ADVERTISEMENT

ಹೊಗೆನಕಲ್: ತೆಪ್ಪ ವಿಹಾರ ಸ್ಥಗಿತ

ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳ; ತುಂಬಿ ಹರಿಯುತ್ತಿರುವ ಜಲಪಾತ

ಬಿ.ಬಸವರಾಜು
Published 3 ಜುಲೈ 2025, 7:42 IST
Last Updated 3 ಜುಲೈ 2025, 7:42 IST
ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಹೊಗೆನಕಲ್ ಜಲಪಾತ ಪ್ರದೇಶ ಜಲಾವೃತಗೊಂಡಿರುವುದು
ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಹೊಗೆನಕಲ್ ಜಲಪಾತ ಪ್ರದೇಶ ಜಲಾವೃತಗೊಂಡಿರುವುದು   

ಹನೂರು: ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಹೊಗೆನಕಲ್ ಜಲಪಾತ ಮೈದುಂಬಿಕೊಂಡು ಅಪಾಯದ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ತೆಪ್ಪ ವಿಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕೆಆರ್‌ಎಸ್ ತುಂಬಿರುವುದರಿಂದ ಮೂರು ದಿನಗಳಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ನದಿಗೆ ಹರಿಸಲಾಗುತ್ತಿದೆ. ಪರಿಣಾಮ ಕಾವೇರಿ ನದಿಯ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಹೊಗೆನಕಲ್ ಜಲಪಾತ ಭೋರ್ಗರೆಯುತ್ತಿದೆ. ವಾರಗಳ ಹಿಂದೆ ನೀರಿಲ್ಲದೆ ಬಣಗುಡುತ್ತಿದ್ದ ಹೊಗೆನಕಲ್ ಜಲಪಾತ ಈಗ ಕಂಗೊಳಿಸುತ್ತಿದೆ.

ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆ ಹೊಗೆನಕಲ್ ಜಲಪಾತದಲ್ಲಿ ತೆಪ್ಪಗಳನ್ನು ಇಳಿಸಿದಂತೆ ತೆಪ್ಪ ಚಲಾಯಿಸುವವರಿಗೆ ಸೂಚನೆ ನೀಡಿದೆ. ಇದರಿಂದ ಸದಾ ಪ್ರವಾಸಿಗರನ್ನು ತುಂಬಿಕೊಂಡು ನೀರಿನಲ್ಲಿ ಅಡ್ಡಾಡುತ್ತಿದ್ದ ತೆಪ್ಪಗಳು ಈಗ ದಡ ಸೇರಿಕೊಂಡಿವೆ. ನೀರಿನ ಪ್ರಮಾಣ ಕಡಿಮೆಯಾಗುವವರೆಗೂ ತೆಪ್ಪ ವಿಹಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಹಿಂದೆ ನೀರಿನ ಪ್ರಮಾಣ ಹೆಚ್ಚಾಗಿದ್ದಾಗ ತೆಪ್ಪ ನಡೆಸುವ ದುಸ್ಸಾಹಸ ಮಾಡಿ ಒಂದು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಜಲ ಸಮಾಧಿಯಾಗಿದ್ದರು. ಇಂತಹ ದುರ್ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಜಲಾಶಯದಿಂದ ಹೆಚ್ಚುವರಿ ನೀರು ಬಿಡುತ್ತಿರುವುದಾಗಿ ಮಾಹಿತಿ ಲಭ್ಯವಾಗುತ್ತಿದ್ದಂತೆ ಜಲಪಾತದಲ್ಲಿ ತೆಪ್ಪ ವಿಹಾರ ಸ್ಥಗಿತಗೊಳಿಸಿದ್ದೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

‘ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದು ಮಾದಪ್ಪನ ದರ್ಶನ ಮುಗಿಸಿ ಹೊಗೆನಕಲ್ ಜಲಪಾತ ನೋಡಲು ಬಂದಿದ್ದೆವು. ಆದರೆ, ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣವೊಡ್ಡಿ ತೆಪ್ಪ ವಿಹಾರ ಮಾಡಲು ಅವಕಾಶ ನೀಡಲಿಲ್ಲ. ನಮ್ಮನ್ನು ಅರಣ್ಯ ಇಲಾಖೆ ಅಧಿಕಾರಿಗಳು ಚೆಕ್‌ಪೋಸ್ಟ್‌ನಲ್ಲೇ ತಡೆದು ವಾಪಸ್ಸು ಕಳುಹಿಸಿದರು’ ಎಂದು ಪ್ರವಾಸಿಗ ನಿಶಾಂತ್ ನಿರಾಶೆ ವ್ಯಕ್ತಪಡಿಸಿದರು.

ಸೇತುವೆ ನಿರ್ಮಿಸಿ: ಮಳೆಗಾಲದಲ್ಲಿ ಮೈದುಂಬಿ ಹರಿಯುವ ಜಲಪಾತವನ್ನು ಕಣ್ತುಂಬಿಕೊಳ್ಳಲು ಪಾಲಪಡು ಸೇತುವೆ ನಿರ್ಮಿಸಲಾಗಿತ್ತು. ಐದು ವರ್ಷಗಳ ಹಿಂದೆ ನೀರಿನ ಪ್ರಮಾಣ ಹೆಚ್ಚಾಗಿ ಸೇತುವೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಹಬ್ಬಗಳು, ವಿಶೇಷ ರಜೆಗಳ ಸಂದರ್ಭ ‌ಹಾಗೂ ವಾರಾಂತ್ಯದಲ್ಲಿ ರಾಜ್ಯದ ನಾನಾ ಕಡೆಗಳಿಂದ ಹಾಗೂ ನೆರೆಯ ತಮಿಳುನಾಡಿನಿಂದಲೂ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ನೀರಿನ ಪ್ರಮಾಣ ಜಾಸ್ತಿಯಾದರೆ ನಿರಾಸೆಯಿಂದ ಹಿಂದಿರುಗುತ್ತಾರೆ. ಪ್ರವಾಸೋದ್ಯಮ ಇಲಾಖೆ ಸೇತುವೆ ದುರಸ್ತಿಪಡಿಸಿದರೆ ಜನರು ಜಲಪಾತ ವೀಕ್ಷಿಸಬಹುದು ಈ ಬಗ್ಗೆ ಗಮನಹರಿಸಬೇಕು ಎನ್ನುತ್ತಾರೆ ಪ್ರವಾಸಿಗರು.

ತಾತ್ಕಾಲಿಕ ಸ್ಥಗಿತ

ಹೊಗೆನಕಲ್‌ ಜಲಪಾತದಲ್ಲಿ ನೀರಿನ ಹರಿವು ಜಾಸ್ತಿಯಾಗಿರಯವುದರಿಂದ ನಾಲ್ಕೈದು ದಿನಗಳಿಂದ ತಾತ್ಕಾಲಿಕವಾಗಿ ತೆಪ್ಪ ವಿಹಾರ ಸ್ಥಗಿತಗೊಳಿಸಲಾಗಿದೆ. ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಮತ್ತೆ ತೆಪ್ಪ ವಿಹಾರವನ್ನು ಆರಂಭಿಸಲಾಗುವುದು ಎಂದು ಕಾವೇರಿ ವನ್ಯಧಾಮದ ಡಿಸಿಎಫ್ ಸುರೇಂದ್ರ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.