ಮಧ್ಯಾಹ್ನದ ಹೊತ್ತಿಗೆಯಷ್ಟೇ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿತ್ತು. ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಣೆಯಲ್ಲಿದ್ದುದು ವಿಶೇಷವಾಗಿತ್ತು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣ ರಾವ್‌, ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್‌.ಸಿ.ರವಿ, ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ರಾಜೇಂದ್ರ, ಜಿಲ್ಲಾಸ್ಪತ್ರೆಯ ಮುಖ್ಯಸರ್ಜನ್‌ ಡಾ.ರಘುರಾಮ್‌ ಸರ್ವೇಗಾರ, ಆಡಳಿತಾಧಿಕಾರಿ ಡಾ.ಕೃಷ್ಣಕುಮಾರ್‌, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌.ಬಾಲರಾಜು, ಬಿಜೆಪಿ ಮುಖಂಡ ರಾಮಚಂದ್ರ ಮತ್ತಿತರರು ಇದ್ದರು.

‘ಸಿದ್ದರಾಮಯ್ಯನವರ ಯೋಜಿತ ನಾಟಕ’

ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಅವರು ಜೈಲಿಗೆ ಹೋಗಿರುವುದರ ಹಿಂದೆ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೈವಾಡವಿದೆ. ಇದು ಅವರು ಯೋಜಿತವಾಗಿ ಆಡುತ್ತಿರುವ ನಾಟಕ’ ಎಂದು ಶ್ರೀರಾಮುಲು ಆರೋಪಿಸಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕಿತ್ತು. ತಾವು ವಿರೋಧ ಪಕ್ಷದ ನಾಯಕರಾಗಬೇಕಿತ್ತು. ಇದಕ್ಕಾಗಿ ಪೂರ್ವಯೋಜನೆ ಮಾಡಿ ಡಿಕೆಶಿ ಅವರನ್ನು ಜೈಲಿಗೆ ಕಳಿಸಿದ್ದಾರೆ’ ಎಂದು ಹೇಳಿದರು.

ಪ್ರಾಮಾಣಿಕವಾಗಿ ಕೆಲಸ: ಇದಕ್ಕೂ ಮುನ್ನ, ಉಪಮುಖ್ಯಮಂತ್ರಿ ಸ್ಥಾನ ಸಿಗದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ‘ದೇವರು ಕೊಟ್ಟ ಕೆಲಸವನ್ನು ಪಂಚಾಮೃತ ಎಂದು ತಿಳಿದು ಕೆಲಸ ಮಾಡಬೇಕು. ನಾನು ಮುಖ್ಯಮಂತ್ರಿ ಆಗಬೇಕು ಎಂದು ಜನರು ಹೇಳುತ್ತಾರೆ. ಆಗಲೂ ಸಾಧ್ಯವೇ? ಆರೋಗ್ಯ ಇಲಾಖೆ ಸಿಕ್ಕಿದೆ. ಇದರಲ್ಲಿ ನನಗೆ ತೃಪ್ತಿ ಸಿಕ್ಕಿದೆಯಾ ಎಂಬ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಕಾಯಾ ವಾಚ ಕೆಲಸ ಮಾಡುತ್ತೇನೆ. ಈ ಸ್ಥಾನವೂ ಶಾಶ್ವತವಲ್ಲ. ಸಿಕ್ಕಿರುವ ಹುದ್ದೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.