
ಗುಂಡ್ಲುಪೇಟೆ: ಪ್ರತಿಯೊಬ್ಬ ಕನ್ನಡಿಗನು ಕನ್ನಡ ಭಾಷೆ ಉಳಿಸಲು ಬೆಳೆಸಲು ವೈಯಕ್ತಿಕ ಜವಾಬ್ದಾರಿ ಹೊಂದಬೇಕು ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಗೌರವ ಮತ್ತು ಪ್ರಾಮುಖ್ಯತೆ ನೀಡಲು ಪ್ರತಿಯೊಬ್ಬರಲ್ಲೂ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವಂತಹ ವಾತಾವರಣ ಸೃಷ್ಟಿಸಲು ಶ್ರಮಿಸೋಣ ಎಂದರು.
ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಉದ್ಯೋಗ ಅರಸಿಕೊಂಡು ಬರುವ ಹೊರ ರಾಜ್ಯದವರಿಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸುವುದರ ಮೂಲಕ ಅವರಿಗೆ ಕನ್ನಡ ಕಲಿಸಲು ಮುಂದಾಗಬೇಕು. ಗುಂಡ್ಲುಪೇಟೆ ತಾಲೂಕು ಬಹಳ ವಿಶೇಷವಾಗಿದ್ದು, ತಮಿಳುನಾಡು ಮತ್ತು ಕೇರಳ ಎರಡು ಅಂತರಾಜ್ಯ ಹೊಂದಿಕೊಂಡಿರುವ ಗಡಿ ಪ್ರದೇಶವಾಗಿದ್ದರು ಇಲ್ಲಿಗೆ ಬರುವ ವ್ಯಾಪಾರಸ್ಥರ ಜೊತೆ ಕನ್ನಡ ಭಾಷೆಯಲ್ಲಿ ಸಂವಹನ ನಡೆಸಿ ಕನ್ನಡ ಭಾಷೆಯನ್ನು ಉಳಿಸಿ, ಕಲಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಧ್ಜಜಾರೋಹಣ ನೆರವೇರಿಸಿ ತಹಸೀಲ್ದಾರ್ ಎಂ.ಎಸ್.ತನ್ಮಯ್ ಮಾತನಾಡಿ, ಕನ್ನಡ ರಾಜ್ಯೋತ್ಸವನ್ನು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತ ಮಾಡದೆ ವರ್ಷ ಪೂರ್ತಿ ಕನ್ನಡ ಹಬ್ಬವನ್ನು ಆಚರಿಸಿದಾಗ ಕನ್ನಡ ಆಚಾರ ವಿಚಾರ ಮತ್ತು ಸಂಸ್ಕೃತಿ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.
ಮುಖ್ಯಾ ಭಾಷಣಕಾರ ಶಿಕ್ಷಕ ಪಶುಪತಿ ಮಾತನಾಡಿ, 1956ಕ್ಕೆ ಮೊದಲೇ ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ಮೈಸೂರು ಪಾಂತ್ಯ ರಚನೆಗೆ ಬ್ರಿಟಿಷ್ ಅಧಿಕಾರಿ ಮುಂದಾಗಿದ್ದರು. ತದ ನಂತರ ಹಲವಾರು ಮಹನೀಯರು ಹೋರಾಟ ಫಲವಾಗಿ ಕರ್ನಾಟಕ ರಾಜ್ಯ ಉದಯವಾಯಿತು. 1973ರಲ್ಲಿ ಮೈಸೂರು ರಾಜ್ಯವನ್ನು ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕರ್ನಾಟಕ ಎಂದು ನಾಮಕರಣ ಮಾಡಿದರು. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ವಿಶ್ವದ ಹಳೆಯ ಭಾಷೆಯಾಗಿದೆ. ಕನ್ನಡ ರತ್ನತ್ರಯರು ಕನ್ನಡದ ಸಾಹಿತ್ಯವನ್ನು ಇಡೀ ಪ್ರಪಂಚಕ್ಕೆ ಪಸರಿಸಿದ್ದಾರೆ. ಯುನೆಸ್ಕೊ ಸಂಸ್ಥೆ ಕನ್ನಡ ಭಾಷೆಯನ್ನು ಶ್ರೀಮಂತ ಭಾಷೆ ಎಂದು ಒಪ್ಪಿಕೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಶಶಿಧರ್ ಪಿ.ದೀಪು, ಉಪಾಧ್ಯಕ್ಷ ಶ್ರೀನಿವಾಸ್ ಕಣ್ಣಪ್ಪ, ಸದಸ್ಯರಾದ ಎನ್.ಕುಮಾರ್, ಅಣ್ಣಯ್ಯಸ್ವಾಮಿ, ಜಿ.ಎಸ್.ಮಧುಸೂದನ್, ರಾಜಗೋಪಾಲ್, ನಿರ್ಮಲ, ಮಹದೇವಮ್ಮ, ಮಾಜಿ ಪುರಸಭಾ ಉಪಾಧ್ಯಕ್ಷ ಸುರೇಶ್ ಕಾರ್ಗಳ್ಳಿ, ತಾಪಂ ಇಒ ಷಣ್ಮುಖಂ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್ ಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಶರವಣ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅಲೀಂಪಾಷ, ದೈಹಿಕ ಪರಿವೀಕ್ಷಕ ಮಲ್ಲಪ್ಪ, ಸಿಪಿಐ ಜಯಕುಮಾರ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.