ADVERTISEMENT

ಚಾಮರಾಜನಗರ: ಹಲಾಲ್ ಮಾಂಸ, ಹಲಾಲ್ ಉತ್ಪನ್ನ ಬಹಿಷ್ಕರಿಸಲು ಕರೆ

ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಹಿಂದೂ ಜನಜಾಗೃತಿ ಸಮಿತಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 12:18 IST
Last Updated 31 ಮಾರ್ಚ್ 2022, 12:18 IST
ಹಿಂದೂ ಜನಜಾಗೃತಿ ಸಮಿತಿಯ ಚಾಮರಾಜನಗರ ವಿಭಾಗದ ಶಿವರಾಮ್‌ ಹಾಗೂ ಉಮಾ ನಾಗರಾಜ್‌ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು
ಹಿಂದೂ ಜನಜಾಗೃತಿ ಸಮಿತಿಯ ಚಾಮರಾಜನಗರ ವಿಭಾಗದ ಶಿವರಾಮ್‌ ಹಾಗೂ ಉಮಾ ನಾಗರಾಜ್‌ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು   

ಚಾಮರಾಜನಗರ: ಯುಗಾದಿ ಸಮಯದಲ್ಲಿ ಹಲಾಲ್‌ ಮಾಂಸ ಹಾಗೂ ಹಲಾಲ್‌ ಉತ್ಪನ್ನಗಳನ್ನು ಖರೀದಿಸದಂತೆ ಹಿಂದೂ ಜನಜಾಗೃತಿ ಸಮಿತಿ ಹಿಂದೂ ಸಮುದಾಯದವರಿಗೆ ಕರೆ ನೀಡಿದೆ.

ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರಿಗೂ ಮನವಿ ಸಲ್ಲಿಸಿದ್ದಾರೆ.

‘ಭಾರತದಲ್ಲಿ ಇಂದು ಎಲ್ಲ ಉತ್ಪನ್ನಗಳಲ್ಲಿ ಹಲಾಲ್ ಪ್ರಮಾಣಪತ್ರವನ್ನು ಪಡೆಯುವ ಇಸ್ಲಾಮಿಕ್ ಷಡ್ಯಂತ್ರದ ಪದ್ಧತಿ ಪ್ರಾರಂಭವಾಗಿದೆ. ಯಾವುದೇ ಕಾಯ್ದೆಯ ಮಾನ್ಯತೆ ಇಲ್ಲದಿರುವ ಹಲಾಲ್ ಪ್ರಮಾಣ ಪತ್ರ ಕಾನೂನು ಬಾಹಿರವಾಗಿದೆ. ಆದ್ದರಿಂದ ಈ ಉತ್ಪನ್ನಗಳನ್ನು ಖರೀದಿಸಬಾರದು ಮತ್ತು ಇಂತಹ ಉತ್ಪನ್ನಗಳನ್ನು ಬಹಿಷ್ಕರಿಸಬೇಕು’ ಎಂದು ಸಮಿತಿಯ ಜಿಲ್ಲಾ ಸಮನ್ವಯಕ ಮೃಂತ್ಯುಜಯ ಕೆ. ಅವರು ಮನವಿಯಲ್ಲಿ ಹೇಳಿದ್ದಾರೆ.

ADVERTISEMENT

‘ಹಲಾಲ್ ಉತ್ಪನ್ನದ ಮೂಲಕ ಸಾವಿರಾರು ಕೋಟಿ ಹಣವನ್ನು ಜಿಹಾದಿ ಸಂಘಟನೆಗಳು ಸಂಗ್ರಹ ಮಾಡಿ ಅದನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿವೆ. ಭಯೋತ್ಪಾದನೆಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಭಯೋತ್ಪಾದಕರಿಗೆ ಭಾರತದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳು ಕಾನೂನು ಸಹಾಯ ಮಾಡುತ್ತಿವೆ. ಜಾತ್ಯತೀತ ಸಂವಿಧಾನದಲ್ಲಿ ಮತ, ಜಾತಿಯ ಆಧಾರದ ಮೇಲೆ ಉತ್ಪತ್ನಕ್ಕೆ ಪ್ರಮಾಣಪತ್ರ ನೀಡುವುದು ಸಂವಿಧಾನಕ್ಕೆ ವಿರುದ್ಧ. ಅಲ್ಲದೇ ಇಸ್ಲಾಂ ಪದ್ಧತಿಯ ಪ್ರಕಾರ, ಮೊದಲೇ ಅವರ ಮತದ ದೇವರಿಗೆ ಅರ್ಪಣೆ ಮಾಡಿರುವುದನ್ನು ಪುನಃ ಹಿಂದೂಗಳು ಯುಗಾದಿಯಂದು ಹಿಂದೂ ದೇವರಿಗೆ ಅರ್ಪಿಸುವುದು ಯೋಗ್ಯವಾದುದಲ್ಲ. ಹಾಗಾಗಿ, ಯಾವುದೇ ಕಾರಣಕ್ಕೂ ಹಿಂದೂಗಳು ಯುಗಾದಿಯ ಸಮಯದಲ್ಲಿ ಅಥವಾ ಬೇರೆಸಮಯದಲ್ಲಿ ಹಲಾಲ್ ಮಾಂಸವನ್ನು ಖರೀದಿಸಬಾರದು ಮತ್ತು ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕು’ ಎಂದು ಮನವಿಯಲ್ಲಿ ಹೇಳಲಾಗಿದೆ.

ಸಮಿತಿಯ ಚಾಮರಾಜನಗರ ವಿಭಾಗದ ಸಮನ್ವಯಕ ಶಿವರಾಮ್‌, ಸಮಿತಿ ಸದಸ್ಯೆ ಉಮಾ ನಾಗರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.