ಯಳಂದೂರು: ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಲಿನ ತಾಪಕ್ಕೆ ಸಾಂಬಾರ ಪದಾರ್ಥಗಳ ರಾಣಿ ‘ಏಲಕ್ಕಿ’ ಸೊರಗುತ್ತಿದ್ದು, ವಾಣಿಜ್ಯ ಬೆಳೆಗಾರರಿಗೆ ಬೆಳೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
ಕೃಷಿಕ ಮಹಿಳೆಯರು ಮಿಶ್ರ ಬೆಳೆಯಾಗಿ ಬಾಳೆ, ಮೆಣಸು ಮತ್ತು ಏಲಕ್ಕಿ ಗಿಡಗಳನ್ನು ಹಾಕಿದ್ದಾರೆ. ಆದರೆ, ಉಷ್ಣಾಂಶ 33 ಡಿಗ್ರಿ ಮೀರಿರುವುದರಿಂದ ಸಸ್ಯದ ಬೆಳವಣಿಗೆ ಕುಗ್ಗಿದೆ. ಸಕಾಲದಲ್ಲಿ ಮಳೆ ಸುರಿದು, ತಾಪ ಕಡಿಮೆಯಾದರೆ ಮಾತ್ರ ಬೆಳೆ ಚಿಗುರಲಿದೆ ಎನ್ನುತ್ತಾರೆ ಕೃಷಿಕರು.
ಏಲಕ್ಕಿ ಅತಿಯಾದ ಶಾಖ ಹಾಗೂ ಹೆಚ್ಚು ಶೀತವನ್ನು ಸಹಿಸದು. ಉಷ್ಣತೆ 15 ರಿಂದ 20 ಡಿಗ್ರಿ ಇದ್ದರೆ ಸಮೃದ್ಧವಾಗಿ ಬೆಳೆಯುತ್ತದೆ. ಸ್ಥಳೀಯ ತಳಿಗೆ ಬದಲಾಗಿ ಹೈಬ್ರಿಡ್ ಗಿಡಗಳು ನಮ್ಮ ಮಣ್ಣಿಗೆ ಹೊಂದಿಕೊಂಡಿವೆ. ಕಡಿಮೆ ಮಳೆ ಬೀಳುವ ಹಾಗೂ ಕಡಿಮೆ ಅವಧಿ ಮಳೆ ಸುರಿಯುವ ಪ್ರದೇಶದಲ್ಲಿ ಕೊಳವೆ ಬಾವಿ ನೀರು ಪೂರೈಸಿ ಸಾಗುವಳಿ ಮಾಡುತ್ತಿದ್ದು, ಈ ವರ್ಷ ಸಸಿ ಕತ್ತರಿಸುವ ಹುಳ ಮತ್ತು ಥ್ರಿಪ್ಸ್ ನುಸಿ ಭಾದೆಗೆ ಸಿಲುಕಿದೆ. ಇದರಿಂದ ಇಳುವರಿ ಕುಸಿಯಲಿದೆ’ ಎಂದು ಹೊನ್ನೂರು ಗ್ರಾಮದ ಬೆಳೆಗಾರ ರಂಗಸ್ವಾಮಿ ಹೇಳಿದರು.
‘ನಲ್ಯಾಣಿ ಗ್ರೀನ್ ಗೋಲ್ಡ್ ತಳಿಯ 100 ಗಿಡಗಳನ್ನು ನಾಟಿ ಮಾಡಿದ್ದು, ಉಷ್ಣಾಂಶ ಹೆಚ್ಚಳದಿಂದ ಬಹಳಷ್ಟು ಸಸಿಗಳು ಹಾಳಾಗಿವೆ. ಉಳಿದ ಸಸಿಗಳಲ್ಲಿ ಹೂ ಮತ್ತು ಕಾಯಿ ಕಾಣಿಸಿಕೊಂಡಿದ್ದು, ಕೀಟ ಮತ್ತು ರೋಗ ಬಾರದಂತೆ ಸಾವಯವ ಮತ್ತು ರಸಾಯನಿಕ ಬಳಸಿ ಬೆಳೆ ರಕ್ಷಿಸಬೇಕಿದೆ. ಬೇರಿನಲ್ಲಿ ಸಿಹಿ ಅಂಶ ಹೇರಳವಾಗಿದ್ದು, ಬೇರು ತಿನ್ನುವ ಹುಳಗಳ ಕಾಟ ಶುರುವಾಗಿದೆ. ಇದರಿಂದ ಸಸ್ಯ ಬೆಳವಣಿಗೆ ಕುಗ್ಗಲಿದೆ’ ಎಂದು ಕೃಷಿಕ ಮಹಿಳೆ ಕೀರ್ತಿ
ಹೇಳುತ್ತಾರೆ.
ಏಲಕ್ಕಿಗೆ ಪೋಷಕಾಂಶ ಕೊರತೆ: ‘ಏಲಕ್ಕಿ ಸಂಶೋಧನಾ ಸಂಸ್ಥೆ ಕೆಲವು ಭಾಗಗಳಲ್ಲಿ ಸಮೀಕ್ಷೆ ನಡೆಸಿ ಮಣ್ಣಿನಲ್ಲಿ ಸತು ಮತ್ತು ಬೋರಾನ್ ಕೊರತೆ ಇರುವುದನ್ನು ಗುರುತಿಸಿದೆ. ಇವುಗಳ ಕೊರತೆಯಾಗದಂತೆ ಏಲಕ್ಕಿ ಕೃಷಿಕರು ನೋಡಿಕೊಳ್ಳಬೇಕು. ಇದರಿಂದ ಇಳುವರಿ ಜೊತೆಗೆ ಗುಣಮಟ್ಟ ಉತ್ತಮ ಪಡಿಸಬಹುದು. ಬಾಧಿತ ಗಿಡಗಳ ಭಾಗಗಳನ್ನು ತಂದು ಔಷಧೋಪಚಾರ ಮಾಡುವ ಬಗ್ಗೆ ಮಾಹಿತಿ ಪಡೆಯಬಹುದು’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.