ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಈಚೆಗೆ ಕಾಡಾನೆಗೆ ಕೆಲವರು ತೊಂದರೆ ನೀಡುತ್ತಿದ್ದು ಈ ಬಗ್ಗೆ ಪರಿಸರ ಪ್ರೇಮಿಗಳಿಂದ ಟೀಕೆಗಳು ವ್ಯಕ್ತವಾಗಿವೆ.
ಹಲವು ವರ್ಷಗಳಿಂದ ಆನೆ ದೇವಾಲಯದ ಸುತ್ತಲೂ ಓಡಾಡುತ್ತಿದ್ದು ಭಕ್ತರು ಬಿಸಾಡುವ ಪ್ರಸಾದ ಸೇವಿಸುವುದನ್ನು ರೂಢಿಮಾಡಿಕೊಂಡಿದ್ದು ಆನೆ ಬಂದಾಕ್ಷಣ ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದಾರೆ. ದೇವಸ್ಥಾನ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಪ್ರವಾಸಿಗರು ಆನೆಯ ಹತ್ತಿರ ಹೋಗಿ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುವುದು, ಕೋಲು ಹಿಡಿದು ಬೆದರಿಸುವುದು, ಪಟಾಕಿ ಸಿಡಿಸಿ ಆಕ್ರೋಶಗೊಳ್ಳುವಂತೆ ಮಾಡುವುದು, ಪ್ರಸಾದ ನೀಡುವಂತೆ ಮಾಡಿ ಸೆಲ್ಫಿ ತೆಗೆದುಕೊಳ್ಳುವುದನ್ನ ಮಾಡುತ್ತಿದ್ದಾರೆ.
ಇದರಿಂದ ಕಾಡಾನೆಯ ಸಹಜ ಜೀವನಕ್ಕೆ ಅಡ್ಡಿಯಾಗಿದ್ದು ಪ್ರವಾಸಿಗರ ಮೇಲೂ ದಾಳಿ ಮಾಡುವ ಆತಂಕ ಎದುರಾಗಿದೆ ಎಂದು ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
‘ಕಾಡಾನೆ ದೇವಸ್ಥಾನದ ಆವರಣಕ್ಕೆ ಬಂದರೆ ಮರಳಿ ಕಾಡಿಗೆ ಓಡಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕೇ ಹೊರತು ಸಾರ್ವಜನಿಕರು ಮಾಡಬಾರದು. ಆನೆಗೆ ಪ್ರಸಾದ ನೀಡುವ ದುಸ್ಸಾಹಸಕ್ಕೆ ಕೈಹಾಕಬಾರದು. ಆನೆ ಶಾಂತ ಸ್ವಭಾವದಿಂದ ಕೂಡಿದ್ದರೂ ಕೆಲವು ಸಮಯದಲ್ಲಿ ಕೋಪಗೊಳ್ಳುತ್ತದೆ. ಜನರ ಜೀವಕ್ಕೆ ಸಂಚಕಾರವಾಗುವ ಅಪಾಯವೂ ಎದುರಾಗುತ್ತದೆ. ಕಾಡಿನ ಆನೆಗಳ ಜೊತೆಗೆ ಅಂತರ ಕಾಪಾಡಿಕೊಳ್ಳುವುದು ಅವಶ್ಯ’ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ಬಸವರಾಜು.
ಆನೆ ಹಲವು ವರ್ಷಗಳಿಂದ ದೇವಸ್ಥಾನದ ಸುತ್ತ ಬರುವುದು ಸಾಮಾನ್ಯವಾಗಿದ್ದು ಪ್ರವಾಸಿಗರು ಆನೆಗೆ ಕಿರಿಕಿರಿ ನೀಡುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಈ ಹಿಂದೆ ಕ್ರಮ ಕೈಗೊಂಡಿತ್ತು. ಆನೆಯು ದೇವಸ್ಥಾನದ ಸುತ್ತಮುತ್ತ ಕಾಣಿಸಿಕೊಂಡರೆ ದೇಗುಲದ ಆವರಣದೊಳಗೆ ಪ್ರವೇಶಿಸದಂತೆ ತಡೆದು ಕಾಡಿಗೆ ಓಡಿಸುವ ಪ್ರಯತ್ನ ಮಾಡುತ್ತಿದ್ದರು.
‘ಆನೆ ಪ್ರಸಾದ ಸೇವನೆ ಮಾಡುವುದನ್ನು ತಪ್ಪಿಸಲು ದೇವಾಲಯದಲ್ಲಿ ಉಳಿಯುವ ಪ್ರಸಾದವನ್ನು ಹಾಕದಂತೆ ದೇವಸ್ಥಾನದ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿತ್ತು. ಇದೀಗ ದೇವಸ್ಥಾನಕ್ಕೆ ಬರುವ ಭಕ್ತರು ಪ್ರಸಾದವನ್ನು ಆನೆಗೆ ಚೆಲ್ಲುವ ಕೆಲಸ ಮಾಡುತ್ತಿದ್ದಾರೆ. ಆಹಾರ ನೀಡುತ್ತಾ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ, ಕೆಲವರು ಜೋರು ಶಬ್ಧ ಮಾಡಿ ಕೆಣಕುತ್ತಿದ್ದಾರೆ’ ಎಂದು ರೈತ ಮುಖಂಡ ಬಸವರಾಜು ದೂರುತ್ತಾರೆ.
‘ಅರಣ್ಯ ಇಲಾಖೆ ಕಾಡಾನೆಯನ್ನು ಅರಣ್ಯದೊಳಗೆ ಓಡಿಸುವ ಕೆಲಸ ಮಾಡಬೇಕು, ಪ್ರಸಾದ ಚೆಲ್ಲುವ, ಆನೆಯನ್ನು ಕೆರಳಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.
25 ವರ್ಷಗಳಿಂದ ಆನೆ ದೇವಾಲಯದ ಸುತ್ತಮುತ್ತ ಓಡಾಡುತ್ತಿದೆ. ಆನೆಗೆ ಪ್ರಸಾದ ನೀಡದಂತೆ ದೇವಸ್ಥಾನದ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ. ಆನೆಯನ್ನು ಎಷ್ಟೇ ದೂರ ಓಡಿಸಿದರೂ ಬರುತ್ತಿದೆ. ಮತ್ತೆ ದೂರ ಓಡಿಸಲು ತಂಡ ರಚಿಸಲಾಗುವುದು.ಪ್ರಭಾಕರನ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಜಾಲತಾಣದಲ್ಲಿ ವಿಡಿಯೊ
ಒಂದು ವಾರದ ಹಿಂದಷ್ಟೆ ಹಿಮವದ್ ಗೋಪಾಸ್ವಾಮಿ ದೇವಸ್ಥಾನದ ಆವರಣದಿಂದ ಆನೆಯನ್ನು ಓಡಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗಿತ್ತು. ಆನೆಯನ್ನು ಓಡಿಸುವ ಭರದಲ್ಲಿ ಕೆಲವರು ಪಟಾಕಿ ಸಿಡಿಸುತ್ತಾ ಆನೆಯನ್ನು ಅಟ್ಟಿಸಿಕೊಂಡು ಹೋಗುವ ಹಾಗೂ ಆನೆ ದಾಳಿಗೆ ಯತ್ನಿಸುವ ದೃಶ್ಯಗಳು ವಿಡಿಯೊದಲ್ಲಿತ್ತು. ಕಾಡಾನೆಗೆ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.