
ಚಾಮರಾಜನಗರ: ‘ಸಮಾಜದಲ್ಲಿ ಶಾಂತಿ, ಸೌಹಾರ್ದದಿಂದ ಗೌರವಯುತವಾಗಿ ಜೀವನ ನಡೆಸಲು ಪೂರಕವಾಗಿ ಮಾನವ ಹಕ್ಕುಗಳನ್ನು ಜಾರಿಗೆ ತರಲಾಗಿದ್ದು, ಎಲ್ಲರೂ ಹಕ್ಕುಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಹೇಳಿದರು.
ನಗರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಿತಿಮೀರಿತ್ತು. ಯುದ್ಧದ ನಂತರ 1948ರ ಡಿ.10ರಂದು ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಿಸಿತು. ಎಲ್ಲರಿಗೂ ಬದುಕುವ, ಸಮಾನತೆಯ, ಭದ್ರತೆಯ, ಧಾರ್ಮಿಕ ಆಯ್ಕೆ ಮತ್ತು ವ್ಯಕ್ತಿ ಸ್ವಾತಂತ್ರ‍್ಯದ ಹಕ್ಕುಗಳನ್ನು ಪ್ರತಿಪಾದಿಸಲಾಯಿತು’ ಎಂದರು.
ಸ್ವಾತಂತ್ರ್ಯಾನಂತರ ದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರ ರಚನೆಯಾಗಿದ್ದು, ಸಂವಿಧಾನದಡಿ ಕಾನೂನುಗಳ ರಕ್ಷಣೆ ನೀಡಲಾಗಿದೆ. ಸಾರ್ವಜನಿಕರ ಹಿತಕ್ಕಾಗಿ ಸಂವಿಧಾನದಲ್ಲಿ ಅಡಕವಾಗಿರುವ ಮೂಲಭೂತ ಹಕ್ಕುಗಳನ್ನು ಎಲ್ಲರೂ ಸದುಪಯೋಗಪಡಿಸಿ, ಕರ್ತವ್ಯಗಳನ್ನು ಪಾಲಿಸಬೇಕು. ಮಾನವ ಹಕ್ಕುಗಳನ್ನು ರಕ್ಷಿಸುವುದು ಸಂವಿಧಾನದ ಕರ್ತವ್ಯವಾಗಿದೆ.ಅವುಗಳ ಉಲ್ಲಂಘನೆಯಾದರೆ, ಹಕ್ಕುಗಳ ರಕ್ಷಣೆಗಾಗಿ ತೊಂದರೆಗೆ ಒಳಗಾದವರು ಅಥವಾ ಅವರ ಪರವಾಗಿ ಯಾರಾದರೂ ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡಬಹುದು . ಮಾನವ ಹಕ್ಕುಗಳ ಆಯೋಗವನ್ನು ಕೂಡ ಸಂಪರ್ಕಿಸಿ ದೂರು ಸಲ್ಲಿಸಬಹುದು’ ಎಂದು ನ್ಯಾಯಾಧೀಶ ಈಶ್ವರ್ ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾನವ ಹಕ್ಕುಗಳ ಪ್ರತಿಜ್ಞಾವಿಧಿ ಬೋಧಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶೃತಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್ ಭಾಗವಹಿಸಿದ್ದರು.