ಸಂತೇಮರಹಳ್ಳಿ: ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆ ಬಾರದೆ ಬೆಳೆಗಳೆಲ್ಲ ಒಣಗುತ್ತಿದ್ದು ರೈತರು ಮುಗಿಲು ನೋಡುವಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಈ ಬಾರಿಯೂ ಹಿಂಗಾರು ಕೈಡುವ ಆತಂಕ ಎದುರಾಗಿದ್ದು ರೈತರು ಕಂಗಾಲಾಗಿದ್ದಾರೆ.
ಈ ವರ್ಷ ಮುಂಗಾರು ದುರ್ಬಲಗೊಂಡ ಪರಿಣಾಮ ರೈತರ ನಿರೀಕ್ಷೆಗಳು ಹುಸಿಯಾಗಿದ್ದು ಕಷ್ಟಪಟ್ಟು ಸಾಲ–ಸೋಲ ಮಾಡಿ ಬೆಳೆದ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ನೀರಿಲ್ಲದೆ ಬಾಡುತ್ತಿದೆ. ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ರೈತರು ಹಿಂಗಾರು ಮಳೆ ನಂಬಿ ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯ ನಡೆಸಿದ್ದಾರೆ.
ಬಿತ್ತನೆಗಷ್ಟೆ ಅವಕಾಶ ಮಾಡಿಕೊಟ್ಟ ಮಳೆ ನಂತರ ನಾಪತ್ತೆಯಾಗಿದ್ದು ರೈತರು ಒಣಗುತ್ತಿರುವ ಫಸಲು ನೋಡುತ್ತಾ ಅಸಹಾಯಕತೆಯಿಂದ ಆಕಾಶದತ್ತ ಮುಖಮಾಡಿದ್ದಾರೆ. ಕೆಲವು ದಿನಗಳಿಂದ ಮೋಡಕವಿದ ವಾತಾವರಣ ನಿರ್ಮಾಣವಾಗುತ್ತಿದ್ದರೂ ಮಳೆಯ ಸಿಂಚನವಾಗದೆ ರೈತರಿಗೆ ನಿರಾಶೆ ಮೂಡಿಸುತ್ತಿದೆ.
ಹೋಬಳಿಯಾದ್ಯಂತ 33,000 ಹೆಕ್ಟೇರ್ ಖುಷ್ಕಿ ಭೂಮಿ ಇದ್ದು 5,158 ಹೆಕ್ಟೇರ್‌ನಲ್ಲಿ ಪಂಪ್‌ಸೆಟ್, ಕಬಿನಿ ನಾಲೆ ಹಾಗೂ ಕೆರೆಗಳ ನೀರಿನ ಮೂಲದಿಂದ ಕೃಷಿ ಮಾಡಲಾಗುತ್ತಿದೆ ಎಂದು ಸಂತೇಮರಹಳ್ಳಿ ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಮುಂಗಾರು ಹಂಗಾಮಿನಲ್ಲಿ ರೈತರು ಜೋಳ, ಮುಸುಕಿನ ಜೋಳ, ಉದ್ದು, ಹೆಸರು ಹಾಗೂ ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಇಳುವರಿ ಕುಸಿತವಾಯಿತು. ಇದೀಗ ಹಿಂಗಾರಿನಲ್ಲೂ ರಾಗಿ, ಅವರೆ ಹಾಗೂ ಉರುಳಿ ಬಿತ್ತನೆ ಮಾಡಿದ್ದು, ಬಿತ್ತನೆ ಸಮಯದಲ್ಲಿ ಉತ್ತಮವಾಗಿ ಸುರಿದಿದ್ದ ಮಳೆ ನಂತರ ಕಣ್ಮರೆಯಾಗಿದೆ.
ಸಕಾಲದಲ್ಲಿ ಮಳೆಯಾಗಿದ್ದರೆ ಬೆಳೆಗಳು ಹೂ ಬಿಡುವ ಹಂತದಲ್ಲಿ ಇರುತ್ತಿದ್ದವು. ಮಳೆ ಇಲ್ಲದೆ ಬೆಳವಣಿಗೆ ಕುಂಠಿತಗೊಂಡಿದೆ. ಬೆಳೆಗಳು ಬಾಡುತ್ತಿವೆ, ಕೆಲವು ಭಾಗದಲ್ಲಿ ಬೆಳೆ ನೆಲಕಚ್ಚಿವೆ ಎನ್ನುತ್ತಾರೆ ರೈತರು.
ಮೋಡ ಕವಿದ ವಾತಾವರಣವಿರುವ ಹಿನ್ನೆಲೆಯಲ್ಲಿ ರೈತರು ಹಸಿಕಡಲೆ ಬಿತ್ತನೆಗೆ ಭೂಮಿ ಹದಗೊಳಿಸಿದ್ದಾರೆ. ರೈತಸಂಪರ್ಕ ಕೇಂದ್ರದಿಂದ ಹಸಿ ಕಡಲೆ ಬೀಜವನ್ನೂ ಖರೀದಿಸಿಟ್ಟಿದ್ದಾರೆ, ಬಿತ್ತನೆ ಬೀಜ, ಗೊಬ್ಬರಕ್ಕೆ ಸಾವಿರಾರು ರೂಪಾಯಿ ವ್ಯಯಿಸಿ ಮಳೆಯ ನಿರೀಕ್ಷೆಯಲ್ಲಿದ್ದಾರೆ. 1 ಎಕರೆ ಜಮೀನಿನಲ್ಲಿ ರಾಗಿ ಬಿತ್ತನೆಗೆ 15 ಸಾವಿರ ಖರ್ಚು ಮಾಡಿದ್ದು, ಮಳೆಯಾಗಿ ಫಸಲು ಚೆನ್ನಾಗಿ ಬಂದರೆ 50,000 ಲಾಭ ಸಿಗುತ್ತದೆ. ಮಳೆಬಾರದಿದ್ದರೆ ಮತ್ತೆ ನಷ್ಟ ಅನುಭವಿಸಬೇಕು ಎಂದು ಹೆಗ್ಗವಾಡಿ ರಾಜಣ್ಣ ನೊಂದು ನುಡಿದರು.
ಸದ್ಯ ಬೆಳೆ ಒಣಗುತ್ತಿರುವ ಬಗ್ಗೆ ರೈತರಿಂದ ಅಹವಾಲುಗಳು ಬಂದಿಲ್ಲ ವಾರದೊಳಗೆ ಮಳೆ ಬೀಳದಿದ್ದರೆ ಫಸಲು ನಷ್ಟವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.– ಪಾಪಣ್ಣ, ರೈತಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.