ADVERTISEMENT

ಮಹದೇಶ್ವರ ಬೆಟ್ಟ: ಕಸದ ರಾಶಿಯಲ್ಲಿ ಪತ್ತೆಯಾದ ದಂತ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 14:12 IST
Last Updated 2 ಫೆಬ್ರುವರಿ 2021, 14:12 IST
ಕಸದ ರಾಶಿಯಲ್ಲಿದ್ದ ಆನೆ ದಂತ
ಕಸದ ರಾಶಿಯಲ್ಲಿದ್ದ ಆನೆ ದಂತ   

ಮಹದೇಶ್ವರ ಬೆಟ್ಟ: ಇಲ್ಲಿನ ತಂಬಡಿಗೇರಿಯ ಹೊಸಕೊಳ ಎಂಬಲ್ಲಿ ಮುರಿದ ಆನೆದಂತವೊಂದು ಎರಡು ದಿನಗಳ ಹಿಂದೆ ಪತ್ತೆಯಾಗಿದೆ.

ಕಸದ ರಾಶಿಯಲ್ಲಿದ್ದ ದಂತವನ್ನು ಹಿಡಿದು ಮಕ್ಕಳು ಆಟವಾಡುತ್ತಿದ್ದರು. ಇದನ್ನು ಗಮನಿಸಿದಸ್ಥಳೀಯ ಮುಖಂಡ ಈಶ್ವರ್‌ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು ದಂತವನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.

‘ಜನವರಿ 31ರಂದು ಸಂಜೆ 4 ಗಂಟೆ ಸುಮಾರಿಗೆ ನಾನು ನಡೆದುಕೊಂಡು ಬರುತ್ತಿರುವಾಗ ಚಿಕ್ಕ ಮಕ್ಕಳು ಬಿಳಿ ವಸ್ತುವನ್ನು ಹಿಡಿದು ಆಟವಾಡುತ್ತಿದ್ದರು. ಅನುಮಾನ ಬಂದು ಪರಿಶೀಲಿಸಿದಾಗ ದಂತ ಎಂಬುದು ಖಚಿತವಾಯಿತು. ಎಲ್ಲಿ ಸಿಕ್ಕಿತು ಎಂದು ಮಕ್ಕಳನ್ನು ವಿಚಾರಿಸಿದಾಗ ಕಸದ ರಾಶಿಯಲ್ಲಿ ಇತ್ತು ಎಂದು ಹೇಳಿ, ವಾಪಸ್‌ ಅಲ್ಲಿಯೇ ಹಾಕಿ ಹೋದರು. ನಂತರ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದೆ. ಅವರು ಸ್ಥಳಕ್ಕೆ ಬಂದು ಮಹಜರು ಮಾಡಿ, ತೆಗೆದುಕೊಂಡು ಹೋದರು’ ಎಂದು ಮುಖಂಡ ಈಶ್ವರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿರುವ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು, ‘ಸಿಕ್ಕಿರುವ ದಂತವು ಎಡ ಭಾಗದ್ದಾಗಿದೆ. 30 ವರ್ಷದ ಗಂಡಾನೆಯ ದಂತ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು ಆರು ವರ್ಷಗಳ ಹಿಂದೆಯೇ ದಂತವನ್ನು ತೆಗೆದಿರುವ ಸಾಧ್ಯತೆ ಇದೆ. ಈಗಾಗಲೇ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ’ ಎಂದು ಹೇಳಿದರು.

‘ದಂತ ಅಲ್ಲಿಗೆ ಹೇಗೆ ಬಂತು ಎಂಬುದರ ಬಗ್ಗೆ ಮಾಹಿತಿಯಿಲ್ಲ. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪ್ರಕರಣದ ತನಿಖೆಗಾಗಿ‌ ಮಾಡಲು ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಒಂದು ಪ್ರತ್ಯೇಕ ತನಿಖಾ ತಂಡವನ್ನು ರಚಿಸಿಲಾಗಿದೆ. ಶೀಘ್ರದಲ್ಲೇ ಪ್ರಕರಣವನ್ನು ಬೇಧಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.