ADVERTISEMENT

ಗಾಳಿ ಮಳೆ; ಧರೆಗುರುಳಿದ ಬಾಳೆ

ಗುಂಡ್ಲುಪೇಟೆಯಲ್ಲಿ ಬಾಳೆ ಬೆಳೆದ ರೈತರು ಕಂಗಾಲು

ಮಲ್ಲೇಶ ಎಂ.
Published 30 ಮೇ 2025, 7:47 IST
Last Updated 30 ಮೇ 2025, 7:47 IST
ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದಲ್ಲಿ ಈಚೆಗೆ ಸುರಿದ ಬಿರುಗಾಳಿ ಮಳೆಗೆ ಬಾಳೆ ನೆಲಕಚ್ಚಿರುವ ದೃಶ್ಯ
ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದಲ್ಲಿ ಈಚೆಗೆ ಸುರಿದ ಬಿರುಗಾಳಿ ಮಳೆಗೆ ಬಾಳೆ ನೆಲಕಚ್ಚಿರುವ ದೃಶ್ಯ   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ 300 ಎಕರೆಯಷ್ಟು ಬಾಳೆ ಬೆಳೆ ನಾಶವಾಗಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಮುನ್ನವೇ ಮಳೆಗೆ ಆಹುತಿ ಆಗುತ್ತಿರುವುದನ್ನು ಕಂಡು ಬಾಳೆ ಬೆಳೆಗಾರರು ಮರುಗುತ್ತಿದ್ದಾರೆ.

ಕಳೆದವಾರ ಶುರುವಾದ ಮಳೆ ಬಿಡುವು ನೀಡದೆ ಸುರಿಯುತ್ತಿರುವುದು ಹಾಗೂ ಮಳೆಯ ಪ್ರಮಾಣಕ್ಕಿಂತ ಬಿರುಗಾಳಿಯ ಅಬ್ಬರ ಹೆಚ್ಚಾಗಿರುವುದು ಬಾಳೆ ಬೆಳೆ ನೆಲಕಚ್ಚಲು ಪ್ರಮುಖ ಕಾರಣವಾಗಿದೆ. ಮಳೆಗಾಲದ ಆರಂಭದಲ್ಲಿಯೇ ಶೇ 10ರಷ್ಟು ಬಾಳೆ ಬೆಳೆ ನಾಶವಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಬಾಳೆ ತಾಲ್ಲೂಕಿನ ಪ್ರಧಾನ ಬೆಳೆಗಳಲ್ಲಿ ಒಂದು. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಹಾಗೂ ಆದಾಯ ನೀಡುವ ಕಾರಣಕ್ಕೆ ಬಹಳಷ್ಟು ರೈತರು ಬಾಳೆಯನ್ನು ಬೆಳೆಯುತ್ತಾರೆ. ಬಾಳೆ ಬೆಳೆದು ಬಾಳು ಬೆಳಕಾಗಿಸಿಕೊಂಡವರೂ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗಾಳಿ ಮಳೆಗೆ ಬೆಳೆನಾಶ ಆತಂಕದ ನಡುವೆಯೂ ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ಬಾಳೆಗೆ ಹೆಚ್ಚಿನ ಒತ್ತು ನೀಡುತ್ತಾರೆ.

ADVERTISEMENT

ಹಂಗಳ, ತೆರಕಣಾಂಬಿ, ಬೇಗೂರು ಹಾಗೂ ಕಸಾಬಾ ಹೋಬಳಿಯಲ್ಲಿ ಹೆಚ್ಚಾಗಿ ಬಾಳೆ ಬೆಳೆಯಲಾಗುತ್ತದೆ. ಈ ವರ್ಷ ತಾಲ್ಲೂಕಿನಲ್ಲಿ 3,000 ಹೆಕ್ಟೇರ್‌ನಷ್ಟು ಬಾಳೆ ಬೆಳೆಯಲಾಗಿದೆ. ಕೆಲ ಭಾಗಗಳಲ್ಲಿ ಈಗಾಗಲೇ ಬಾಳೆ ಕಟಾವಿನ ಹಂತ ತಲುಪಿದ್ದು ಇದೇ ಹೊತ್ತಿಗೆ ಬಿರುಗಾಳಿ ಸಹಿತ ಮಳೆ ಸುರಿಯುತ್ತಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. 

ಜೋರು ಬಿರುಗಾಳಿ ಮಳೆಗೆ ಬೆಳೆದು ನಿಂತಿದ್ದ ಬಾಳೆಗಿಡಗಳು ಧರೆಗುರುಳುತ್ತಿವೆ. ರೋಗ ಬಾಧೆ, ಗೊಬ್ಬರ, ಕ್ರಿಮಿನಾಶಕಗಳ ದರ ಏರಿಕೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳದ ನಡುವೆಯೂ ಬಾಳೆ ಬೆಳೆದಿದ್ದ ರೈತರು ಬೆಳೆ ನಾಶದಿಂದ ಕಂಗಾಲಾಗಿದ್ದಾರೆ. ಫಸಲು ಕೈಸೇರುವ ಮುನ್ನ ಮಣ್ಣಾಗುತ್ತಿರುವುದು ನೋಡಿ ದುಃಖಿಸುತ್ತಿದ್ದಾರೆ. 

ಸದ್ಯ ಮಾರುಕಟ್ಟೆಯಲ್ಲಿ ಏಲಕ್ಕಿ ಹಾಗೂ ನೇಂದ್ರ ಬಾಳೆಗೆ ಉತ್ತಮ ದರ ಇದೆ. ಆದರೆ, ದರ ಹೆಚ್ಚಳದ ಲಾಭ ರೈತರಿಗೆ ದೊರೆಯುತ್ತಿಲ್ಲ. ಮಳೆಯಿಂದ ಕಟಾವಿಗೆ ಬಂದಿರುವ ಬೆಳೆ ಕಟಾವು ಆಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. 

ವಾತಾವರಣ ಗಮನಿಸದರೆ ಬಾಳೆ ಬೆಳೆ ಕೈ ಸೇರುತ್ತದೆ ಎಂಬ ನಂಬಿಕೆ ಇಲ್ಲ ಎನ್ನುತ್ತಾರೆ ಹಂಗಳ ಗ್ರಾಮದ ರೈತ ಮುಖಂಡ ಮಾಧು.

ಹಾನಿಯ ಮಾಹಿತಿ ಸಂಗ್ರಹ

ಹಂಗಳ ಕಲ್ಲಿಗೌಡನಹಳ್ಳಿ ಶಿವಪುರ ಚೌಡಹಳ್ಳಿ ಬೋಮ್ಮಲಾಪುರ ಅಂಕಹಳ್ಳಿ ಕುಂದುಕರೆ ಆಲತ್ತೂರು ಮಂಚಹಳ್ಳಿ ಗ್ರಾಮದಲ್ಲಿ ಬಾಳೆ ನಾಶವಾಗಿದ್ದು ತೋಟಗಾರಿಕಾ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿನೀಡಿ ನಷ್ಟದ ವಿವರವನ್ನು ಪರಿಹಾರ ಆ್ಯಪ್‌ನಲ್ಲಿ ನಮೂದಿಸಿದ್ದಾರೆ. ಶೀಘ್ರ ರೈತರಿಗೆ ಪರಿಹಾರ ಧನ ದೊರೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.