ADVERTISEMENT

ಕನ್ನಡದಲ್ಲಿ ಜ್ಞಾನ ಸಿಕ್ಕರೆ ಭಾಷೆ ಉಳಿವು: ಯು.ಬಿ.ಪವನಜ

​ಪ್ರಜಾವಾಣಿ ವಾರ್ತೆ
Published 18 ಮೇ 2024, 4:46 IST
Last Updated 18 ಮೇ 2024, 4:46 IST
<div class="paragraphs"><p>ಚಾಮರಾಜನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ನಡೆದ ವಿಕಿಪೀಡಿಯ ಸಮುದಾಯ ಬೆಳವಣಿಗೆ ಕಾರ್ಯಾಗಾರದಲ್ಲಿ ಯು.ಬಿ.ಪವನಜ ಮಾತನಾಡಿದರು. ಪ್ರಜ್ಞಾ ದೇವಾಡಿಗ, ಪ್ರಾಂಶುಪಾಲ ಮಹದೇವಸ್ವಾಮಿ, ಬಿ.ಎಸ್‌.ವಿನಯ್‌, ವರಪ್ರಸಾದ್‌ ಪಾಲ್ಗೊಂಡಿದ್ದರು</p></div>

ಚಾಮರಾಜನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ನಡೆದ ವಿಕಿಪೀಡಿಯ ಸಮುದಾಯ ಬೆಳವಣಿಗೆ ಕಾರ್ಯಾಗಾರದಲ್ಲಿ ಯು.ಬಿ.ಪವನಜ ಮಾತನಾಡಿದರು. ಪ್ರಜ್ಞಾ ದೇವಾಡಿಗ, ಪ್ರಾಂಶುಪಾಲ ಮಹದೇವಸ್ವಾಮಿ, ಬಿ.ಎಸ್‌.ವಿನಯ್‌, ವರಪ್ರಸಾದ್‌ ಪಾಲ್ಗೊಂಡಿದ್ದರು

   

ಚಾಮರಾಜನಗರ: ಕನ್ನಡ ಭಾಷೆ ಉಳಿಯಬೇಕಾದರೆ ಅಂತರ್ಜಾಲದಲ್ಲಿ ಮಾಹಿತಿ ಸಾಹಿತ್ಯ ಅಥವಾ ಜ್ಞಾನ ಕನ್ನಡದಲ್ಲಿ ಸಿಗುವಂತಾಗಬೇಕು’ ಎಂದು ತಂತ್ರಜ್ಞಾನ ಬರಹಗಾರ, ಕರಾವಳಿ ವಿಕಿಮಿಡಿಯನ್ಸ್‌ ಕಾರ್ಯದರ್ಶಿ ಯು.ಬಿ.ಪವನಜ ಗುರುವಾರ ಹೇಳಿದರು.

ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಹಮ್ಮಿಕೊಂಡಿರುವ ಎರಡು ದಿನಗಳ ವಿಕಿಪೀಡಿಯ ಸಮುದಾಯ ಬೆಳವಣಿಗೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ADVERTISEMENT

‘ಕಥನ ಸಾಹಿತ್ಯ ಕನ್ನಡದಲ್ಲಿ ಲಭ್ಯವಿದೆ. ಆದರೆ, ಮಾಹಿತಿ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಕನ್ನಡದಲ್ಲಿ ಇಲ್ಲ. ಅಂತರ್ಜಾಲದಲ್ಲಿ ನಾವು ಹುಡುಕುವ ಮಾಹಿತಿಗಳು ಇಂಗ್ಲಿಷ್‌ನಲ್ಲೇ ಹೆಚ್ಚು ಸಿಗುತ್ತಿವೆ’ ಎಂದರು.

‘ನಮ್ಮಲ್ಲಿ ಇಂಗ್ಲಿಷ್‌ ಬಗ್ಗೆ ಭ್ರಮೆ ಇದೆ. ಇಂಗ್ಲಿಷ್‌ ಗೊತ್ತಿದ್ದರೆ ಮಾತ್ರ ಅವಕಾಶ ಸಿಗುತ್ತದೆ; ಹೆಚ್ಚಾಗುತ್ತದೆ ಎಂಬ ಭಾವನೆ ಇದೆ. ಇದು ಸುಳ್ಳು. ಕನ್ನಡ ಕಲಿತರೂ ಅವಕಾಶ ಇದೆ. ಜ್ಞಾನ ಸಂಪಾದನೆ ಮಾಡಬಹುದು. ಜನರಲ್ಲಿರುವ ಇಂಗ್ಲಿಷ್‌ನ ಪಿತ್ತ ಹೋಗಬೇಕು ಎಂದರೆ, ಪ್ರಪಂಚದ ಜ್ಞಾನ ಕನ್ನಡದಲ್ಲಿ ಲಭ್ಯವಾಗಬೇಕು’ ಎಂದರು.

‘ವಿಕಿಪೀಡಿಯಾವು ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶವಾಗಿದ್ದು, ಜಗತ್ತಿನ 332 ಭಾಷೆಗಳಲ್ಲಿ, ಭಾರತದ 24 ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ. ವಿಕಿಪೀಡಿಯದಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ 60 ಲಕ್ಷ ಲೇಖನಗಳಿದ್ದರೆ, ಕನ್ನಡದಲ್ಲಿ 32 ಸಾವಿರವಷ್ಟೇ ಇದೆ’ ಎಂದು ಪವನಜ ಹೇಳಿದರು.

‘ವಿಕಿಪೀಡಿಯದಲ್ಲಿ ಯಾರು ಬೇಕಾದರೂ ಮಾಹಿತಿ ಸಂಪಾದನೆ ಮಾಡಬಹುದು. ಇಲ್ಲಿ ಲೇಖನ ಬರೆದವರಿಗೆ ಸಂಭಾವನೆ ಕೊಡುವುದಿಲ್ಲ. ಗೌರವ, ಸನ್ಮಾನಗಳು ಇರುವುದಿಲ್ಲ. ಮನ್ನಣೆಯ ದಾಹ ಉಳ್ಳ ಸಾಹಿತಿಗಳಿಗೆ, ಲೇಖಕರಿಗೆ ಇದು ವೇದಿಕೆಯಲ್ಲ. ವಿಕಿಪೀಡಿಯಗೆ ಲೇಖನ ಬರೆಯುವುದು ನಿಜವಾದ ಸಮಾಜಸೇವೆ’ ಎಂದರು.

ಕಾಲೇಜು ಪ್ರಾಂಶುಪಾಲ ಎನ್‌.ಮಹದೇವಸ್ವಾಮಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರಜ್ಞಾ ದೇವಾಡಿಗ, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ.ವರಪ್ರಸಾದ್‌, ಬೋಧಕರು, ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.