ಯಳಂದೂರು: ಇವರು ಹಾಡಿದರೆ ವನರಾಗದ ಆಲಾಪ ಕಿವಿ ತುಂಬುತ್ತದೆ. ಗೋರುಕಾನಾ ನೃತ್ಯ, ಹಾಡು, ಓಲಗ, ಕಗ್ಗಗಳಿಗ ಇವರು ಹೆಜ್ಜೆ ಹಾಕಿದರೆ ನೋಡುವುದೇ ಚೆನ್ನ. ಬುಡಕಟ್ಟು ಮಹಿಳೆಯರ ಸಂಘಟನೆ, ಶಿಕ್ಷಣಕ್ಕೂ ಸೈ...
ಕಾಡಿನ ನಡುವೆ ಇದ್ದು, ರಾಜಕಾರಣದಲ್ಲೂ ಲವಲವಿಕೆಯಿಂದ ಭಾಗವಹಿಸುವ ಬಿಳಿಗಿರಿರಂಗನಬೆಟ್ಟದ ಕೇತಮ್ಮ ಬೊಮ್ಮಯ್ಯ ಬುಡಕಟ್ಟು ಜನರ ದನಿಯಾಗಿ ಗುರುತಿಸಿಕೊಂಡವರು.
ತಾಲ್ಲೂಕಿನ ಬಿಆರ್‌ಟಿ ವನ್ಯಧಾಮದ ಪೋಡು, ಜನವಸತಿಗಳ ಕಲ್ಯಾಣಕ್ಕೆ ಸದಾ ಟೊಂಕಕಟ್ಟಿ ನಿಲ್ಲುವ 50ರ ಕೇತಮ್ಮ ಅವರದ್ದು ದಣಿವರಿಯದ ಕಾಯಕ. ಅನಕ್ಷರಸ್ಥ ಸೋಲಿಗ ಭಗಿನಿಯರ ಕಂಬನಿ ಒರೆಸಿ, ಹತ್ತಾರು ಸವಲತ್ತು ಕಲ್ಪಿಸಿದ್ದಾರೆ. ಕಾಡು ಮಕ್ಕಳ ಕಲಿಕೆ, ಹಾಡಿ ಮಂದಿಯ ಜೀವನೋಪಾಯಕ್ಕೆ ಅವಕಾಶ ನೀಡಿ, ಸಂಘ ಸಂಸ್ಥೆಗಳಲ್ಲಿ ತರಬೇತಿ ಒದಗಿಸಿ ಆದಾಯ, ಅಕ್ಷರ ಮತ್ತು ಅರಿವು ನೀಡಲು ಶ್ರಮಿಸುತ್ತಿದ್ದಾರೆ. ಪತಿ ಬೊಮ್ಮಯ್ಯ ಅವರ ಒತ್ತಾಸೆಯೂ ಸೇರಿದೆ. ಇಬ್ಬರು ಮಕ್ಕಳಿದ್ದು, ಉನ್ನತ ಶಿಕ್ಷಣ ಪಡೆದಿದ್ದಾರೆ.
‘ಪ್ರಾಥಮಿಕ ತರಗತಿವರೆಗೆ ಕಲಿತಿದ್ದೇನೆ. ವಿಜಿಕೆಕೆಯಲ್ಲಿ ಪ್ರಥಮ ಮಹಿಳಾ ನಿರ್ದೇಶಕಿಯಾಗಿದ್ದ ಅನುಭವವಿದೆ. ಲ್ಯಾಂಪ್ಸ್ ಸೊಸೈಟಿ, ಸೋಲಿಗ ಅಭಿವೃದ್ಧಿ ಸಂಘಟನೆಗಳಿಗೆ ನೆರವು, ಕುಡಿಯುವ ನೀರು, ಅರಣ್ಯ ಸಂರಕ್ಷಣೆ, ಕಿರು ಅರಣ್ಯ ಉತ್ಪನ್ನಗಳ ಸಂಗ್ರಹ, ಗಿರಿವಾಸಿಗಳ ಮೂಲ ಸೌಕರ್ಯ ವಿಸ್ತರಣೆಗೆ ಪ್ರಥಮ ಆದ್ಯತೆ ನೀಡಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದರು.
ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ, ಆರಾಧನಾ ಕಮಿಟಿ, ಅರಣ್ಯ ಹಕ್ಕು ಸಮಿತಿ ಉಪ ವಿಭಾಗದ ಸದಸ್ಯರಾಗಿ 2500 ಸೋಲಿಗರಿಗೆ ಹಕ್ಕುಪತ್ರ ವಿತಸರಿಸಲು ನೆರವಾಗಿದ್ದಾರೆ.
ಅರಣ್ಯ ಕಾರ್ಯಪಡೆ ರಾಜ್ಯ ಸಮಿತಿ ಸದಸ್ಯರಾ, ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ನಿರ್ದೇಶಕಿಯಾಗಿ ಆದಿವಾಸಿಗಳ ಆರ್ಥಿಕತೆಗೆ ಜೀವ ತುಂಬಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ಜನಸೇವೆಯಲ್ಲಿ ತೊಡಗಿ, ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಸ್ತ್ರೀ ಶಕ್ತಿ ಸಂಘ, ಮಹಿಳಾ ಸಬಲೀಕರಣ, ಮೂಢನಂಬಿಕೆಗಳ ವಿರುದ್ಧ ಜಾಗೃತಿ, ಬಾಲ್ಯ ವಿವಾಹ ನಿಷೇಧ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, ಸೋಲಿಗ ಸಂಸ್ಕೃತಿ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದು, ವನಿತೆಯರ ಶ್ರೇಯೋಭಿವೃದ್ಧಿಗೆ ಸದಾ ಸ್ಪಂದಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ.
2500 ಸೋಲಿಗರಿಗೆ ಹಕ್ಕುಪತ್ರ ವಿತಸರಿಸಲು ನೆರವು ಸ್ತ್ರೀ ಶಕ್ತಿ ಸಂಘ, ಮಹಿಳಾ ಸಬಲೀಕರಣಕ್ಕೆ ಶ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.