ಚಾಮರಾಜನಗರ: ‘ಮಹಿಳೆ ತ್ಯಾಗ, ಪ್ರೀತಿಯ ಸಂಕೇತ. ಈ ಸಮಾಜದಲ್ಲಿ ಹೆಣ್ಣಿನ ಜವಾಬ್ದಾರಿ, ಮಹತ್ವದ ಬಗ್ಗೆ ಎಷ್ಟು ಹೇಳಿದರೂ ಸಾಲದು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್‌ಪುರಿ ಅವರು ಸೋಮವಾರ ಹೇಳಿದರು.
ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಾಯಿ ಕಷ್ಟ ಪಟ್ಟು ತನ್ನ ಮಕ್ಕಳನ್ನು ಸಾಕಿ ಸಲುಹಿ ಜೀವನವನ್ನೇ ತ್ಯಾಗ ಮಾಡುತ್ತಾಳೆ. ಆದ್ದರಿಂದಲೇ ತಾಯಿಯನ್ನು ತ್ಯಾಗಮಯಿ. ದೇವರಿಗೆ ಸಮಾನ. ದೈವವೆಂದೇ ಪೂಜಿಸುವ ತಾಯಿಯನ್ನು ಇಳಿವಯಸ್ಸಿನಲ್ಲಿ ಅನಾಥಾಶ್ರಮಕ್ಕೆ ಯಾರೂ ದೂಡಬಾರದು’ ಎಂದು ಕಿವಿ ಮಾತು ಹೇಳಿದರು.
ಮುಖ್ಯ ಭಾಷಣಕಾರರಾದ ಮೈಸೂರು ವಿ.ವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಅವರು ಮಾತನಾಡಿ, ‘ನಮ್ಮ ದೇಶದಲ್ಲಿ ಹಲವು ದಿನಗಳನ್ನು ಆಚರಿಸುತ್ತೇವೆ. ಆದರೆ ಮಹಿಳಾ ದಿನವನ್ನು ಮಾತ್ರ ಇಡೀ ಜಗತ್ತೇ ಜಾಗತಿಕ ಹಬ್ಬವನ್ನಾಗಿ ಆಚರಿಸುತ್ತದೆ. ಮಹಿಳಾ ದಿನ ಎಂಬುದು ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರಕ್ಕೆ ಹೋರಾಟ ಮಾಡಿದ ದಿನ. ಮಹಿಳಾ ದಿನಕ್ಕಾಗಿ ವಿಶ್ವಸಂಸ್ಥೆ ಪ್ರತೀ ವರ್ಷ ಘೋಷವಾಕ್ಯ ನೀಡುತ್ತದೆ. ‘ಸವಾಲನ್ನು ಸ್ವೀಕರಿಸಿ’ ಎಂಬುದು ಈ ಬಾರಿಯ ಘೋಷವಾಕ್ಯ. ಅದಕ್ಕಾಗಿ ನಾವು ಸಹ ಸವಾಲನ್ನು ಸ್ವೀಕರಿಸೋಣ’ ಎಂದರು.
‘ಸ್ತ್ರೀ ಮತ್ತು ಪುರುಷರು ಸಮಾನರು ಎಂಬ ಸ್ತ್ರೀವಾದವನ್ನು ಮೊದಲು ಪ್ರತಿಪಾದಿಸಿದವರಲ್ಲಿ ಈ ನೆಲದ ಪವಾಡ ಪುರುಷರಾದ ಮಹದೇಶ್ವರರು. ಸಂಕಮ್ಮಳೇ ಸಾಲೇ ಇದಕ್ಕೆ ಉದಾಹರಣೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಸಂಕಷ್ಟ ಅನುಭವಿದ್ದು ಮಹಿಳೆಯರು. ಆರ್ಥಿಕವಾಗಿ, ಕೌಟುಂಬಿಕ, ಮಕ್ಕಳ ಪಾಲನೆ ವಿಚಾರದಲ್ಲಿ ಬಹಳ ಕಷ್ಟ ಅನುಭವಿಸಿದ್ದಾರೆ. ಸಂಕಷ್ಟದ ನಡುವೆಯೂ ಛಲ ಬಿಡದೇ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸಿದ ಸ್ತ್ರೀಯರನ್ನು ಛಲಗಾತಿ ಎಂದೇ ಕರೆಯಬಹುದು’ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಮೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿದರು.
ಹೆಚ್ಚುವರಿಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ. ವಿನಯ್, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಗಣಪತಿ ಜಿ. ಬಾದಾಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಪಾಷಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ವಿ.ಸ್ಮಿತಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಮಂಜು ಹರವೆ, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಲೋಲಾಕ್ಷಿ, ಎಸ್. ಗುರುಸ್ವಾಮಿ, ಕೆ.ಯೋಗೇಶ್, ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಜಿ.ಪಿ.ಸುರೇಶ್, ನ್ಯಾಯಾಂಗ ಇಲಾಖಾ ನೌಕರರ ಸಂಘದ ಅಧ್ಯಕ್ಷ ವಿ.ಯಂಕನಾಯಕ, ಕಾರ್ಯದರ್ಶಿ ಎಚ್.ರಾಘವೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.