ADVERTISEMENT

ನೀರಿನ ವ್ಯಾಪ್ತಿ ಗುರು‌ತಿಸಲು ಮುಂದಾದ ನೀರಾವರಿ ಇಲಾಖೆ

ಗುಂಡ್ಲುಪೇಟೆ: ಬಹುಕೋಟಿ ವಿದ್ಯುತ್‌ ವಿತರಣಾ ಕೇಂದ್ರ ಯೋಜನೆಗೆ ಕುತ್ತು, ಕಮರಹಳ್ಳಿ ಕೆರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 19:45 IST
Last Updated 22 ಜನವರಿ 2020, 19:45 IST
ನಿರ್ಮಾಣ ಹಂತದಲ್ಲಿರುವ ವಿದ್ಯುತ್‌ ವಿತರಣಾ ಕೇಂದ್ರದ ಬಳಿ ಕೆರೆಯ ನೀರು ನಿಂತಿರುವುದು
ನಿರ್ಮಾಣ ಹಂತದಲ್ಲಿರುವ ವಿದ್ಯುತ್‌ ವಿತರಣಾ ಕೇಂದ್ರದ ಬಳಿ ಕೆರೆಯ ನೀರು ನಿಂತಿರುವುದು   

ಗುಂಡ್ಲುಪೇಟೆ:ತಾಲ್ಲೂಕಿನ ಬೇಗೂರು ಹೋಬಳಿಯಲ್ಲಿ ಕೆಪಿಟಿಸಿಎಲ್‌ ನಿರ್ಮಿಸುತ್ತಿರುವ ಬಹುಕೋಟಿ ವೆಚ್ಚದ 220 ಕೆವಿ ಸಾಮರ್ಥ್ಯದ ವಿದ್ಯುತ್‌ ವಿತರಣಾ ಕೇಂದ್ರದವರೆಗೆ ಕಮರಹಳ್ಳಿ ಕೆರೆ ನೀರು ವ್ಯಾಪಿಸುವ ಆತಂಕ ಎದುರಾಗಿರುವ ಬೆನ್ನಲ್ಲೇ, ನೀರು ನಿಲ್ಲುವ ವ್ಯಾಪ್ತಿ ಗುರುತಿಸಲು ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ.

ಕಾವೇರಿ ನೀರಾವರಿ ನಿಗಮವು ಗಾಂಧಿ ಗ್ರಾಮ ಏತ ನೀರಾವರಿ ಯೋಜನೆ ಅಡಿಯಲ್ಲಿ ರಾಘವಾಪುರ, ಹಳ್ಳದಮಾದಹಳ್ಳಿ, ಗರನಹಳ್ಳಿ ಬಸವನಕಟ್ಟೆ, ಅಗತಗೌಡನಹಳ್ಳಿ, ಹಕ್ಕಲಪುರ, ಹೆಗ್ಗಡಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇಲ್ಲಿಗೆ ನೀರು ಹರಿಸಬೇಕಾದರೆ ಕಮರಹಳ್ಳಿ ಕೆರೆ ತುಂಬಬೇಕು. ಇಲ್ಲಿ ಪಂಪ್‌ಹೌಸ್‌ ನಿರ್ಮಿಸಿ ಅಲ್ಲಿಂದ ಇತರ ಕೆರೆಗಳಿಗೆ ಹರಿಸಲಾಗುತ್ತಿದೆ.

ಕೆರೆ ಭರ್ತಿಯಾಗಲು 10 ಅಡಿ ಬಾಕಿ ಇರುವಾಗ ಪಕ್ಕದ ಗೋಮಾಳದಲ್ಲಿ ಕೆಪಿಟಿಸಿಎಲ್‌ ಸ್ಥಾಪಿಸುತ್ತಿರುವ ವಿದ್ಯುತ್‌ ಕೇಂದ್ರದ ಬಳಿಗೂ ನೀರು ನುಗ್ಗಲು ಆರಂಭಿಸಿತು. ಇದರಿಂದಾಗಿ ಕೆರೆಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಲಾಗಿದೆ.

ADVERTISEMENT

ನೀರು ಸ್ಥಗಿತಗೊಂಡಿರುವುದರಿಂದ ಆಕ್ರೋಶಗೊಂಡಿರುವ ರೈತರು, ವಿದ್ಯುತ್‌ ಕೇಂದ್ರವನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮಂಗಳವಾರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಕಮರಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿರುವ ಅವರು, ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ.

‘ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಕೆರೆ ಸಂಪೂರ್ಣವಾಗಿ ಭರ್ತಿಯಾದರೆ ಎಲ್ಲಿವರೆಗೆ ನೀರು ಬರಬಹುದು ಎಂಬುದನ್ನು ತಿಳಿಯಲು ಮೂರು ದಿನಗಳ ಕಾಲಾವಕಾಶವನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೇಳಿದ್ದಾರೆ. ಆ ಬಳಿಕ ಉನ್ನತ ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ಚರ್ಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡೂ ಯೋಜನೆಗಳೂ ಜಿಲ್ಲೆಯ ಜನರಿಗೆ ಅನುಕೂಲವಾಗುವಂತಹದ್ದು. ವಿದ್ಯುತ್‌ ಕೇಂದ್ರ ಕೆರೆಯ ಅಂಗಳದಲ್ಲಿ ಇಲ್ಲ. ಅದು ಗೋಮಾಳದ ಜಾಗದಲ್ಲಿದೆ. ಆದರೆ, ಕೆರೆಯ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಅಲ್ಲಿಗೂ ನೀರು ಬರುತ್ತಿದೆ. ಜಿಲ್ಲಾಡಳಿತದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಉನ್ನತ ಹಂತದಲ್ಲಿ ಈ ಬಗ್ಗೆ ತೀರ್ಮಾನವಾಗಬೇಕು’ ಎಂದು ಅವರು ಹೇಳಿದರು.

