ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಿಂದ ಒಡೆಯರಪಾಳ್ಯ ಹಾಗೂ ಹನೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಕ್ರಮವಾಗಿ, ಅವೈಜ್ಞಾನಿಕವಾಗಿ ಸಿಮೆಂಟ್ ಪೈಪ್ ಅಳವಡಿಸಲಾಗಿದೆ ಎಂದು ಆರೋಪಿಸಿ ಲೊಕ್ಕನಹಳ್ಳಿ ಗ್ರಾಮದ ನಿವಾಸಿ ರವಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಹನೂರು ಪಟ್ಟಣದಿಂದ ಒಡೆಯರ ಪಾಳ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಗ ಮಧ್ಯೆ, ಲೋಕನಹಳ್ಳಿ ಗ್ರಾಮದಲ್ಲಿ ಈ ಹಿಂದೆ ಚರಂಡಿಯ ಮೇಲ್ಭಾಗದಲ್ಲಿ ಅಳವಡಿಸಿದ್ದ ಸಿಮೆಂಟ್ ಸ್ಲ್ಯಾಬ್ ಕಿತ್ತುಹಾಕಿ, ಅವೈಜ್ಞಾನಿಕವಾಗಿ ಸಿಮೆಂಟ್ ಪೈಪ್ ಹಾಕಿ ಮುಚ್ಚಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಕಾಮಗಾರಿ ಪೂರ್ಣಗೊಳಿಸದೆ, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗಿದೆ ಎಂದು ರವಿ ದೂರಿನಲ್ಲಿ ಆರೋಪಿಸಿದ್ದಾರೆ.
ಭಗಿರಥ ಬಡಾವಣೆಯ, ಒಂದನೇ ತರಗತಿಯಿಂದ 7ನೇ ತರಗತಿಯವರೆಗಿನ ಸುಮಾರು 80 ವಿದ್ಯಾರ್ಥಿಗಳು ಇದೇ ರಸ್ತೆಯ ಮೂಲಕ ಶಾಲಾ, ಕಾಲೇಜುಗಳಿಗೆ ತೆರಳುತ್ತಾರೆ. ವೃದ್ಧರೂ ಇದೇ ರಸ್ತೆಯಲ್ಲಿ ಓಡಾಡುವುದರಿಂದ ಕಾಮಗಾರಿ ಪೂರ್ಣಗೊಳಿಸುವಂತೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಗ್ರಾಮ ಪಂಚಾಯಿತಿ ವತಿಯಿಂದ ಮಾಡಿರುವ ಕಾಮಗಾರಿ ಕಳಪೆಯಾಗಿದೆ. ತಮಿಳುನಾಡು ಹಾಗೂ ಒಡೆಯರ ಪಾಳ್ಯ ಗ್ರಾಮಗಳಿಗೆ ತರಕಾರಿ ಹಾಗೂ ಇನ್ನಿತರ ವಾಣಿಜ್ಯ ಸರಕು ವಾಹನಗಳು ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತವೆ. ಕಳಪೆ ಕಾಮಗಾರಿಯಿಂದ ಯಾವುದಾದರೂ ಅವಘಡಗಳು ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಎಂದು ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.