ADVERTISEMENT

ಗುಂಡ್ಲುಪೇಟೆ: ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ ಮಾಸ್ಕ್‌

ವಿಲೇವಾರಿ ಮಾಡದ ಜನ; ಪ್ರಾಣಿ, ಪಾಕ್ಷಿಗಳ ಜೀವಕ್ಕೆ ತೊಂದರೆ

ಮಲ್ಲೇಶ ಎಂ.
Published 28 ಸೆಪ್ಟೆಂಬರ್ 2020, 19:30 IST
Last Updated 28 ಸೆಪ್ಟೆಂಬರ್ 2020, 19:30 IST
ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಎಸೆದಿರುವುದು
ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಎಸೆದಿರುವುದು   

ಗುಂಡ್ಲುಪೇಟೆ: ಕೋವಿಡ್‌–19 ಹರಡುವಿಕೆ ತಡೆಯಲು ಬಳಸಲಾಗುತ್ತಿರುವ ಮಾಸ್ಕ್, ಗ್ಲೌಸ್‌ಗಳನ್ನು ಸಾರ್ವಜನಿಕರು ಬಳಕೆ ನಂತರ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ.

ಕಾಡಂಚಿನ ಗ್ರಾಮಗಳು ಮತ್ತು ಪ್ರವಾಸಿ ತಾಣಗಳಲ್ಲಿ ಸರಿಯಾಗಿ ವಿಲೇವಾರಿ ಮಾಡದ ಮಾಸ್ಕ್‌, ಗ್ಲೌಸ್‌ಗಳು ಕಂಡು ಬರುತ್ತಿದ್ದು, ಕಾಡು ಪ್ರಾಣಿಗಳಿಗೆ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಪಟ್ಟಣ ಪ್ರದೇಶದಲ್ಲಿ ಪೌರ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಬಟ್ಟೆಯ ಮಾಸ್ಕ್‌ಗಳಿಂಗಿತಲೂ ಹೆಚ್ಚಾಗಿ ಕ್ಲಿನಿಕಲ್‌ ಬಳಕೆಯ ಮಾಸ್ಕ್‌ನಿಂ‌ದಾಗಿ ಸಮಸ್ಯೆ ಹೆಚ್ಚು.

ಪಟ್ಟಣದಲ್ಲಿ ಪೌರ ಕಾರ್ಮಿಕರು ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ ಆಯುವ ಕಾರ್ಮಿಕರು ಮಾಸ್ಕ್‌ಗಳನ್ನು ಆಯ್ದು ಸುಡುತ್ತಿದ್ದಾರೆ.

ADVERTISEMENT

‘ಎಲ್ಲರೂ ಮಾಸ್ಕ್ ಗಳನ್ನು ಧರಿಸುತ್ತಾರೆ. ಕೆಲವರು ಅದನ್ನು ಮರುಬಳಕೆ ಮಾಡಿದರೆ, ಇನ್ನೂ ಕೆಲವರು ಬಿಸಾಡುತ್ತಾರೆ. ತಾಲ್ಲೂಕಿನ ಸುತ್ತಮುತ್ತಲಿನ ಅನೇಕ ಗ್ರಾಮಗಳು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದೆ. ಗ್ರಾಮಗಳಿಗೆ ಜಿಂಕೆ, ಹಂದಿ, ಸಾರಾಂಗ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ಬರುತ್ತದೆ. ಸೋಂಕಿನ ಗುಣ ಲಕ್ಷಣಗಳು ಇರುವವರು ಹೀಗೆ ಬಿಸಾಡುವುದರಿಂದ ಕಾಡು ಪ್ರಾಣಿಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಅದ್ದರಿಂದ ನಾಗರಿಕರು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇಲ್ಲವೇ ಮರುಬಳಕೆ ಮಾಡುವ ಮಾಸ್ಕ್ ಬಳಸಬೇಕು’ ಎಂದು ಪಕ್ಷಿ ಪ್ರೇಮಿ ಶಶಿಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮೀಣ ಜನರು ಅರಿವಿನ ಕೊರತೆಯಿಂದ ಎಸೆಯುತ್ತಾರೆ. ಇದರ ಬಗ್ಗೆ ಜಾಗೃತಿ ಮಾಡಿಸಬೇಕು. ಬೇಸಿಗೆಯಲ್ಲಿ ಕಾಳ್ಗಿಚ್ಚಿನ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವ ಹಾಗೆಯೇ, ಅರಣ್ಯ ಇಲಾಖೆಯವರು ಮಾಸ್ಕ್ ವಿಲೇವಾರಿ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸಬೇಕು’ ಎಂದು ವನ್ಯ ಜೀವಿ ಛಾಯಾಗ್ರಾಹಕ ದೀಪಕ್ ತ್ಯಾಗರಾಜನ್ ಮೊದಲಿಯಾರ್‌ ಹೇಳಿದರು.

ವೈದ್ಯರ ಸಲಹೆ: ‘ಬಳಸಿದ ಮಾಸ್ಕ್ ಎಸೆಯುವ ಮುನ್ನ ಡೆಟಾಲ್‍ನಲ್ಲಿ ತೊಳೆಯಿರಿ. ಅಥವಾ ಬಿಸಿಲಲ್ಲಿ 7 ರಿಂದ 8 ಗಂಟೆ ಒಣಗಿಸಿದ ನಂತರ ಕಸದ ಬುಟ್ಟಿಗೆ ಹಾಕಿ. ಇದರಿಂದ ಇತರರಿಗೆ ಸೋಂಕು ಹರಡದಂತೆ ತಡೆಯಬಹುದು. ಮಾಸ್ಕ್ ವಿಲೇವಾರಿ ಮಾಡಿದ ನಂತರ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಿ’ ಎಂದು ವೈದ್ಯ ಡಾ.ವೆಂಕಟಸ್ಬಾಮಿ ಅವರು ಸಲಹೆ ನೀಡಿದರು.

‘ಗ್ರಾಮೀಣ ಭಾಗದಲ್ಲಿ ಗುಬ್ಬಚ್ಚಿ ಸೇರಿದಂತೆ ಅನೇಕ ಪಕ್ಷಿಗಳು ಮನೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ. ಮಾಸ್ಕ್‌ಗಳು ಅವುಗಳ ಕಾಲು ಹಾಗೂ ಕೊಕ್ಕುಗಳಿಗೆ ಸಿಕ್ಕಿ ಹಾಕಿಕೊಂಡರೆ ಪ್ರಾಣಕ್ಕೆ ಅಪಾಯ ಇರುತ್ತದೆ’ ಎಂದು ಪಕ್ಷಿ ಪ್ರೇಮಿ ರವಿಕುಮಾರ್ ಅವರು ಅಭಿಪ್ರಾಯ ಪಟ್ಟರು.

ಪ್ರವಾಸಿಗರಲ್ಲಿ ಜಾಗೃತಿ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಟಿ.ಬಾಲಚಂದ್ರ ಅವರು, ‘ಸೋಂಕಿನ ಭೀತಿಯಿಂದ ಸಾರ್ವಜನಿಕರು ಮಾಸ್ಕ್‌ ಧರಿಸುವುದು, ಕೈಗಳಿಗೆ ಗ್ಲೌಸ್‌ ಧರಿಸುವುದು ಹೆಚ್ಚು ಮಾಡಿದ್ದಾರೆ. ಆದರೆ, ಬಳಕೆಯ ನಂತರ ಇವುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ತೊಂದರೆಯಾಗುತ್ತಿದೆ. ಸಫಾರಿಗೆ ಬರುವವರಿಗೆ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು ಎಂದು ತಿಳಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.