
ಚಾಮರಾಜನಗರ: ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕದ 19 ಜಿಲ್ಲೆಗಳಲ್ಲಿ ಸದಾ ಗಡಿ ವಿವಾದ, ಭಾಷಾ ಹೇರಿಕೆ ಸದ್ದು ಮಾಡುತ್ತಿದ್ದರೆ ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಇಂದಿಗೂ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆಯಾಗಿ ಮೆರೆಯುತ್ತಿದೆ.
ರಾಜ್ಯದ ದಕ್ಷಿಣ ಭಾಗದ ತಳದಲ್ಲಿರುವ ಚಾಮರಾಜನಗರ ಜಿಲ್ಲೆ ತಮಿಳುನಾಡು ಮತ್ತು ಕೇರಳ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದ್ದರೂ ಇಂದಿಗೂ ಇಲ್ಲಿ ಭಾಷಾ ಸೌಹಾರ್ದತೆಯ ಬೇರುಗಳು ಗಟ್ಟಿಯಾಗಿವೆ. ಗಡಿ ವಿವಾದವೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ತಮಿಳು ಹಾಗೂ ಮಲಯಾಳಂ ಭಾಷೆಯ ನಡುವೆ ಕನ್ನಡದ ಅಸ್ಮಿತೆ ಗಟ್ಟಿಯಾಗಿ ಉಳಿದಿದೆ.
ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆಗಳು ಹೆಚ್ಚು ಸಕ್ರಿಯವಾಗಿರುವುದು ಹಾಗೂ ನಾಡು–ನುಡಿ–ಜಲ–ಗಡಿ ವಿಚಾರ ಬಂದಾಗ ಎಲ್ಲ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟಕ್ಕಿಳಿಯುವುದರಿಂದ ಗಡಿ ವಿವಾದವಾಗಲಿ, ಅನ್ಯಭಾಷೆಗಳ ಹಾವಳಿಯಾಗಲಿ ಕಾಣುವುದಿಲ್ಲ. ತಮಿಳಿಗರು, ಕೇರಳಿಗರು ಹಾಗೂ ಕನ್ನಡಿಗರ ನಡುವಿನ ಭಾಷಾ ಸಾಮರಸ್ಯವೂ ಜಿಲ್ಲೆಯಲ್ಲಿ ಸೌಹಾರ್ದದ ವಾತಾವರಣ ಮೂಡಲು ಕಾರಣವಾಗಿದೆ.
ದೇಶದ ಯಾವುದೇ ಮೂಲೆಯಲ್ಲಿ ನಾಡು–ನುಡಿಗೆ ಅವಮಾನವಾದರೆ ಮೊದಲು ಪ್ರತಿಭಟನೆಯ ಕೂಗು ಮೊಳಗುವುದು ಚಾಮರಾಜನಗರದಲ್ಲಿ ಎನ್ನುತ್ತಾರೆ ಕನ್ನಡಪರ ಹೋರಾಟಗಾರರ ಚಾರಂ ಶ್ರೀನಿವಾಸ ಗೌಡ.
ನೆಲೆ ಕಂಡುಕೊಂಡ ಅನ್ಯಭಾಷಿಕರು: ಜಿಲ್ಲೆಯಲ್ಲಿ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಸಾವಿರಾರು ಮಂದಿ ನೆಲೆ ಕಂಡುಕೊಂಡಿದ್ದು ವ್ಯಾಪಾರ, ವಹಿವಾಟು, ಕೃಷಿ ಸೇರಿದಂತೆ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಾತೃ ಭಾಷೆ ತಮಿಳು, ಮಲಯಾಳಂ ಆದರೂ ಕನ್ನಡಿಗರೊಂದಿಗೆ ಬೆರೆತು ಕನ್ನಡಿಗರೇ ಆಗಿರುವುದು ವಿಶೇಷ.
ನೆಲದ ಸಂಸ್ಕೃತಿ, ಆಚಾರ, ವಿಚಾರ ಪಾಲನೆಯ ಜೊತೆಗೆ ಚಾಮರಾಜನಗರ ಭಾಷಾ ಸೊಗಡನ್ನೂ ಮೈಗೂಡಿಸಿಕೊಂಡು ನಮ್ಮವರೇ ಆಗಿದ್ದಾರೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರ ಚಾ.ಗು.ನಾಗರಾಜ್.
ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಹನೂರು ತಾಲ್ಲೂಕುಗಳು ಕೇರಳ ಹಾಗೂ ತಮಿಳುನಾಡಿನ ಜೊತೆಗೆ ಗಡಿ ಹಂಚಿಕೊಂಡಿದ್ದು ಇಲ್ಲಿನ ರೈತರು ಬೆಳೆದ ತರಕಾರಿ ಸಹಿತ ಆಹಾರ ಪದಾರ್ಥಗಳು ಉಭಯ ರಾಜ್ಯಗಳಿಗೆ ಹೋಗುತ್ತಿದ್ದು ಪರಸ್ಪರ ಕೊಡು ಕೊಳ್ಳುವಿಕೆ ಶತಮಾನಗಳಿಂದಲೂ ಅನಾಚೂನವಾಗಿ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರರು.
‘1970ರ ಸಮಯದಲ್ಲಿ ಗಡಿ ಹೋರಾಟ ಹಾಗೂ ನಂತರದಲ್ಲಿ ಕಾವೇರಿ ಗಲಾಟೆ ನಡೆದಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಗಡಿ ಮತ್ತು ಭಾಷೆಗೆ ಸಂಬಂಧಿಸಿದಂತೆ ದೊಡ್ಡ ಘರ್ಷಣೆಗಳು ನಡೆದಿಲ್ಲ. ತಮಿಳಿಗರು ಹಾಗೂ ಕೇರಳಿಗರ ಜೊತೆಗೆ ಕನ್ನಡಿಗರ ಬಾಂಧವ್ಯ ಗಟ್ಟಿಯಾಗಿದೆ ಎನ್ನುತ್ತಾರೆ ರಂಗಕರ್ಮಿ ಕೆ.ವೆಂಕಟರಾಜು.
ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಗಡಿ ಜಿಲ್ಲೆಗಳಲ್ಲಿರುವಂತೆ ಗಡಿವಿವಾದವಾಗಲಿ, ಭಾಷಾ ಹೇರಿಕೆಯಾಗಲಿ ಚಾಮರಾಜನಗರದಲ್ಲಿ ಕಾಣುವುದಿಲ್ಲ. ಸಾಮರಸ್ಯ ಹಾಗೂ ಸೌಹಾರ್ದತೆಯ ಬೇರು ಜಿಲ್ಲೆಯಲ್ಲಿ ಇಂದಿಗೂ ಗಟ್ಟಿಯಾಗಿವೆ ಎನ್ನುತ್ತಾರೆ ಅವರು.
ಭಾಷಾ ಸೊಗಡು: ಜಿಲ್ಲೆಯ ಬಹುತೇಕ ಭಾಗ ಗ್ರಾಮಾಂತರ ಪ್ರದೇಶಗಳನ್ನು ಒಳಗೊಂಡಿದ್ದು ಇಲ್ಲಿನ ವಿಶಿಷ್ಟ ಭಾಷಾ ಸೊಗಡು ಹಾಗೂ ಭಾಷೆಯ ಮೇಲೆ ಜನರ ಅಭಿಮಾನ ಹಾಗೂ ವ್ಯಾಮೋಹ ಪರಭಾಷೆಗಳ ಹೇರಿಕೆಗೆ ಕಡಿವಾಣ ಹಾಕಿದೆ. ಗಡಿ ಜಿಲ್ಲೆಯಾದರೂ ಕನ್ನಡ ಚಿತ್ರಗಳ ಪ್ರದರ್ಶನ ಹೆಚ್ಚಾಗಿರುವುದು ಭಾಷೆ ಗಟ್ಟಿಗೊಳ್ಳಲು ಕಾರಣ.
ಹೊರ ರಾಜ್ಯಗಳಿಂದ ಬಂದು ನೆಲೆಕೊಂಡುಕೊಂಡಿರುವ ಬಹುತೇಕರು ಮನೆಯಲ್ಲಿ ಮಾತೃಭಾಷೆ ಮಾತನಾಡಿದರೂ ಹೊರಗೆ ವ್ಯಾವಹಾರಿಕವಾಗಿ ಕನ್ನಡವನ್ನೇ ಬಳಸುತ್ತಾರೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರರು.
ಆರಂಭದಲ್ಲಿ ಕೇರಳ ಹಾಗೂ ತಮಿಳುನಾಡಿನ ಜೊತೆಗಿನ ನಂಟು ವ್ಯಾಪಾರ ವಹಿವಾಟಿಗೆ ಸೀಮಿತವಾಗಿತ್ತು. ಕೆಲವು ದಶಕಗಳಿಂದ ವಿವಾಹಗಳು ಹೆಚ್ಚಾಗಿ ನಡೆಯುತ್ತಿದ್ದು ಬಾಂಧವ್ಯವೂ ಗಟ್ಟಿಯಾಗುತ್ತಿದೆ ಎನ್ನುತ್ತಾರೆ ತಮಿಳಿಗರಾದ ಮುರುಗನ್.