ಬೇಗೂರು ಹೋಬಳಿಯ ಪೂರ್ವಭಾಗದಲ್ಲಿರುವ ಕಮರಹಳ್ಳಿ ಕೆರೆ ಆವರಣಕ್ಕೆ ಹೊಂದಿಕೊಂಡಿರುವ ಗೋಮಾಳದ ಪೈಕಿ ಸರ್ವೆ ನಂ: 137ರಲ್ಲಿ 10 ಎಕರೆ ಪ್ರದೇಶವನ್ನು 2001ರಲ್ಲಿ (ಎಂಆರ್:34/2001) ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗಾಗಿ ಹಕ್ಕು ಹಸ್ತಾಂತರ ಮಾಡಲಾಗಿತ್ತು.

ವಿದ್ಯುತ್‌ ಕೇಂದ್ರದ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ.ಕೇಂದ್ರ ಸ್ಥಾಪನಾ ವೆಚ್ಚ ಅಂದಾಜು ₹ 110–₹ 13 ಕೋಟಿ ವೆಚ್ಚವಾಗಲಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘30 ವರ್ಷಗಳಿಂದ ಕೆರೆಯಲ್ಲಿ ನೀರಿರಲಿಲ್ಲ. ದಶಕದ ಹಿಂದೆ ಯೋಜನೆ ರೂಪಿಸುವಾಗ ಅಧಿಕಾರಿಗಳಿಗೆ ನೀರು ನಿಲ್ಲುವ ವ್ಯಾಪ್ತಿ ಬಗ್ಗೆ ಮಾಹಿತಿ ಇದ್ದಿರಲಿಕ್ಕಿಲ್ಲ. ಈಗ ಕೆರೆ ತುಂಬಿಸುವ ಯೋಜನೆಯಿಂದಾಗಿ ಕೆರೆಗೆ ನೀರು ಹರಿಯುವಾಗ ನೀರಿನ ವ್ಯಾಪ್ತಿ ತಿಳಿದಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದೂರದೃಷ್ಟಿ ಕೊರತೆಯಿಂದ ಸಮಸ್ಯೆ?

ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪಿಸುವ ಯೋಜನೆ ರೂಪಿಸುವ ಸಂದರ್ಭದಲ್ಲಿ ಅಧಿಕಾರಿಗಳ ದೂರದೃಷ್ಟಿ ಕೊರತೆಯಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಹಾಗೂ ರೈತರು ಆರೋಪಿಸಿದ್ದಾರೆ.

‘ಹಿಂದಿನ ಅಧಿಕಾರಿಗಳು ಸರಿಯಾಗಿ ಯೋಚಿಸದೆ ಅಥವಾ ರಾಜಕಾರಣಿಗಳ ಒತ್ತಡ ಇಲ್ಲವೇ ಆಮಿಷಗಳಿಗೆ ಮಣಿದು ಕೆಲಸ ಮಾಡಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತ ಮುಖಂಡ ಮಾಡ್ರಹಳ್ಳಿ ಮಹಾದೇವಪ್ಪ ಬೇಸರ ವ್ಯಕ್ತಪಡಿಸಿದರು.

ವಿದ್ಯುತ್‌ ವಿತರಣಾ ಕೇಂದ್ರಕ್ಕೆ ನೀರು ಬರದಂತೆ ಮಾಡಲು ಏನೇನು ಮಾಡಬಹುದು ಎಂಬುದರ ಬಗ್ಗೆಯೂ ಅಧಿಕಾರಿಗಳು ಯೋಚಿಸುತ್ತಿದ್ದಾರೆ. ಕಂದಕ ನಿರ್ಮಾಣ, ತಡೆಗೋಡೆ ನಿರ್ಮಾಣದ ಬಗ್ಗೆಯೂ ಚರ್ಚಿಸುತ್ತಿದ್ದಾರೆ.

ಆದರೆ, ಏನು ಮಾಡಿದರೂ ನೀರು ನುಗ್ಗುವುದನ್ನು ತಡೆಯುವುದಕ್ಕೆ ಆಗುವುದಿಲ್ಲ ಎಂಬುದು ರೈತರ ಮಾತು.

‘ಮುಂದೆ ಆಗಬಹುದಾದ ಅನಾಹುತದ ಅರಿವಿಲ್ಲದೆ ಮಾಡಿರುವ ಕೆಲಸದಿಂದ ಜನರಿಗೆ ಉಪಯೋಗ ಆಗಬೇಕಾದ ಯೋಜನೆಯಿಂದ ತೊಂದರೆಯಾಗುತ್ತಿದೆ. ಅಂದು ಯಾವ ಅಧಿಕಾರಿಗಳು ಯೋಜನೆಗೆ ಈ ಸ್ಥಳ ನಿಗದಿ ಮಾಡಿದ್ದರೋ ಅವರೇ ನಷ್ಟವನ್ನು ಭರಿಸಿಕೊಡಬೇಕು’ ಎಂದು ಮಹಾದೇವಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.