ADVERTISEMENT

ಕಾವೇರಿ ವನ್ಯಧಾಮ: ದಾಳಿ ನಡೆಸಿದರೂ ನಿಲ್ಲದ ಮರಳು ಸಾಗಾಣೆ

ಅಕ್ರಮ ಸಾಗಣೆ ಅವ್ಯಾಹತ, ಪ್ರಕರಣ ದಾಖಲಿಸಿದರೂ ಬಗ್ಗದ ಮರಳುಕಳ್ಳರು

ಬಿ.ಬಸವರಾಜು
Published 5 ಸೆಪ್ಟೆಂಬರ್ 2020, 19:30 IST
Last Updated 5 ಸೆಪ್ಟೆಂಬರ್ 2020, 19:30 IST
ಅರಣ್ಯದೊಳಗೆ ತೆರಳಲು ಮರಳುಕಳ್ಳರು ಸೋಲಾರ್ ಬೇಲಿ ಕಿತ್ತು ದಾರಿ ಮಾಡಿಕೊಂಡಿರುವುದು
ಅರಣ್ಯದೊಳಗೆ ತೆರಳಲು ಮರಳುಕಳ್ಳರು ಸೋಲಾರ್ ಬೇಲಿ ಕಿತ್ತು ದಾರಿ ಮಾಡಿಕೊಂಡಿರುವುದು   

ಹನೂರು: ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯದಲ್ಲಿ ಅಕ್ರಮ ಮರಳು ಸಾಗಾಣಿಕೆ ಎಗ್ಗಿಲ್ಲದೇ ಸಾಗಿದೆ. ಅರಣ್ಯದೊಳಗೆ ನುಗ್ಗುವ ದುಷ್ಕರ್ಮಿಗಳು ರಾತ್ರಿವೇಳೆ ರಾಶಿಗಟ್ಟಲೆ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ.

ಕೊತ್ತನೂರು ವನ್ಯಜೀವಿ ವಲಯದ ಮಾಂಬೆಟ್ಟ ಬೀಟ್‌ನ ಇಪಿಟಿ 30ರ ಬಳಿಯಿರುವ ಡ್ಯಾಂನಲ್ಲಿ ಈ ಮರಳು ಸಾಗಾಣಿಕೆ ನಡೆಯುತ್ತಿದೆ. ಅರಣ್ಯದ ಸುತ್ತಲೂ ಅಳವಡಿಸಿರುವ ಸೋಲಾರ್ ಬೇಲಿ ಹಾಗೂ ಆನೆಕಂದಕವನ್ನು ಮುಚ್ಚಿರುವ ಮರಳುಗಳ್ಳರು, ರಾಜಾರೋಷವಾಗಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದಾರೆ.

ರಾತ್ರಿ ವೇಳೆ ದಾಸ್ತಾನು: ಆನೆಕಂದಕವನ್ನು ಮುಚ್ಚಿ ಅದರ ಮೂಲಕ ಅರಣ್ಯದೊಳಗೆ ಬರುವ ಕಳ್ಳರು ಮೊದಲು ಡ್ಯಾಂನಿಂದ ಮರಳನ್ನು ತಂದು ಡಿ.ಲೈನ್‌ನಿಂದ ಹೊರಗೆ ದಾಸ್ತಾನು ಮಾಡಿಕೊಳ್ಳುತ್ತಾರೆ. ಹಗಲಿನ ಹೊತ್ತು ತಮಗೆ ಬೇಕಾದ ಗ್ರಾಮದ ವ್ಯಕ್ತಿಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಹಲವು ತಿಂಗಳುಗಳಿಂದಲೂ ಇಲ್ಲಿ ಸಾಗಣಿಕೆ ನಡೆಯುತ್ತಿದೆ.ಅರಣ್ಯ ಅಧಿಕಾರಿಗಳು ಹಲವು ಬಾರಿ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಆದರೂ, ಮರಳು ಸಾಗಣೆ ನಿಂತಿಲ್ಲ.

ADVERTISEMENT

ಸ್ಥಳೀಯವಾಗಿ ಮಾರಾಟ:ರಾತ್ರಿ ವೇಳೆ ಅಕ್ರಮವಾಗಿ ಡಿ ಲೈನ್‌ನಿಂದ ಹೊರಗೆ ದಾಸ್ತಾನು ಮಾಡುವ ಮರಳನ್ನು ಬೆಳಗಿನ ಸಮಯದಲ್ಲಿ ಸುತ್ತಮುತ್ತಲ ಗ್ರಾಮಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಇಲ್ಲಿ ಮರಳು ಸಾಗಣೆ ಎಗ್ಗಿಲ್ಲದೇ ನಡೆಯುತ್ತಿದೆ.

‘ರಾತ್ರಿ ವೇಳೆ ಮರಳು ಸಾಗಾಣೆ ಮಾಡುವಾಗ ಅರಣ್ಯಾಧಿಕಾರಿಗಳಿಗೆ ಸಾಕಷ್ಟು ಭಾರಿ ಕರೆ ಮಾಡಿ ಮಾಹಿತಿ ನೀಡಿದರೂ ಅವರು ಸ್ಥಳಕ್ಕೆ ಬರಲಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯ ವ್ಯಕ್ತಿಯೊಬ್ಬರು ಆರೋಪಿಸಿದರು.

ದಾಳಿ ನಡೆಸಿ, ಪ್ರಕರಣ ದಾಖಲಿಸಿದರೂ ನಿಂತಿಲ್ಲ

ವನ್ಯಧಾಮದ ಹಲವು ಕಡೆ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದಿರುವ ಅರಣ್ಯ ಅಧಿಕಾರಿಗಳು ಈಗಾಗಲೇ ಸಾಕಷ್ಟು ಭಾರಿ ದಾಳಿ ನಡೆಸಿ ಮರಳು ಹಾಗೂ ಸಾಗಾಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಹೀಗಿದ್ದರೂ ಅಕ್ರಮ ಚಟುವಟಿಕೆ ನಿಲ್ಲದಿರುವುದು ಅಧಿಕಾರಿಗಳನ್ನು ಚಿಂತೆಗೀಡುಮಾಡಿದೆ. ಮರಳು ಸಾಗಾಣೆ ಮಾಡುವ ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಿದರೂ ಕಳ್ಳರು ಮರಳು ಸಾಗಣೆ ಮುಂದುವರೆಸಿರುವುದು ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ.

‘ಮಾಂಬೆಟ್ಟ ಬೀಟ್ ನ ಸಿಪಿಟಿ 30ರಲ್ಲಿ ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಈಗಾಗಲೇ ಮೂರು ಬಾರಿ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಈಗ ಮರಳು ಸಾಗಣೆಯಾಗುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಕೊತ್ತನೂರು ವನ್ಯಜೀವಿ ವಲಯದ ಪ್ರಭಾರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮರಳು ಸಾಗಾಣಿಕೆ ಬಗ್ಗೆ ಮಾಹಿತಿ ಇಲ್ಲ. ಸ್ಥಳೀಯ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಲು ಸೂಚಿಸುತ್ತೇನೆ’ ಎಂದು ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್‌.ರಮೇಶ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.