ಎಚ್ಚರ ತಪ್ಪಿದರೆ ಆಪತ್ತು: ಜಿಲ್ಲೆಯಲ್ಲಿ ಭಾಷಾ ಸಾಮರಸ್ಯ ಗಟ್ಟಿಯಾಗಿದ್ದರೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನಾಮಫಲಕಗಳಲ್ಲಿ ಸಂಪೂರ್ಣವಾಗಿ ಶೇ 60ರಷ್ಟು ಕನ್ನಡ ಭಾಷೆ ಬಳಕೆ ಪಾಲನೆಯಾಗಿಲ್ಲ.
ಇಲ್ಲಿನ ಬಿ.ರಾಚಯ್ಯ ಜೋಡಿ ರಸ್ತೆ, ಚಿಕ್ಕ ಅಂಗಡಿ, ದೊಡ್ಡ ಅಂಗಡಿ ಬೀದಿ, ಸತ್ತಿ ರಸ್ತೆ, ಗುಂಡ್ಲುಪೇಟೆ ರಸ್ತೆ, ಕೊಳ್ಳೇಗಾಲ ಹಾಗೂ ನಂಜನಗೂಡು, ಮೈಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿರುವ ಕೆಲವು ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಇಂಗ್ಲೀಷ್ ಭಾಷೆ ರಾರಾಜಿಸುತ್ತಿದ್ದು ಕನ್ನಡ ಮೂಲೆಗೆ ಸರಿದಿದೆ.
ಕನ್ನಡ ನಾಮಫಲಕಗಳ ಕಡ್ಡಾಯ ನಿಯಮ ಅನುಷ್ಠಾನದಲ್ಲಿ ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದರೆ ಕನ್ನಡಕ್ಕೆ ಕುತ್ತು ಬರುವ ದಿನಗಳು ದೂರವಿಲ್ಲ. ಸರೋಜಿನಿ ಮಹಿಷಿ ವರದಿ ಪ್ರಕಾರ ಜಿಲ್ಲೆಯ ಕೈಗಾರಿಕೆಗಳಲ್ಲಿ, ಉದ್ದಿಮೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇ 80ರಷ್ಟು ಉದ್ಯೋಗಗಳು ಸಿಗಬೇಕು ಎಂದು ಒತ್ತಾಯಿಸುತ್ತಾರೆ ಕನ್ನಡಪರ ಹೋರಾಟಗಾರರಾದ ಚಾರಂ ಶ್ರೀನಿವಾಸ ಗೌಡ, ಚಾಗು ನಾಗರಾಜ್.
ಕನ್ನಡಿಗರು ಅನ್ಯ ಭಾಷೆಗಳನ್ನು ವಿರೋಧಿಸುವುದಿಲ್ಲ; ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾದರೆ ಹೋರಾಟ ಅನಿವಾರ್ಯ. ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯಗಳ ಅಧಿಕಾರಿಗಳು ಹೆಚ್ಚಾಗಿದ್ದು ಕನ್ನಡ ಭಾಷೆಯಲ್ಲಿ ಸರ್ಕಾರದ ಸೇವೆಗಳು ಸಿಗುತ್ತಿಲ್ಲ. ಬಹುತೇಕ ಗ್ರಾಮೀಣ ಭಾಗಗಳು ಇರುವ ಜಿಲ್ಲೆಯಲ್ಲಿ ಜನರು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು.
ಹೊರ ರಾಜ್ಯಗಳಿಂದ ಬಂದಿರುವ ಅಧಿಕಾರಿಗಳಿಗೆ ಕನ್ನಡ ಭಾಷೆ ಕಲಿಸುವ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ವತಿಯಿಂದ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕನ್ನಡ ಪರೀಕ್ಷೆಗಳನ್ನು ಆಯೋಜಿಸಿ ಉತ್ತೀರ್ಣರಾಗುವಂತೆ ಪ್ರೇರೇಪಿಸಬೇಕು. ಹಿಂದೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡೇತರ ಅಧಿಕಾರಿಳಿಗೆ ಕನ್ನಡ ಕಲಿಸುವ ಕಾರ್ಯಕ್ರಮ ಆರಂಭಿಸಲಾಯಿತಾದರೂ ಕಲಿಕೆಗೆ ಉತ್ಸಾಹ ತೋರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ರಂಗಕರ್ಮಿ ಕೆ.ವೆಂಕಟರಾಜು.
