ADVERTISEMENT

ಚಾಮರಾಜನಗರ: ಪೇಟೆಯಲ್ಲೀಗ ನೇರಳೆ ಹಣ್ಣಿನ ಭರಾಟೆ

ಆಷಾಢ ಮಾಸ: ಹೂವಿಗೆ ಕುಸಿದ ಬೇಡಿಕೆ, ತರಕಾರಿ, ಹಣ್ಣುಗಳ ಬೆಲೆ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 4:07 IST
Last Updated 13 ಜುಲೈ 2021, 4:07 IST
ಗ್ರಾಹಕರೊಬ್ಬರು ತಳ್ಳುಗಾಡಿ ವ್ಯಾಪಾರಿಯಿಂದ ನೇರಳೆ ಹಣ್ಣು ಖರೀದಿಸುತ್ತಿರುವುದು
ಗ್ರಾಹಕರೊಬ್ಬರು ತಳ್ಳುಗಾಡಿ ವ್ಯಾಪಾರಿಯಿಂದ ನೇರಳೆ ಹಣ್ಣು ಖರೀದಿಸುತ್ತಿರುವುದು   

ಚಾಮರಾಜನಗರ: ಜೂನ್‌–ಜುಲೈ ತಿಂಗಳು ನೇರಳೆ ಹಣ್ಣಿನ ಸಮಯ. ನಗರದ ಮಾರುಕಟ್ಟೆಯಲ್ಲಿ ಈಗ ನೇರಳೆ ಹಣ್ಣಿನ ಮಾರಾಟದ ಭರಾಟೆ. ಹಣ್ಣಿನ ಅಂಗಡಿಗಳಲ್ಲಿ, ತಳ್ಳುಗಾಡಿಗಳಲ್ಲಿ ಅಲ್ಲಲ್ಲಿ ಆಕರ್ಷಕ ನೇರಳೆ ಹಣ್ಣಿನ ರಾಶಿ ಕಂಡು ಬರುತ್ತಿದೆ.

ನಗರದಲ್ಲಿ ತಳ್ಳುಗಾಡಿಗಳಲ್ಲಿ ಮಾರಾಟ ಮಾಡುವವರೇ ಹೆಚ್ಚು. ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಲಭ್ಯವಾಗುವ ನೇರಳೆ ಹಣ್ಣು ರುಚಿಕರ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ಹೆಚ್ಚಿನ ಬೇಡಿಕೆ ಇದೆ. ಕೆಲವು ದಿನಗಳಿಂದ ಹಿಂದೆಯಷ್ಟೇ ಮಾರುಕಟ್ಟೆಗೆ ಬಂದಿರುವುದರಿಂದ ಕೆಜಿ ನೇರಳೆಗೆ ₹180–₹200ರವರೆಗೆ ವ್ಯಾಪಾರಿಗಳು ಹೇಳುತ್ತಿದ್ದಾರೆ. ಹಣ್ಣನ್ನು ದೊಡ್ಡ ಪ್ರಮಾಣದಲ್ಲಿ ಮಾರಲು ಹೊರಟಿರುವ ವ್ಯಾಪಾರಿಗಳು ಕಾಲು ಕೆಜಿಗೆ ₹40 ಹೇಳಿದರೆ, ಕಡಿಮೆ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವವರು ₹50 ಹೇಳುತ್ತಿದ್ದಾರೆ.

ಮೇ ತಿಂಗಳಿನಿಂದ ಜುಲೈ ನಡುವೆ ಸಿಗುವ ನೇರಳೆ ಹಣ್ಣು ಮಾರುಕಟ್ಟೆಯಲ್ಲಿ ಗರಿಷ್ಠ ಅಂದರೆ ಒಂದು ತಿಂಗಳು ಸಿಗಬಹುದು. ಆರಂಭದಲ್ಲಿ ಕೊಂಚ ದುಬಾರಿ ಬೆಲೆ ಇದ್ದರೂ, ನಂತರ ಕಡಿಮೆಯಾಗುತ್ತದೆ.

