ಯಳಂದೂರು: ಮರಾಠಿಗರು ಕನ್ನಡಿಗರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಹಾಗೂ ಮೇಕೆದಾಟು, ಕಳಸ ಬಂಡೂರಿ, ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಶನಿವಾರ ಕರೆ ನೀಡಿದ್ದ ಬಂದ್ ಕರೆಗೆ ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಟ್ಟಣದಲ್ಲಿ ಮುಂಜಾನೆಯಿಂದ ಸಂಜೆ ತನಕ ಬಸ್ ಮತ್ತು ಆಟೊಗಳು ಎಂದಿನಂತೆ ಸಂಚರಿಸಿದವು. ಮೈಸೂರು, ಬೆಂಗಳೂರು, ಬಿಳಿಗಿರಿಬೆಟ್ಟ ಸೇರಿದಂತೆ ವಿವಿಧ ತಾಲ್ಲೂಕು ಕೇಂದ್ರಗಳಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸಂಚರಿಸಿದರು. ಹೋಟೆಲ್, ಅಂಗಡಿ ಮತ್ತು ಸಂತೆ ವ್ಯಾಪಾರಿಗಳು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಶಾಲಾ ಕಾಲೇಜು ಮತ್ತು ಆಸ್ಪತ್ರೆಗಳು ಎಂದಿನಂತೆ ನಡೆದವು.
ಪಟ್ಟಣದ ಹೋಟೆಲ್ ಮಾಲೀಕರು, ಕನ್ನಡ ಪರ ಸಂಘಟನೆಗಳು, ಸಾಹಿತ್ಯ ಸಂಸ್ಥೆಗಳು, ಆಟೊ ಚಾಲಕರು, ರೈತರು ಮತ್ತು ವಿದ್ಯಾರ್ಥಿಗಳು ಬಂದ್ ಬೆಂಬಲಿಸದ ಕಾರಣ ಪಟ್ಟಣ ಮತ್ತು ಗ್ರಾಮಗಳತ್ತ ಸಂಚಾರ ಎಂದಿನಂತೆ ಇತ್ತು, ಯಾವುದೇ ಪ್ರತಿಭಟನೆ ಕಂಡುಬರಲಿಲ್ಲ ಎಂದು ಪೋಲಿಸರು ತಿಳಿಸಿದರು.
ಕರವೇ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಉಪಾದ್ಯಕ್ಷ ವೈ.ಕೆ.ಮೋಳೆ ನಾಗರಾಜು ಮಾತನಾಡಿ, ‘ಮೇಕೆದಾಟು ಯೋಜನೆ ಜಾರಿಯಾಗಬೇಕು. ಲೋಕಸಭೆಯಲ್ಲಿ ಚರ್ಚೆಯಾಗಬೇಕು. ನಾಡಿನ ಜಲ, ಭಾಷೆ ಸಂರಕ್ಷಿಸುವ ಉದ್ದೇಶದಿಂದ ಎರಡು ದಿನಗಳಿಂದ ಮೇಕೆದಾಟು ಪ್ರದೇಶದಲ್ಲಿ ಪಾದಯಾತ್ರೆ ಕೈಗೊಂಡಿದ್ದೇವೆ. ಹಾಗಾಗಿ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಘೋಷಿಸಿರುವ ಬಂದ್‌ಗೆ ನಮ್ಮ ಬೆಂಬಲ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.