‘ಮಾತೃಭಾಷೆ ಮನೆಗೆ ಸೀಮಿತ’ ಹನೂರು ತಾಲ್ಲೂಕಿನ ಗಡಿಭಾಗದಲ್ಲಿರುವ ಬಹುತೇಕ ಗ್ರಾಮಗಳ ಜನರ ಮಾತೃಭಾಷೆ ತಮಿಳಾಗಿದ್ದರೂ ಭಾಷಾ ಪ್ರೇಮ ಮನೆಗೆ ಸೀಮಿತವಾಗಿದೆ. ವ್ಯಾವಹಾರಿಕ ಹಾಗೂ ಶಿಕ್ಷಣದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಮೂಲಕ ಕನ್ನಡ ಭಾಷೆಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.–ಜಾನ್ ಡಾನ್ ಬೋಸ್ಕೋ ಮಾರ್ಟಳ್ಳಿ
‘ಕನ್ನಡ ಶಾಲೆಗಳು ಉಳಿಯಬೇಕು’ ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆಗೆ ಧಕ್ಕೆಯಾಗಿಲ್ಲವಾದರೂ ಕನ್ನಡ ಭಾಷೆಯನ್ನು ಮತ್ತಷ್ಟು ಸದೃಢಗೊಳಿಸುವ ಅಗತ್ಯವಿದೆ. ಗುಂಡ್ಲುಪೇಟೆ ತಾಲ್ಲೂಕಿನ ಪೆರಳೂರಿನಲ್ಲಿ 1869ರಲ್ಲಿ ಸ್ಥಾಪನೆಯಾದ ಕನ್ನಡ ಶಾಲೆ ಸೇರಿದಂತೆ ಜಿಲ್ಲೆಯಲ್ಲಿರುವ ಶತಮಾನಕಂಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಿದೆ.–ಕೆ.ವೆಂಕಟರಾಜು ಸಾಹಿತಿ
ಗಡಿ ಸೌಹಾರ್ದತೆ ರಾಜ್ಯದ ಇತರೆ ಗಡಿ ಜಿಲ್ಲೆಗಳಲ್ಲಿ ಕಾಣಲು ಸಾಧ್ಯವಿಲ್ಲದ ಭಾಷಾ ಸಾಮರಸ್ಯ ಗಡಿ ಸೌಹಾರ್ದತೆಯನ್ನು ಚಾಮರಾಜನಗರದಲ್ಲಿ ಕಾಣಬಹುದು. ಕೇರಳ ತಮಿಳುನಾಡು ಜೊತೆಗೆ ಗಡಿ ಹಂಚಿಕೊಂಡರೂ ಜಿಲ್ಲೆಯಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡ ಉಳಿದು ಬೆಳೆಯಲು ಕನ್ನಡಪರ ಸಂಘಟನೆಗಳ ಪಾತ್ರ ದೊಡ್ಡದಿದೆ.–ಚಾರಂ ಶ್ರೀನಿವಾಸ ಗೌಡ ಕನ್ನಡಪರ ಹೋರಾಟಗಾರ
‘ಭಾಷಾ ಸಾಮರಸ್ಯ ಗಟ್ಟಿ’ ತಮಿಳು ಹಾಗೂ ಕೇರಳ ಭಾಷಿಕರು ಕನ್ನಡಿಗರೊಂದಿಗೆ ಬೆರೆತು ಸ್ಥಳೀಯರೇ ಆಗಿದ್ದಾರೆ. ನೆಲ ಜಲ ಭಾಷೆಯ ವಿಚಾರದಲ್ಲಿ ಸೌಹಾರ್ದದ ವಾತಾವರಣ ಇದೆ. ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಸಂವಹನ ಸೇವೆ ಸಿಗಬೇಕು. ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾದರೆ ಹೋರಾಟದ ಕೂಗು ಮೊಳಗಲಿದೆ.–ಚಾ.ಗು.ನಾಗರಾಜ್ ಕನ್ನಡಪರ ಹೋರಾಟಗಾರ
