ADVERTISEMENT

ಯಳಂದೂರು | 70ನೇ ಕರ್ನಾಟಕ ರಾಜ್ಯೋತ್ಸವ: ಸಡಗರ ಸಂಭ್ರಮದಿಂದ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 2:44 IST
Last Updated 2 ನವೆಂಬರ್ 2025, 2:44 IST
ಯಳಂದೂರು ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಶನಿವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಪಾಲ್ಗೊಂಡರು
ಯಳಂದೂರು ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಶನಿವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಪಾಲ್ಗೊಂಡರು   

ಯಳಂದೂರು: ‘ಕರ್ನಾಟಕದಲ್ಲಿ ಕನ್ನಡವೇ ಅಗ್ರ ಭಾಷೆ. ಇಲ್ಲಿನ ಮಣ್ಣಿನ ಕಣ ಕಣದಲ್ಲಿ ನೂರಾರು ಭಾಷೆಗಳ ಸೊಗಡಿದ್ದರೂ, ರಾಜ ಮಹರಾಜರ ಕಾಲದಲ್ಲಿ ಕನ್ನಡ ನುಡಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು’ ಎಂದು ತಹಶೀಲ್ದಾರ್ ಎಸ್.ಎನ್. ನಯನ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲೂ ಕವಿ ಮತ್ತು ಕಲಾವಿದರು ತಮ್ಮ ಶಿಷ್ಟ ಸಾಹಿತ್ಯ ರಚನೆಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಎತ್ತರಿಸಿದ್ದಾರೆ. ನಂತರದ ದಿನಗಳಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ, ರಾಜ್ಯಗಳ ಘನತೆಗೆ ಆಯಾ ಪ್ರಾದೇಶಿಕ ಭಾಷೆಗಳನ್ನೆ ಗುರುತಿಸಿ ಗೌರವಿಸಲಾಯಿತು. 1973ರಲ್ಲಿ ಮೈಸೂರು ರಾಜ್ಯ ಅಖಂಡ ಕರ್ನಾಟಕವಾಗಿ ಮನ್ನಣೆ ಪಡೆಯಿತು ಎಂದರು.

ADVERTISEMENT

ಮುಖ್ಯಭಾಷಣಕಾರ ಪ್ರಾಂಶುಪಾಲ ಶಿವಪ್ರಕಾಶ್ ಮಾತನಾಡಿ, ‘ಮಾತೃ ಭಾಷೆಗಳ ಮೇಲೆ ಇಂಗ್ಲಿಷ್ ಸವಾರಿ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲೂ ಅನ್ಯ ಭಾಷೆಗಳ ಕಲಿಕೆ ಅನಿವಾರ್ಯ ಎಂಬಂತೆ ಬಿಂಬಿಸಲಾಗುತ್ತದೆ. ಆದರೆ. ನೆಲದ ಸಾಹಿತ್ಯ, ಸಂಸ್ಕೃತಿ, ಜನಪದ ನಿರ್ಲಕ್ಷಿಸಿದರೆ, ಮಕ್ಕಳ ಹತ್ತಾರು ಜೈವಿಕ ಕೌಶಲಗಳು ಅಳಿದುಹೋಗುತ್ತವೆ. ಈ ನಿಟ್ಟಿನಲ್ಲಿ ಪೋಷಕರು ನಮ್ಮ ಭಾಷೆಯ ಹಿರಿಮೆ, ದ್ರಾವಿಡ ಭಾಷೆಗಳಲ್ಲಿ ಕನ್ನಡಕ್ಕೆ ಧಕ್ಕಿರುವ ಶ್ರೇಷ್ಠತೆ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರು ಮಾಡಿರುವ ಸಾಧನೆಗಳನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

‘ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯದಲ್ಲಿ ಕಲಿತ ಮಕ್ಕಳು ವಿಜ್ಞಾನಿ, ತಂತ್ರಜ್ಞರಾಗಿ ಹೆಸರು ಮಾಡಿದ್ದಾರೆ. ಭುವಿಯಿಂದ ಬಾನಿನ ತನಕ ಇಸ್ರೋ ಮತ್ತು ನಾಸಾದ ಸಾಧನೆಗಳಲ್ಲಿ ಕನ್ನಡಗರ ಶ್ರಮ ಇದೆ. ಅನ್ಯರಿಂದ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾದಾಗ ಧಿಕ್ಕರಿಸಿ, ಚಳವಳಿಗಳ ಮೂಲಕ ಜಾಗೃತಿ ಮೂಡಿಸಿದ ಹೋರಾಟಗಾರರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು’ ಎಂದು ಅವರು ವಿವರಿಸಿದರು.

ಕಾರ್ಯಕ್ರಮಕ್ಕೂ ಮೊದಲು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಕನ್ನಡ ಧ್ವಜಾರೋಹಣ ಮಾಡಲಾಯಿತು. ಕನ್ನಡ ತೇರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಕೆಪಿಎಸ್ ಮೈದಾನದಲ್ಲಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬಿಇಒ ಮಾರಯ್ಯ, ಅಧಿಕಾರಿಗಳಾದ ರಾಜು, ಅಮೃತೇಶ್ವರ, ರಾಜಸ್ವ ನಿರೀಕ್ಷಕ ಎಂ.ಎಸ್.ಯದುಗಿರಿ, ಡಾ.ತನುಜಾ, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಕನ್ನಡ ಪರ ಸಂಘಟನೆಗಳ ವೈ.ಕೆ.ಮೋಳೆ ನಾಗರಾಜು, ಮುಖಂಡರಾದ ಯೋಗೇಶ್, ಶ್ರೀನಿವಾಸ್, ನಿರಂಜನಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.