ADVERTISEMENT

ಎರಡೇ ದಿನ ಬಾಳಿಕೆ: ಕೊಯ್ದಿಟ್ಟನೇರಳೆಹಣ್ಣು ಬಾಳಿಕೆ ಬರುವುದು ಎರಡನೇ ದಿನ. ಹಾಗಾಗಿ ವ್ಯಾಪಾರಸ್ಥರು ಆದಷ್ಟೂ ಒಂದೇ ದಿನದಲ್ಲಿ ಮಾರಾಟ ಮಾಡಲು ಯತ್ನಿಸುತ್ತಾರೆ. ಸಂಜೆ ಹೊತ್ತಿಗೆ ಮುಗಿಯದಿದ್ದರೆ, ಕಡಿಮೆ ದರಕ್ಕೆ ಕೊಡುವವರೂ ಇದ್ದಾರೆ.

ಹಣ್ಣಿನ ಮಾರುಕಟ್ಟೆಯಲ್ಲಿ ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಸೇಬಿನ ದುಬಾರಿ ದರ (ಕೆಜಿಗೆ ₹200) ಮುಂದುವರಿದಿದೆ. ಹಾಪ್‌ಕಾಮ್ಸ್‌ನಲ್ಲಿ ಮೂಸಂಬಿ, ಕಿತ್ತಳೆ, ದಾಳಿಂಬೆ ಕೆಜಿಗೆ ₹120 ಇದೆ.

ಸೀತಾಫಲ ಹಣ್ಣು ಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಕೆಜಿಗೆ ₹40ರಿಂದ ₹50ರವರೆಗೆ ಇದೆ.

ಆಷಾಢ: ಹೂವಿಗೆ ಬೇಡಿಕೆ ಕುಸಿತ

ಆಷಾಢ ಮಾಸ ಆರಂಭವಾಗುತ್ತಲೇ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳಿಗೆ ಬೇಡಿಕೆ ಕುಸಿದಿದೆ. ಮಲ್ಲಿಗೆ ಬೆಳೆ ಅವಧಿ ಮುಕ್ತಾಯದ ಹಂತದಲ್ಲಿರುವುದರಿಂದ ಮಲ್ಲಿಗೆಯ ಬೆಲೆ ಮಾತ್ರ ಕೊಂಚ ಹೆಚ್ಚಾಗಿದೆ. ಉಳಿದ ಎಲ್ಲ ಹೂವುಗಳ ಬೆಲೆ ಇಳಿಮುಖವಾಗಿದೆ. ಸುಂಗಧರಾಜ ಹೂವನ್ನು ಕೇಳುವವರೇ ಇಲ್ಲ.

ನಗರಕ್ಕೆ ಸಮೀಪದ ಚೆನ್ನೀಪುರಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರಕ್ಕೆ ಕೆಜಿಗೆ ₹400 ಇತ್ತು. ಕಳೆದ ವಾರ ₹600 ಇತ್ತು. ಕಳೆದ ವಾರ ₹100 ಇದ್ದ ಮಲ್ಲಿಗೆಗೆ ₹160–₹200ರವರೆಗೆ ಬೆಲೆ ಇದೆ. ಸೇವಂತಿಗೆಗೆ ₹60ರಿಂದ ₹80ರವರೆಗೆ ಇದೆ.

’ಆಷಾಢದಲ್ಲಿ ಶುಭ ಸಮಾರಂಭಗಳು ಇಲ್ಲದಿರುವುದರಿಂದ ಹೂವುಗಳಿಗೆ ಬೇಡಿಕೆ ಕಡಿಮೆ. ಶ್ರಾವಣ ಮಾಸ ಆರಂಭವಾಗುವರೆಗೂ ಹೂವುಗಳ ದರ ಕಡಿಮೆಯೇ ಇರಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.