
ಚಾಮರಾಜನಗರ: ಮಲಗಲು ಹಾಸಿಗೆಗಳು ಇಲ್ಲ, ಹೊದ್ದುಕೊಳ್ಳಲು ಹೊದಿಕೆ ಇಲ್ಲ, ಕೊಠಡಿಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲ, ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಮಕ್ಕಳು ಇರುವುದಾದರೂ ಹೇಗೆ.. ಹೀಗೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ.
ಗುರುವಾರ ನಗರದ ಪ್ರವಾಸಿ ಮಂದಿರದ ಎದುರಿಗಿರುವ ಕೆಕೆಜಿಬಿವಿ ಬಾಲಕಿಯರ ವಸತಿ ನಿಲಯಕ್ಕೆ ಭೇಟಿನೀಡಿ ಅಲ್ಲಿನ ಅವ್ಯವಸ್ಥೆ ಕಂಡು ವಾರ್ಡನ್ ಹಾಗೂ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಎಲ್ಲ ಸೌಲಭ್ಯಗಳು ದೊರೆಯುತ್ತವೆ ಎಂಬ ಆಸೆಯಿಂದ ಪೋಷಕರು ಮಕ್ಕಳನ್ನು ಸೇರಿಸುತ್ತಾರೆ. ಆದರೆ, ವಸತಿ ನಿಲಯಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳದಲ್ಲೇ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ ಉಪ ಲೋಕಾಯುಕ್ತರು ‘ವೃತ್ತಿ ಜೀವನದಲ್ಲೇ ಇಷ್ಟೊಂದು ಅವ್ಯವಸ್ಥೆ ಹೊಂದಿರುವ ವಸತಿ ನಿಲಯವನ್ನು ನೋಡಿಲ್ಲ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸರಿ ಇಲ್ಲ, ಹೊದಿಕೆಗಳನ್ನು ಮನೆಯಿಂದ ತರಬೇಕಾಗಿದೆ, ಓದಲು ಪುಸ್ತಕಗಳು ಇಲ್ಲ, ವಸತಿ ನಿಲಯವನ್ನು ಮುಚ್ಚಿ ವಿದ್ಯಾರ್ಥಿಗಳನ್ನು ಬೇರೆ ಹಾಸ್ಟೆಲ್‌ಗಳಿಗೆ ವರ್ಗಾಯಿಸಿ’ ಎಂದು ಸೂಚನೆ ನೀಡಿದರು.
‘ಮಕ್ಕಳ ಸುರಕ್ಷತೆ ಬಗ್ಗೆ ಕನಿಷ್ಠ ಕಾಳಜಿ ವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ, ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸುತ್ತೇನೆ’ ಎಂದು ಹರಿಹಾಯ್ದರು.
ದೂರುಗಳ ಸುರಿಮಳೆ:
ಬಿಸಿಲಿದ್ದರಷ್ಟೆ ಸ್ನಾನಕ್ಕೆ ಬಿಸಿ ನೀರು ದೊರೆಯುತ್ತದೆ, ಮಳೆಗಾಲ, ಚಳಿಗಾಲದಲ್ಲಿ ತಣ್ಣೀರೇ ಗತಿ, ಗ್ರಂಥಾಲಯದಲ್ಲಿ ಓದಲು ಸಮರ್ಪಕ ಪುಸ್ತಕಗಳಿಲ್ಲ, ನಲ್ಲಿಯಲ್ಲಿ ಬರುವ ನೀರನ್ನು ಕಾಯಿಸಿ ಕುಡಿಯಬೇಕು, ಕರೆಂಟ್ ಹೋದರೆ ಬದಲಿ ಯುಪಿಎಸ್ ವ್ಯವಸ್ಥೆ ಇಲ್ಲದೆ ಕತ್ತಲಿನಲ್ಲಿ ಕಾಲ ಕಳೆಯಬೇಕು, ಸೊಳ್ಳೆ ಕಾಟ ಹೆಚ್ಚಾಗಿದೆ ಎಂದು ವಿದ್ಯಾರ್ಥಿನಿಯರು ಉಪ ಲೋಕಾಯುಕ್ತರ ಮುಂದೆ ದೂರು ಹೇಳಿಕೊಂಡರು.
ಹೊಟ್ಟೆ ತುಂಬಾ ಊಟ, ಉಪಾಹಾರ ಸಿಗುತ್ತಿದೆಯೇ, ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗುತ್ತಿದೆಯೇ, ಸೋಪು, ಶಾಂಪು, ಟೂತ್ ಪೇಸ್ಟ್, ಬಟ್ಟೆ ಸೋಪು ಕೊಡುತ್ತಿದ್ದಾರೆಯೇ ಎಂದು ವಿದ್ಯಾರ್ಥಿಗಳನ್ನು ವಿಚಾರಿಸಿ ವಸತಿ ನಿಲಯದ ಚಿತ್ರಣ ಬದಲಾಗದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಎಸ್‌ಪಿ ಬಿ.ಟಿ.ಕವಿತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವಿಶ್ವನಾಥ್ ಸೇರಿದಂತೆ ಹಲವರು ಇದ್ದರು.
‘ಓದು ನಿಲ್ಲಿಸದೆ ಉನ್ನತ ಹುದ್ದೆ ಅಲಂಕರಿಸಿ’ ವಸತಿ ನಿಲಯಗಳಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಬೇಡಿ ಚೆನ್ನಾಗಿ ಓದಿ ಐಎಎಸ್ ಐಪಿಎಸ್‌ನಂತಹ ಉನ್ನತ ಹುದ್ದೆಗಳನ್ನು ಪಡೆದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡಿ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.