ADVERTISEMENT

ಜನತಾ ಜಲಧಾರೆ ರಥಕ್ಕೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 16:17 IST
Last Updated 17 ಏಪ್ರಿಲ್ 2022, 16:17 IST
ಚಾಮರಾಜನಗರಕ್ಕೆ ಭಾನುವಾರ ಸಂಜೆ ಬಂದ ಜನತಾ ಜಲಧಾರೆ ರಥವನ್ನು ಜೆಡಿಎಸ್‌ ಕಾರ್ಯಕರ್ತರು ಬೈಕ್‌ ರ‍್ಯಾಲಿ ನಡೆಸಿ ಸ್ವಾಗತಿಸಿದರು
ಚಾಮರಾಜನಗರಕ್ಕೆ ಭಾನುವಾರ ಸಂಜೆ ಬಂದ ಜನತಾ ಜಲಧಾರೆ ರಥವನ್ನು ಜೆಡಿಎಸ್‌ ಕಾರ್ಯಕರ್ತರು ಬೈಕ್‌ ರ‍್ಯಾಲಿ ನಡೆಸಿ ಸ್ವಾಗತಿಸಿದರು   

ಚಾಮರಾಜನಗರ: ಜಾತ್ಯತೀತ ಜನತಾದಳ (ಜೆಡಿಎಸ್‌) ಹಮ್ಮಿಕೊಂಡಿರುವ ಜನತಾ ಜಲಧಾರೆ ಯಾತ್ರೆಯು ಭಾನುವಾರ ಜಿಲ್ಲೆಯನ್ನು ಪ್ರವೇಶಿಸಿ ಸಂಜೆ ಕೊಳ್ಳೇಗಾಲ ತಲುಪಿತು.

ಜನತಾ ಜಲಧಾರೆ ರಥವು ಇದೇ 20ರವರೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಚರಿಸಲಿದೆ. ವಿವಿಧ ಜಲಾಶಯಗಳಿಗೆ ತೆರಳಿ ಅಲ್ಲಿನ ನೀರನ್ನು ಸಂಗ್ರಹಿಸಲಿದೆ.

ಭಾನುವಾರ ಬೆಳಿಗ್ಗೆಬೇಗೂರು ಮೂಲಕ ಜಿಲ್ಲೆಯನ್ನು ಪ್ರವೇಶಿಸಿದ ರಥವನ್ನು ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿದರು. ಗುಂಡ್ಲುಪೇಟೆಗೆ ಬಂದ ರಥ, ನಂತರ ತೆರಕಣಾಂಬಿ ಮಾರ್ಗವಾಗಿ ಚಾಮರಾಜನಗರ ಕ್ಷೇತ್ರಕ್ಕೆ ಬಂತು. ವೀರನಪುರ, ಬಣ್ಣಾರಿ ಅಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವೀರನಪುರ ನಂಜದೇವನಪುರ ಮಾರ್ಗವಾಗಿ ಪಣ್ಯದಹುಂಡಿಗೆ ಬಂದು ಅಲ್ಲಿಂದ ಚಾಮರಾಜನಗರ ತಲುಪಿತು. ನಗರದ ಚಿಕ್ಕಂಗಡಿ, ದೊಡ್ಡಂಗಡಿ ಬೀದಿಯ ಮೂಲಕ ಪ್ರವಾಸಿ ಮಂದಿರದವರೆಗೆ ಸಾಗಿ ನಂತರ ಡೀವಿಯೇಷನ್‌ ರಸ್ತೆಯ ಮೂಲಕ ಭುವನೇಶ್ವರಿ ವೃತ್ತಕ್ಕೆ ಬಂತು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌ ಅವರು, ‘ಶನಿವಾರ ಕಬಿನಿ ಜಲಾಶಯದಲ್ಲಿ ಯಾತ್ರೆಗೆ ಪಕ್ಷದ ವರಿಷ್ಠ ದೇವೇಗೌಡ ಅವರು ಚಾಲನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಇನ್ನು ಮೂರು ದಿನಗಳ ಕಾಲ ಸಂಚರಿಸಲಿದ್ದು, ಹನೂರಿನಲ್ಲಿ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ನಂತರ ರಥವು ದೊಡ್ಡರಾಯಪೇಟೆ, ಸಂತೇಮರಹಳ್ಳಿ ಮಾರ್ಗವಾಗಿ ಯಳಂದೂರು ತಲುಪಿ ಅಲ್ಲಿಂದ ಕೊಳ್ಳೇಗಾಲ ತಲುಪಿತು.ಸೋಮವಾರ (ಏ.18) ಬೆಳಿಗ್ಗೆ 9 ಗಂಟೆಗೆ ಕೊಳ್ಳೇಗಾಲ ಗಣಪತಿ ದೇವಸ್ಥಾನದ ಪೂಜೆ ಮುಗಿಸಿ ಮಧುವನಹಳ್ಳಿ ಮೂಲಕ ಗುಂಡಾಲ್‌ ಜಲಾಶಯ, ಹನೂರು ಕಡೆ ತೆರಳಲಿದೆ.

ವಿಧಾನಪರಿಷತ್‌ ಸದಸ್ಯ ಮಂಜೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಅಕ್ರಂ, ಮುಖಂಡ ಸಿ.ಎಂ.ಕೃಷ್ಣಮೂರ್ತಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.