ಯಳಂದೂರು: ತಾಲ್ಲೂಕಿನ ವಿವಿಧೆಡೆ ಭಾನುವಾರ ತುಂತುರು ಮಳೆಯಾಯಿತು. ಕಾಡಂಚಿನ ಪ್ರದೇಶದಲ್ಲಿ ಸೋನೆ ಮಳೆ ಬಿಟ್ಟುಬಿಟ್ಟು ಸುರಿಯಿತು. ಮೋಡ, ಶೀತಗಾಳಿ, ಬಿಟ್ಟುಬಿಟ್ಟು ಹನಿಯುವ ಮಳೆ ನಡುವೆ ಕೃಷಿಕರು, ರೈತರು ಹಾಗೂ ಜಾನುವಾರು ಸಾಕಣೆದಾರರು ದಿನ ದೂಡಿದರು.
‘ಬಿಳಿಗಿರಿಬೆಟ್ಟದಲ್ಲಿ ಮುಂಜಾನೆಯಿಂದಲೇ ವಾತಾವರಣದಲ್ಲಿ ಚಳಿ ಗಾಳಿ ಕಾಣಿಸಿಕೊಂಡಿತ್ತು. ನಂತರ ಸಂಜೆ ಮಳೆ ನಿರಂತರವಾಗಿ ಸುರಿಯಿತು. ಇದರಿಂದ ಕಾಫಿ, ಮೆಣಸು ಹಾಗೂ ಏಲಕ್ಕಿ ಬೆಳೆಗಳ ನೀರಿನ ಅವಶ್ಯಕತೆ ನೀಗಿದೆ. ಕಾಡಂಚಿನ ಪ್ರದೇಶದ ತೋಟಗಾರಿಕಾ ಬೆಳೆಗಳು ಹಾಗೂ ಎರಚು ಬಿತ್ತನೆಯಲ್ಲಿ ರಾಗಿ ಚಲ್ಲಿರುವ ಸೋಲಿಗರಿಗೆ ಮಳೆ ವರವಾಗಿದೆ’ ಎಂದು ಬೆಟ್ಟದ ಮಾದೇಗೌಡ ಹೇಳಿದರು.
ವಿವಿಧ ದೇವಾಲಯಗಳಿಗೆ ತೆರಳಿದ್ದ ಭಕ್ತರು ತುಂತುರು ನಡುವೆ ದೇವರ ದರ್ಶನ ಮಾಡಿದರು. ಶೀತಗಾಳಿ ಮತ್ತು ಸೋನೆ ಮಳೆ ನಡುವೆ ಊರುಗಳತ್ತ ತೆರಳಿದರು. ಮಳೆ ನಡುವೆ ಜನರು ಬೆಚ್ಚನೆ ಉಡುಪು ತೊಡುವ ಧಾವಂತ ತೋರಿದರು.
‘ಮಖಾ ಮಳೆ ಬಂದಷ್ಟು ಒಳ್ಳೇದು. ಮಗ ಉಂಡಷ್ಟು ಉತ್ತಮ’ ಗಾದೆ ಮಾತು ಜನಪದರಲ್ಲಿ ಜನಜನಿತವಾಗಿದೆ. ಈ ಮಳೆ ಹುಟ್ಟಿದ ದಿನ (ಆ. 17) ಹೆಚ್ಚು ಸುರಿಯುವ ನಿರೀಕ್ಷೆ ಮೂಡಿಸಿದೆ. ಭತ್ತ ಸಸಿಮಡಿ ತಯಾರಿಕೆಯತ್ತ ಕೃಷಿಕರು ಮುಂದಾಗಿದ್ದು, ಕೃಷಿ ಚಟುವಟಿಕೆ ಬಿರುಸು ಪಡೆದಿದೆ ಎಂದು ರೈತ ಅಗರ ವೆಂಕಟೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.