ADVERTISEMENT

ಗ್ರಾಹಕರ ವಿಶ್ವಾಸವೇ ಅಭಿವೃದ್ಧಿಯ ಮಂತ್ರ: ಸುತ್ತೂರು ಶ್ರೀ ಅಭಿಮತ

ಅರುಂಧತಿ ಕ್ರೆಡಿಟ್ ಕೋಆಪರೇಟಿವ್ ಸೂಸೈಟಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 13:56 IST
Last Updated 22 ಸೆಪ್ಟೆಂಬರ್ 2024, 13:56 IST
ಚಾಮರಾಜನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಅರುಂಧತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾದಾರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾಗವಹಿಸಿದ್ದರು
ಚಾಮರಾಜನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಅರುಂಧತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾದಾರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾಗವಹಿಸಿದ್ದರು    

ಚಾಮರಾಜನಗರ: ‘ಸಹಕಾರ ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಮುಂದಾಗಿರುವ ಅರುಂಧತಿ ಕ್ರೆಡಿಟ್ ಕೋಆಪರೇಟಿವ್ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದು ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅರುಂಧತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ‘ಜ್ಞಾನ, ಅಜ್ಞಾನ, ಕತ್ತಲು, ಬೆಳಕು ಒಂದೆಡೆ ಇರುತ್ತದೆ. ಮನುಷ್ಯ ಜ್ಞಾನ ಸಂಪಾದನೆ ಮಾಡಿದರೆ ಅಜ್ಞಾನ ದೂರವಾಗುತ್ತದೆ. ಬೆಳಕಿನೆಡೆಗೆ ಬಂದರೆ ಕತ್ತಲು ಸರಿಯುತ್ತದೆ ಎಂದರು.

‘ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುಲು ಹೆಚ್ಚು ಗಮನ ಕೊಡಬೇಕು. ಬಡ ವರ್ಗದ ಮಕ್ಕಳ ಶಿಕ್ಷಣಕ್ಕೆ ಸರ್ಕಾರದಿಂದ  ಹಲವು ಸೌಲಭ್ಯಗಳು ದೊರಕುತ್ತಿದ್ದು, ಸುದುಪಯೋಗ ಪಡಿಸಿಕೊಳ್ಳಬೇಕು. ಶಾಲೆಯಲ್ಲಿ ಕಲಿಯುವ ಶಿಕ್ಷಣಕ್ಕಿಂತ ಸಮಾಜದಲ್ಲಿ ಕಲಿಯುವ ಶಿಕ್ಷಣ ಪ್ರಮುಖವಾದುದು’ ಎಂದು ಶ್ರೀಗಳು ಹೇಳಿದರು.

ADVERTISEMENT

ಕೆಲವು ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಗ್ರಾಹಕರಿಂದ ಹೆಚ್ಚಿನ ಠೇವಣಿ ಇರಿಸಿಕೊಳ್ಳುತ್ತವೆ. ಕೊನೆಗೆ ಬಡ್ಡಿಯೂ ಕೊಡದೆ, ಠೇವಣಿ ಇಟ್ಟ ಅಸಲೂ ಹಿಂದಿರುಸದೆ ಮೋಸ ಮಾಡುತ್ತವೆ. ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವ ರೀತಿಯಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು  ಹೇಳಿದರು.

900 ವರ್ಷಗಳ ಹಿಂದೆ ಬಸವೇಶ್ವರರು ಸಾಮಾಜಿಕ ಸಮಾನತೆಗೆ ಬದುಕನ್ನೇ ಸಮರ್ಪಿಸಿಕೊಂಡರು.  ಡಾ. ಬಿ.ಆರ್.ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಟ್ಟಿ ಅಡಿಪಾಯ ಹಾಕಿದೆ. ಡಾ.ಬಾಬು ಜಗಜೀವನರಾಂ ಅವರು ಸೇವೆಯ ಮೂಲಕವೇ ಪ್ರಧಾನಿ ಹುದ್ದೆಗೇರಿದರು ಎಂದು ಸ್ಮರಿಸಿದರು.

ಚಿತ್ರದುರ್ಗದ ಶಿವಶರಣ ಮಾದಾರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಅರುಂಧತಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಎತ್ತರಕ್ಕೆ ಬೆಳೆಯಲಿ’ ಎಂದು ಆಶಿಸಿದರು.