ಹನೂರು ತಾಲ್ಲೂಕಿನ ಗಡಿಭಾಗದಲ್ಲಿರುವ ಬಹುತೇಕ ಜನರ ಮಾತೃಭಾಷೆ ತಮಿಳಾಗಿದ್ದರೂ ಕಲಿಕೆ ಹಾಗೂ ವ್ಯವಹಾರಿಕವಾಗಿ ಕನ್ನಡವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಮಾರ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಲದಮರ ಅಂಥೋಣಿಯಾರ್ ಕೋವಿಲ್ ವಡ್ಡರದೊಡ್ಡಿ ಹಳೆ ಮಾರ್ಟಳ್ಳಿ ಮಾರ್ಟಳ್ಳಿ ಸಂದನಪಾಳ್ಯ ನಾಲ್ ರೋಡ್ ಗ್ರಾಮಗಳ ಬಹುತೇಕ ಜನರು ಇಂದಿಗೂ ಮನೆಯಲ್ಲಿ ತಮಿಳು ಭಾಷೆ ಮಾತನಾಡಿದರೂ ಕನ್ನಡತನ ಬಿಟ್ಟುಕೊಟ್ಟಿಲ್ಲ. ತಮಿಳುನಾಡಿನ ಮೆಟ್ಟೂರು ಜಲಾಶಯ ನಿರ್ಮಾಣವಾದ ಸಂದರ್ಭದಲ್ಲಿ 13ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡು ಅಲ್ಲಿ ವಾಸ ಮಾಡುತ್ತಿದ್ದ ಸಾವಿರಾರು ಮಂದಿ ಕರ್ನಾಟಕಕ್ಕೆ ಬಂದು ನೆಲೆ ಕಂಡುಕೊಂಡರು. ರಾಜ್ಯಕ್ಕೆ ಬಂದು ಏಳೆಂಟು ದಶಕಗಳು ಕಳೆದರೂ ಇಂದಿಗೂ ಭಾಷೆ ಸಂಸ್ಕೃತಿ ವಿಷಯದಲ್ಲಿ ತಕರಾರು ಇಲ್ಲ. ಸ್ಥಳೀಯರೊಂದಿಗೆ ಸಮನ್ವಯದ ಬದುಕು ಸಾಗಿಸಿಕೊಂಡು ಬರುತ್ತಿದ್ದಾರೆ. ಶಿಕ್ಷಣದಲ್ಲಿ ಕನ್ನಡವನ್ನೇ ಪ್ರಥಮ ಭಾಷೆಯನ್ನು ಕಲಿಯುವುದರ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಗೌರವಿಸುವ ಕೆಲಸ ಮಾಡುತ್ತಿದ್ದಾರೆ. ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲೂರು ಹಂಚಿಪಾಳ್ಯ ಪೆದ್ದನಪಾಳ್ಯ ಕೂಡೂರು ಹೂಗ್ಯಂ ಹಾಗೂ ಜಲ್ಲಿಪಾಳ್ಯ ಗ್ರಾಮಗಳಲ್ಲಿ ವಾಸಿಸುತ್ತಿರುವ ಬಹುತೇಕರ ಮಾತೃಭಾಷೆ ತಮಿಳು. ಆದರೂ ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಓದಿಸುವ ಮೂಲಕ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಗಡಿಭಾಗವಾದ ಪಾಲಾರ್ ಹಳ್ಳದ ತಪ್ಪಲಿನಲ್ಲಿರುವ ಜನರು ತಮಿಳುನಾಡಿನ ಮೇಲೆ ಅವಲಂಬಿತರಾಗಿದ್ದಾರೆ. ತಮಿಳುನಾಡಿನ ಜೀವನ ಶೈಲಿ ಪಾಲಿಸುತ್ತಿದ್ದರೂ ಶಿಕ್ಷಣ ವ್ಯವಹಾರ ಇಂದಿಗೂ ಕನ್ನಡ ಭಾಷೆಯಲ್ಲಿಯೇ ನಡೆಯುತ್ತಿದೆ. ಕನ್ನಡ ಭಾಷೆ ಕಲಿಯಲು ಈ ಭಾಗದಲ್ಲಿ ಪ್ರಾಥಮಿಕ ಶಿಕ್ಷಣ ಮಾತ್ರ ಲಭ್ಯವಿದ್ದು ಉನ್ನತ ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ಬರಬೇಕಿದೆ. ಗಡಿಭಾಗದಲ್ಲೂ ಮಕ್ಕಳಿಗೆ ಕನ್ನಡ ಭಾಷೆಯಲ್ಲಿಯೇ ಉನ್ನತ ಶಿಕ್ಷಣ ಸಿಗುವಂತಾಗಬೇಕು ಎಂಬುದು ಇಲ್ಲಿನ ಜನರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.