ADVERTISEMENT

ಡಾ.ರಾಜ್‌ ಕಂಠಕ್ಕೆ ಚಾಮರಾಜನಗರ ಭಾಷೆ ಸಿರಿ: ಪ್ರಕಾಶ್ ಮೇಹು

ಕರ್ನಾಟಕ ಸಾಹಿತ್ಯ ಅಕಾಡೆಮಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 16:18 IST
Last Updated 21 ಜುಲೈ 2024, 16:18 IST
ಚಾಮರಾಜನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ನಡೆದ ಕಾವ್ಯ ಸಂಸ್ಕೃತಿ ಯಾನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು
ಚಾಮರಾಜನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ನಡೆದ ಕಾವ್ಯ ಸಂಸ್ಕೃತಿ ಯಾನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು   

ಚಾಮರಾಜನಗರ: ‘ಚಾಮರಾಜನಗರ ಜಿಲ್ಲೆಯ ಆಡುಭಾಷೆಗಿರುವ ವೇಗ ಹಾಗೂ ಸ್ಪಷ್ಟನೆ ಬೇರೆ ಯಾವ ಭಾಷೆಗಳಲ್ಲೂ ಕಾಣಲು ಸಾಧ್ಯವಿಲ್ಲ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್ ಮೇಹು ಅಭಿಪ್ರಾಯಪಟ್ಟರು.

ಕಾವ್ಯ ಸಂಸ್ಕೃತಿ ಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ವರನಟ ಡಾ.ರಾಜ್‌ಕುಮಾರ್ ಅವರ ಸ್ಪಷ್ಟ ಹಾಗೂ ರಾಗಬದ್ಧ ಭಾಷಾ ಉಚ್ಚಾರದ ಹಿಂದೆಯೂ ಚಾಮರಾಜನಗರದ ಆಡುಭಾಷಾ ಸೊಗಡು ಅಡಗಿದೆ. ಸದಾ ಕೇಳಬೇಕು. ಚಾಮರಾಜನಗರ ಎಂದರೆ ಮಲೆ ಮಹದೇಶ್ವರ, ಮಂಟೇಸ್ವಾಮಿ, ಜನಪದ ಮಾತ್ರವಲ್ಲ ಭಾಷಾ ವೈಶಿಷ್ಟ್ಯದಿಂದಲೂ ವಿಶೇಷವಾಗಿದೆ’ ಎಂದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ‘ಪ್ರಸ್ತುತ ದಿನಮಾನಗಳಲ್ಲಿ ಕೇಳಿಸಿಕೊಳ್ಳುವುದನ್ನು ಮರೆತಿದ್ದು ಗದ್ದಲವೇ ವಿಜೃಂಭಿಸುತ್ತಿದೆ. ಓದುವ ಪ್ರವೃತ್ತಿಯ ಬದಲಾಗಿ ನೋಡುವ ಕ್ರಿಯೆಯೂ ಹೆಚ್ಚಾಗಿದೆ. ಮಕ್ಕಳ ಕಲ್ಪನಾಶಕ್ತಿ ಕುಂದಿದೆ. ಹಿಂದೆ ನಾವೆಲ್ಲರೂ ರಾಮನನ್ನು ಬೇರೆ ಬೇರೆಯಾಗಿ ಕಲ್ಪಿಸಿಕೊಳ್ಳುತ್ತಿದ್ದೆವು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲ ಮಕ್ಕಳ ಕಲ್ಪನೆಯಲ್ಲೂ ಒಬ್ಬನೇ ರಾಮ ಮೂಡುತ್ತಾನೆ. ಒಬ್ಬನೇ ರಾಮನನ್ನು ತೋರಿಸಿ ಮಕ್ಕಳ ತಲೆಗೆ ತುಂಬಿದ್ದೇವೆ. ಇಂತಹ ತೋರಿಸುವಿಕೆಯನ್ನು ಒಡೆಯಲು ಕಾವ್ಯವನ್ನು ಜನರೆಡೆಗೆ ಕೊಂಡೊಯ್ಯಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.

ADVERTISEMENT

‘ಚಾಮರಾಜನಗರದ ಫಲವತ್ತಾದ ಕಪ್ಪು ನೆಲದಲ್ಲಿ ಬಿತ್ತಿರುವ ಕಾವ್ಯ ಸಂಸ್ಕೃತಿ ಯಾನ ಎಂಬ ಬೆಳೆ ಸಮೃದ್ಧವಾದ ಬೆಳೆ ಕೊಡುತ್ತದೆ, ರಾಜ್ಯದೆಲ್ಲೆಡೆ ಪಸರಿಸುತ್ತದೆ ಎಂಬ ವಿಶ್ವಾಸ ಇದೆ’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶೈಲಕುಮಾರ್, ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ್ ಯರಗನಹಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷ ಮೂಡ್ನಾಕೂಡು ಚಿನ್ನಸ್ವಾಮಿ, ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ಬಸವರಾಜೇಂದ್ರ, ಸಮಾಜ ಸೇವಕ ಪರಮೇಶ್ವರಪ್ಪ, ಕಾರ್ಯಕ್ರಮದ ಸಂಚಾಲಕ ಸಿ.ಎಂ.ನರಸಿಂಹ ಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.