ಚಾಮರಾಜನಗರ: ಅರಣ್ಯದೊಳಗೆ ಜಾನುವಾರುಗಳ ಪ್ರವೇಶ ನಿರ್ಬಂಧಿಸುವ ಸರ್ಕಾರದ ನಿರ್ಧಾರಕ್ಕೆ ರೈತರು ಹಾಗೂ ಕಾಡಂಚಿನ ನಿವಾಸಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಿಷೇಧ ಆದೇಶವನ್ನು ಮಾರ್ಪಡಿಸಲಾಗಿದೆ.
ಅರಣ್ಯದೊಳಗೆ ಹೊರ ರಾಜ್ಯಗಳ ದನಕರುಗಳನ್ನು ಮೇಯಿಸುವುದಕ್ಕೆ ಮಾತ್ರ ನಿಷೇಧ ಹಾಕಲಾಗಿದ್ದು ಸ್ಥಳೀಯ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.
ಅರಣ್ಯ ಹಕ್ಕು ಕಾಯ್ದೆ-2006 ಅಡಿಯಲ್ಲಿ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ ಜಾನುವಾರು ಮೇಯಿಸಲು ಅವಕಾಶ ನೀಡಲಾಗಿದೆ. ನೆರೆ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದನಕರುಗಳನ್ನು ತಂದು ಮೇಯಿಸುವುದಕ್ಕೆ ಮಾತ್ರ ಕಡಿವಾಣ ಹಾಕಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕಾಡಂಚಿನ ರೈತರು ಅರಣ್ಯದೊಳಗೆ ಜಾನುವಾರುಗಳನ್ನು ಮೇಯಿಸಲು ಅರಣ್ಯ ಇಲಾಖೆಯಿಂದ ಅಡ್ಡಿಪಡಿಸುವುದಿಲ್ಲ ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್ ಒತ್ತಾಯಿಸಿದ್ದಾರೆ.
ಕಾಡಿನೊಂದಿಗೆ ಸಹಜೀವನ ನಡೆಸುತ್ತಿರುವ ರೈತರ ಜಾನುವಾರುಗಳಿಗೆ ಕಾಡಿನ ಪ್ರವೇಶ ನಿರ್ಬಂಧಿಸುವ ನಿರ್ಧಾರವೇ ಮೂರ್ಖತನದ್ದಾಗಿದೆ. ಕಾಡು ಉಳಿದಿರುವುದು ಸ್ಥಳೀಯ ರೈತರಿಂದ ಎಂಬ ಸತ್ಯವನ್ನು ಸರ್ಕಾರ ಅರಿಯಬೇಕು. ಕಾಡುಪ್ರಾಣಿಗಳ ದಾಳಿಯಿಂದ ರೈತ ಮೃತಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಕಾನೂನುಗಳ ಹೆಸರಿನಲ್ಲಿ ಕಾಡಂಚಿನ ರೈತರಿಗೆ ಕಿರುಕುಳ ನೀಡಬಾರದು ಎಂದು ಅವರು ಒತ್ತಾಯಿಸಿದರು.
ಅರಣ್ಯ ಇಲಾಖೆಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಜುಲೈ 26ರಂದು ಕೊಳ್ಳೇಗಾಲದ ಎಂ.ಎಂ ಹಿಲ್ಸ್ ಹಾಗೂ ಕಾವೇರಿ ವನ್ಯಧಾಮದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರಕಾಶ್ ತಿಳಿಸಿದರು.
