ADVERTISEMENT

ಹೊಗೇನಕಲ್ ಜಲಪಾತ: ತೆಪ್ಪ ಶುಲ್ಕ ನಿಗದಿಗೆ 10ರ ಗಡುವು

₹800ಕ್ಕೆ ಒಪ್ಪಿರುವ ಅರಣ್ಯ ಇಲಾಖೆ, ಬಗೆಹರಿಯದ ಬಿಕ್ಕಟ್ಟು

ಬಿ.ಬಸವರಾಜು
Published 1 ಜನವರಿ 2024, 23:31 IST
Last Updated 1 ಜನವರಿ 2024, 23:31 IST
ಹನೂರು ತಾಲ್ಲೂಕಿನ ಹೊಗೆನಕಲ್‌ ಜಲಪಾತದ ಬಳಿ ತೆಪ್ಪದಲ್ಲಿ ಸಾಗುತ್ತಿರುವ ಪ್ರವಾಸಿಗರು
ಹನೂರು ತಾಲ್ಲೂಕಿನ ಹೊಗೆನಕಲ್‌ ಜಲಪಾತದ ಬಳಿ ತೆಪ್ಪದಲ್ಲಿ ಸಾಗುತ್ತಿರುವ ಪ್ರವಾಸಿಗರು   

ಹನೂರು: ಜಿಲ್ಲೆಯ ಗಡಿಭಾಗದಲ್ಲಿರುವ, ತಾಲ್ಲೂಕಿನ ಹೊಗೇನಕಲ್ ಜಲಪಾತದಲ್ಲಿ ತೆಪ್ಪ ಓಡಿಸುವವರು ತೆಪ್ಪದ ಶುಲ್ಕವನ್ನು ಹೆಚ್ಚು ಮಾಡಲು ಇದೇ 10ರವರೆಗೆ ಗಡುವು ನೀಡಿದ್ದು, ಅರಣ್ಯ ಇಲಾಖೆ ಶುಲ್ಕ ಹೆಚ್ಚು ಮಾಡದಿದ್ದರೆ ತೆಪ್ಪ ಓಡಾಟವನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.

ಹೊಗೇನಕಲ್ ಜಲಪಾತ ವೀಕ್ಷಣೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪ್ರತಿನಿತ್ಯ ಹಾಗೂ ವಾರದ ಕೊನೆ ಹಾಗೂ ವಿಶೇಷ ದಿನಗಳಲ್ಲಿ ಹೆಚ್ಚಾಗಿ ಆಗಮಿಸುವ ಪ್ರವಾಸಿಗರು ತೆಪ್ಪದಲ್ಲಿ  ತೆರಳಿ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಾರೆ.

‘ತೆಪ್ಪದ ದರ ಪರಿಷ್ಕರದೆ ಹಲವು ವರ್ಷಗಳಾಗಿವೆ. ತಮಿಳುನಾಡಿನಲ್ಲಿ ನಾಲ್ಕು ಜನರಿಗೆ ₹1,500 ನಿಗದಿಪಡಿಸಲಾಗಿದೆ. ನಮ್ಮಲ್ಲಿ ₹500 ಮಾತ್ರ ಇದೆ. ಅದನ್ನು ಜಾಸ್ತಿ ಮಾಡಬೇಕು’ ಎಂದು ತೆಪ್ಪ ನಿರ್ವಾಹಕರು ಒತ್ತಾಯಿಸುತ್ತಿದ್ದಾರೆ. 

ADVERTISEMENT

ಸದ್ಯ ಒಬ್ಬರಿಗೆ ₹125 ನಿಗದಿ ಪಡಿಸಲಾಗಿದೆ. ಒಂದು ತೆಪ್ಪದಲ್ಲಿ ನಾಲ್ಕು ಜನರಿಗಷ್ಟೇ ತೆರಳಲು ಅವಕಾಶ. ಇಲ್ಲಿ ತೆಪ್ಪ ನಡೆಸುವವರು ಇದನ್ನೇ ಜೀವನಾಧಾರವಾಗಿ ಮಾಡಿಕೊಂಡಿದ್ದಾರೆ. ಶುಲ್ಕ ಹೆಚ್ಚು ಮಾಡಬೇಕು ಎಂಬ ಒತ್ತಾಯ ಮಾಡಿದ್ದು, ಈ ಸಂಬಂಧ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.

