ಸಂತೇಮರಹಳ್ಳಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರಧ್ವಜ ಹಿಡಿದು ‘ಭಾರತ್ ಮಾತಾಕೀ ಜೈ..’ ಎಂದು ಕೂಗುತ್ತಾ ವೃತ್ತದ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು.
ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ವೀರಪ್ಪ ಮಾತನಾಡಿ, ‘ದೇಶದ ಪ್ರತಿಯೊಬ್ಬ ಪ್ರಜೆಯು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಅದರಲ್ಲೂ ಯುವಕರು ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ದೇಶ ಸೇವೆಯಂತಹ ಪುಣ್ಯ ಕಾರ್ಯ ಮತ್ತೊಂದಿಲ್ಲ’ ಎಂದರು.
‘ಇಂದಿನ ಯುವಕರು ದೇಶಕ್ಕೆ ಸಲ್ಲಿಸುವ ಸೇವೆ ಅಮೂಲ್ಯವಾಗಿರುತ್ತದೆ. ಕಾರ್ಗಿಲ್ ಸಮಯದಲ್ಲಿ ಪಾಕಿಸ್ತಾನದ ವಿರುದ್ಧಜಯಗಳಿಸಲು ಶ್ರಮಿಸಿದ ನಮ್ಮ ಯೋಧರ ಪರಾಕ್ರಮ ಮೆಚ್ಚುವಂತಹದ್ದು. ಜತೆಗೆ ಆ ಸಮಯದಲ್ಲಿ ವೀರ ಮರಣವನ್ನಪ್ಪಿದ ವೀರ ಯೋಧರಿಗೆ ಇಂದು ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದು ಹೇಳಿದರು.
ಬಿಜೆಪಿ ಕೊಳ್ಳೇಗಾಲ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎನ್.ನಾಗೇಶ್, ಜಿಲ್ಲಾ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಗುರು, ಮಹೇಶ್, ಅನಿಲ್, ಗುರುಪ್ರಸಾದ್, ನಾಗೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.