ಮಲೆ ಮಹದೇಶ್ವರ ಅರಣ್ಯ ಸುತ್ತಮುತ್ತ ಬದುಕು ಕಟ್ಟಿಕೊಂಡಿರುವ ರೈತರ ಮೂಲಭೂತ ಹಕ್ಕುಗಳಿಗೆ ಚ್ಯುತಿಯಾಗದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಶತಮಾನಗಳಿಂದಲೂ ಬೆಟ್ಟದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾವಿರಾರು ಮಂದಿ ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಈ ಭಾಗದಲ್ಲಿ ಹೈನುಗಾರಿಕೆ ವ್ಯಾಪಾರವಲ್ಲ; ಮಾದಪ್ಪನ ಸೇವೆ ಎಂದು ಪರಿಗಣಿಸಲಾಗುತ್ತದೆ ಎಂದು ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅರಣ್ಯದೊಳಗೆ ಜಾನುವಾರು ಮೇಯಿಸಲು ಅನುಮತಿ ನೀಡಿ ಸರ್ಕಾರ ಹೊರಡಿಸಿರುವ ಪರಿಷ್ಕೃತ ಆದೇಶ ಕೈತಲುಪಿದ ಬಳಿಕ ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದುಭಾಸ್ಕರ್ ಎಂಎಂ ಹಿಲ್ಸ್ ವಲಯದ ಡಿಸಿಎಫ್
ಅರಣ್ಯದೊಳಗೆ ಜಾನುವಾರು ಮೇಯಿಸಲು ಸರ್ಕಾರ ನಿರ್ಬಂಧ ಹಾಕಬಾರದು. ತಲಾ ತಲಾಂತರದಿಂದಲೂ ಕಾಡಂಚಿನ ರೈತರು ಅರಣ್ಯವನ್ನೇ ನಂಬಿಕೊಂಡು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಡಿನೊಳಗೆ ಜಾನುವಾರು ಪ್ರವೇಶಕ್ಕೆ ನಿರ್ಬಂಧ ವಿಧಿಸಿದರೆ ಕಾಡುಪ್ರಾಣಿಗಳು ಗ್ರಾಮ ಹಾಗೂ ರೈತರ ಜಮೀನಿಗೆ ನುಗ್ಗದಂತೆ ಅರಣ್ಯ ಇಲಾಖೆ ಕ್ರಮವಹಿಸಬೇಕು.ಶಾಂತಕುಮಾರ್ ರೈತ ಚೆನ್ನೂರು
ಸರ್ಕಾರದ ನಿರ್ಧಾರದಿಂದ ಜಾನುವಾರುಗಳ ಸಾಕಾಣಿಕೆಯನ್ನೇ ಜೀವನಾಧಾರವಾಗಿ ಮಾಡಿಕೊಂಡಿರುವ ರೈತರು ಬೀದಿಗೆ ಬರಲಿದ್ದಾರೆ. ಕಾಡಿನೊಳಗೆ ಜಾನುವಾರು ಮೇಯಿಸಲು ಅನುಮತಿ ನೀಡದಿದ್ದರೆ ಗ್ರಾಮಕ್ಕೊಂದು ಗೋಶಾಲೆ ತೆರೆದು ಮೇವು ಒದಗಿಸಲಿ. ವನ್ಯ ಪ್ರಾಣಿಗಳು ಜಮೀನುಗಳಿಗೆ ಬಾರದಂತೆ ನೋಡಿಕೊಳ್ಳಲಿ.ಬಸವರಾಜು ಕುರಟ್ಟಿ ಹೊಸೂರು
ಹನೂರು ತಾಲ್ಲೂಕಿನ ಬಹುತೇಕ ಗ್ರಾಮಗಳು ಅರಣ್ಯದ ಅಂಚಿನೊಳಗಿವೆ. ಬಹುತೇಕರು ಕೃಷಿಯ ಜೊತೆಗೆ ಜಾನುವಾರು ಸಾಕಣೆ ಮಾಡುತ್ತಿದ್ದಾರೆ. ಕಾಡಿನೊಳಗೆ ಜಾನುವಾರು ಮೇಯಿಸಲು ನಿರ್ಬಂಧ ಹೇರಿದರೆ ರೈತರು ಹೈನುಗಾರಿಕೆ ತ್ಯಜಿಸಬೇಕಾಗುತ್ತದೆ.ಅಮ್ಜದ್ ಖಾನ್ ಗಂಗನದೊಡ್ಡಿ
ರೈತರು ದನಕರುಗಳನ್ನು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಮೇವಿಗೆ ಜಾನುವಾರುಗಳನ್ನು ಕಾಡಿಗೆ ಬಿಡುತ್ತೇವೆಯೇ ಹೊರತು ಕಾಡು ನಾಶ ಮಾಡುವುದಕ್ಕಲ್ಲ. ಕಾಡಿನೊಳಗೆ ಪ್ರವೇಶ ನಿರ್ಬಂಧಿಸುವ ಅರಣ್ಯ ಸಚಿವರ ನಿರ್ಧಾರ ಸರಿಯಲ್ಲ.ಶೈಲೇಂದ್ರ ಕೆಂಪನಪಾಳ್ಯ
ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಾಗಿರುವ ಬೇಡಗಂಪಣ ಸಮುದಾಯದ ಮೂಲವೃತ್ತಿಯೇ ಹೈನುಗಾರಿಕೆಯಾಗಿದೆ. ದೇಸಿ ದನಗಳ ತಳಿಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿರುವ ಬೇಡಗಂಪಣ ಸಮುದಾಯಕ್ಕೆ ಕಾನೂನುಗಳ ಹೆಸರಿನಲ್ಲಿ ಕಿರುಕುಳ ನೀಡಬಾರದು. ಕಾಡು ಉಳಿಯಬೇಕು ಕಾಡಂಚಿನ ರೈತರೂ ಬದುಕಬೇಕು ಎಂಬ ದೃಷ್ಟಿಯಿಂದ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.