ಹಿಂದೆ ಬ್ಯಾಂಕ್‌ಗಳ ಪ್ರವೇಶ ಮೇಲ್ವರ್ಗವರಿಗೆ ಮಾತ್ರ ಸಾಧ್ಯ ಎಂಬ ವಾತಾವರಣ ಇತ್ತು. ತೀರಾ ಹಿಂದುಳಿದ ಸಮುದಾಯಗಳಿಗೆ ಪ್ರವೇಶ ಸಾಧ್ಯವಿರಲಿಲ್ಲ. ಆರ್ಥಿಕ ಸ್ವಾವಲಂಬನೆ ಹೊಂದಿರುವ ಸಮುದಾಯಗಳಿಗೆ ಸಮನಾಗಿ ಸಮುದಾಯ ಬೆಳೆಯಬೇಕು ಎಂದು ಕರೆ ನೀಡಿದು.

ಅಜ್ಞಾನ, ಅಂಧಕಾರ, ಮೂಡನಂಬಿಕೆ ದೂರ ಮಾಡಿ ಸುಜ್ಞಾನದೊಂದಿಗೆ ಮುನ್ನಡೆದಾಗ ಮಾತ್ರ ಸಮುದಾಯದಲ್ಲಿ ಬದಲಾವಣೆ ಸಾಧ್ಯ ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸುತ್ತೂರು ಶ್ರೀಗಳು ಉದ್ಘಾಟಿಸಿರುವ ಅರುಂಧತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ  ಯಶಸ್ಸಿನತ್ತ ಸಾಗಲಿದೆ. ಸಹಕಾರ ಸಂಘದ ಬೆಳವಣಿಗೆ ಸಾಂಘಿಕ ಶ್ರಮ ಅಗತ್ಯ ಎಂದರು.

ಸಂಘದ ಅಧ್ಯಕ್ಷ ಅರಕಲವಾಡಿ ಜವರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಅರುಂಧತಿ ಕೋಆಪರೇಟಿವ್‌ ಸೊಸೈಟಿಯು ಸಮುದಾಯದ ಆರ್ಥಿಕ  ಸ್ವಾವಲಂಬನೆಗೆ ಒತ್ತು ನೀಡುವುದರ ಜತೆಗೆ ಸದಸ್ಯತ್ವ ಹೆಚ್ಚು ಮಾಡುವುದು, ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ನೋಂದಣಿ, ಸದಸ್ಯರ ಆರೋಗ್ಯ ವಿಮಾ ಸೌಲಭ್ಯ, ಕಿರು ಸಾಲ ಯೋಜನೆ, ಮಹಿಳಾ ಸಂಘಗಳಿಗೆ ಆರ್ಥಿಕ ಸಾಲಸೌಲಭ್ಯ ಒದಗಿಸಲು ಒತ್ತು ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಹಸಗೂಲಿ ಸಿದ್ದಯ್ಯ, ಕರವೇ ಅಧ್ಯಕ್ಷ ಚಾ.ಗು.ನಾಗರಾಜು, ಗುತ್ತಿಗೆದಾರ ಎಂ.ಮಹದೇವಸ್ವಾಮಿ, ಪಿಡಿಒ ಎಂ.ಮಹದೇವಸ್ವಾಮಿ, ತಾಲ್ಲೂಕು ಬಿಸಿಎಂ ಅಧಿಕಾರಿ ಲಿಂಗರಾಜು, ಸಂಘದ ನಿರ್ದೇಶಕರಾದ ಸಿ.ಮಹದೇವಯ್ಯ, ರೇವಣ್ಣ, ಎಚ್.ಎಚ್.ನಾಗರಾಜು, ಗುರುಲಿಂಗಯ್ಯ, ಕೆ.ಹನುಮಂತರಾಜು, ಪಿ.ಶಿವಮಲ್ಲು, ಎಂ.ಶಿವಕುಮಾರ್, ಸಿದ್ದಯ್ಯ,ಸಿದ್ದೇಶ್, ನಂಜಮ್ಮಣಿ ಎಸ್ ಲಿಂಗಣ್ಣ, ಶಾಂತರಾಜು ದೇವರಾಜು,  ಸಿಇಒ ಶಿವಕುಮಾರ್, ವಕೀಲರಾದ ಬೂದಿತಿಟ್ಟು ರಾಜೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.