
ಚಾಮರಾಜನಗರ: ‘ವಿದ್ಯಾರ್ಥಿಗಳು ಅಂಕಕ್ಕಾಗಿ ಅಧ್ಯಯನ ಮಾಡದೆ ಬದುಕಿಗಾಗಿ ಅಧ್ಯಯನ ಮಾಡಬೇಕು. ಅದುವೇ ನಿಜವಾದ ಶಿಕ್ಷಣ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಶುಕ್ರವಾರ ತಿಳಿಸಿದರು.
ನಗರದ ಜೆ.ಎಸ್.ಎಸ್.ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್ಮದು ಗುರುಕುಲ ಪರಂಪರೆಯಿಂದ ಪ್ರಾರಂಭವಾದಂತಹ ಶಿಕ್ಷಣ ವ್ಯವಸ್ಥೆ. ಅದರೆ ಎಲ್ಲರಿಗೂ ಸಾರ್ವತ್ರಿಕವಾಗಿ ಶಿಕ್ಷಣ ಸಿಗುತ್ತಿರಲಿಲ್ಲ, ಸ್ವಾತಂತ್ರ್ಯದ ನಂತರ ಶಿಕ್ಷಣದ ವ್ಯವಸ್ಥೆಯಲ್ಲಿ ಅನೇಕ ಬದಲಾವಣಗಳು ಆಗಿವೆ’ ಎಂದರು.
‘ಇಂದು ಜೆ.ಎಸ್.ಎಸ್. ಸಂಸ್ಥೆ ಬರುವವರಿಗೆಲ್ಲಾ ಶಿಕ್ಷಣ ನೀಡುತ್ತೇವೆ ಎಂದು ಹೇಳುತ್ತಿದೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ನೀಡುತ್ತಿದೆ’ ಎಂದು ಹೇಳಿದರು.
10ನೇ ತರಗತಿಗೆ ಮಾತ್ರ ಪಬ್ಲಿಕ್ ಪರೀಕ್ಷೆ ಎಂದು ಹೇಳುತ್ತಿದ್ದೆವು. ಆದರೆ, 8, 9ನೇ ತರಗತಿಗೂ ಅದೇ ರೀತಿಯಲ್ಲಿ ಪರೀಕ್ಷೆ ಮಾಡುತ್ತಿದ್ದೇವೆ. ತರಗತಿಯಲ್ಲಿ ಮಾಡಿರುವ ಪಾಠದ ಆಧಾರದ ಮೇಲೆ ಪರೀಕ್ಷೆ ಮಾಡುತ್ತೇವೆ. ಹಾಗಾಗಿ, ಯಾವುದೇ ಭಯ ಬೇಡ. ಕಳೆದ ವರ್ಷ ಎಸ್.ಎಸ್.ಎಲ್.ಸಿ. ಫಲಿತಾಂಶ ಚೆನ್ನಾಗಿತ್ತು. ಈ ಬಾರಿ ಇನ್ನೂ ಹೆಚ್ಚಿನ ಫಲಿತಾಂಶ ಬರಬೇಕು’ ಎಂದು ಡಿಡಿಪಿಐ ತಿಳಿಸಿದರು.
ಕೊಳ್ಳೇಗಾಲ ಕನ್ನಡ ಭಾಷಾ ರಾಜ್ಯ ಸಂಪನ್ಮೂಲ ಶಿಕ್ಷಕ ಎಚ್.ಶಿವಣ್ಣ ಇಂದುವಾಡಿ ಮಾತನಾಡಿ, ‘ಇಂದು ವಿದ್ಯಾರ್ಥಿಗಳಿಗೆ ಮೌಲ್ಯವನ್ನು ಹೇಳುವಂತಹ ಪರಿಸ್ಥಿತಿ ಬಂದಿದೆ. ವಿದ್ಯಾರ್ಥಿಗಳು ಇವತ್ತು ಸಿಗುವಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳಿಗೆ ವಿನಯ ಮುಖ್ಯ ಮತ್ತು ಪ್ರತಿ ಅವಕಾಶ ಹೇಗೆ ಬಳಸಿಕೊಳ್ಳುತ್ತೀರಿ ಅದರ ಮೇಲೆ ನಿಮ್ಮ ಭವಿಷ್ಯ ನಿಂತಿರುತ್ತದೆ’ ಎಂದು ಕಿವಿ ಮಾತು ಹೇಳಿದರು.
ಜೆ.ಎಸ್.ಎಸ್.ಅಕ್ಷರ ದಾಸೋಹ ಸಮಿತಿ ಅಧ್ಯಕ್ಷ ಆರ್.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸೋಮಣ್ಣೇಗೌಡ, ಜೆ.ಎಸ್.ಎಸ್. ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಎನ್.ಜಿ.ನಾಗೇಶ್ವರಿ, ಜ್ಯೂವೆಲರ್ಸ್ ಮತ್ತು ಪಾನ್ ಬ್ರೋಕರ್ಸ್ ಸಂಘದ ಅಧ್ಯಕ್ಷ ಕೆ.ಪ್ರಕಾಶ್ ಚಂದ್ ಜೈನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.