ತೆಪ್ಪ ಓಡಾಟ ಸ್ಥಗಿತ: ‘ತೆಪ್ಪದ ದರ ಏರಿಕೆ ಮಾಡುವಂತೆ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಅವರು ಸ್ಪಂದಿಸದಿದ್ದಾಗ ನಾವು ತೆಪ್ಪ ಓಡಾಟವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಮಾಡಿದ್ದೆವು. ಜೊತೆಗೆ 15 ದಿನಗಳ ಕಾಲ ತೆಪ್ಪ ಓಡಾಟ ನಿಲ್ಲಿಸಿದ್ದೆವು. ತಮಿಳುನಾಡು ಭಾಗದಲ್ಲಿ ಅಲ್ಲಿನ ಸರ್ಕಾರ ಹೆಚ್ಚುವರಿ ದರ ನಿಗಧಿ ಮಾಡಿದೆ. ಅದರಂತೆ ನಮ್ಮಲ್ಲೂ ಸೂಕ್ತ ದರ ನಿಗದಿ ಮಾಡುವಂತೆ ಒತ್ತಾಯಿಸಿದ್ದೇವೆ. ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಹೊಗೇನಕಲ್ ಬೋಟ್ ಮ್ಯಾನ್ ಸಂಘದ ಕಾರ್ಯದರ್ಶಿ ಪಳನಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಮಿಳುನಾಡು ಭಾಗದಲ್ಲಿ ಅಲ್ಲಿನ ಸರ್ಕಾರ ಪ್ರತಿ ಬೋಟಿಗೆ ₹1500 ನಂತೆ ಶುಲ್ಕ ನಿಗದಿ ಮಾಡಿದೆ. ಅದರಂತೆ ನಮ್ಮಲ್ಲೂ ನಿಗದಿ ಮಾಡಬೇಕು ಎಂದು ಡಿಸಿಎಫ್ ಅವರಿಗೆ ಮನವಿ ಮಾಡಿದ್ದೇವೆ. ₹800 ನಿಗದಿ ಮಾಡಲು ಅಧಿಕಾರಿಗಳು ಒಪ್ಪಿದ್ದಾರೆ. ಆದರೆ, ಅದಕ್ಕೆ ನಾವು ಒಪ್ಪಿಲ್ಲ. ಜಿಲ್ಲಾಧಿಕಾರಿಗಳು ₹1500 ನಿಗದಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಜ.10ರವರೆಗೆ ದರ ಅಂತಿಮಗೊಳಿಸದಿದ್ದರೆ ತೆಪ್ಪ ನಡೆಸುವುದನ್ನು ಸ್ಥಗಿತಗೊಳಿಸಲಾಗುವುದು’ ಎಂದು ಸಂಘದ ಅಧ್ಯಕ್ಷ ರತ್ನವೇಲು ತಿಳಿಸಿದರು.

ಅರಣ್ಯ ಇಲಾಖೆಯಿಂದ ಶುಲ್ಕ ನಿಗದಿಯಾಗಬೇಕು ತಮಿಳುನಾಡಿಗೆ ಸೇರಿದ ಭಾಗದಲ್ಲಿ ಅಲ್ಲಿನ ತೆಪ್ಪಕ್ಕೆ ₹1500 ನಾಲ್ಕು ಮಂದಿಗೆ ಕರ್ನಾಟಕಕ್ಕೆ ಸೇರಿದ ಭಾಗದಲ್ಲಿ ತೆಪ್ಪದಲ್ಲಿ 4 ಜನರಿಗೆ ₹500 ಮಾತ್ರ

ತೆಪ್ಪ ನಡೆಸುವವರು ಶುಲ್ಕ ಏರಿಕೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಅದನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಅನಮತಿ ಸಿಕ್ಕರೆ ಶುಕ್ಕ ನಿಗದಿ

-ಎಂ.ಎನ್. ಅಂಕರಾಜು ಎಸಿಎಫ್‌ ಕಾವೇರಿ ವನ್ಯಧಾಮ

ಸುರಕ್ಷಾ ಕವಚ ಇಲ್ಲದೇ ಓಡಾಟ

ಒಂದು ತೆಪ್ಪದಲ್ಲಿ ನಾಲ್ಕು ಜನರನ್ನು ಮಾತ್ರ ಕರೆದುಕೊಂಡು ಹೋಗಬೇಕು ಎಂದಿದ್ದರೂ ತೆಪ್ಪ ನಡೆಸುವವರು ಅದಕ್ಕಿಂತ ಹೆಚ್ಚು ಜನರನ್ನು ಕರೆದುಕೊಂಡು ಹೋಗುತ್ತಾರೆ ಎಂಬ ಆರೋಪ ಇದೆ. ಪ್ರವಾಸಿಗರಿಗೆ ಸುರಕ್ಷಾ ಕವಚನ್ನು ನೀಡುತ್ತಿಲ್ಲ ಎಂದು ಆರೋಪಿಸುತ್ತಾರೆ ಪ್ರವಾಸಿಗರು.  ಸುರಕ್ಷಾ ಕವಚದ ನಿರ್ವಹಣೆ ಸಮರ್ಪಕವಾಗಿಲ್ಲ. ಹಳೆಯದಾಗಿದ್ದು ಅದನ್ನು ಕೆಲವು ಧರಿಸುವಂತಿರುವುದಿಲ್ಲ ಎಂಬುದು ಪ್ರವಾಸಿಗರ ದೂರು.  ಬೆನ್ನಲ್ಲೇ ಪ್ರವಾಸಿಗರಿಗೆ ರಕ್ಷ ಕವಚ ನೀಡದೇ ತೆಪ್ಪದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ನಿಯಮವಾಗಿ ಒಂದು ತೆಪ್ಪದಲ್ಲಿ ನಾಲ್ಕು ಜನರಿಗೆ ಮಾತ್ರ ಅವಕಾಶ ಆದರೆ ಇಲ್ಲಿ ಹಣದ ಆಸೆಗೆ ಒಂದು ತೆಪ್ಪದಲ್ಲಿ ಎಂಟರಿಂದ ಹತ್ತು ಮಂದಿಯವರೆಗೂ ಕರೆದುಕೊಂಡು ಹೋಗಲಾಗುತ್ತಿದೆ. ಜತೆಗೆ ಪ್ರವಾಸಿಗರಿಗೆ ಯಾವುದೇ ರಕ್ಷ ಕವಚವನ್ನು ನೀಡುತ್ತಿಲ್ಲ ಎಂದು ಪ್ರವಾಸಿಗರು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.