ADVERTISEMENT

ಬಂಡಿ ಜಾತ್ರೆ: ಪೂಜೆ, ಮನೆ ಆಚರಣೆಗೆ ಸೀಮಿತ, ರಸ್ತೆಗಳಲ್ಲಿ ಪೊಲೀಸ್‌ ಕಾವಲು

ದೊಡ್ಡಮ್ಮತಾಯಿ ದೇವಾಲಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 16:30 IST
Last Updated 16 ಜನವರಿ 2022, 16:30 IST
ಚಾಮರಾಜನಗರ ತಾಲ್ಲೂಕಿನ ಕಸ್ತೂರಿನ ದೊಡ್ಡಮ್ಮತಾಯಿ ದೇವಾಲಯದ ಬಳಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರು
ಚಾಮರಾಜನಗರ ತಾಲ್ಲೂಕಿನ ಕಸ್ತೂರಿನ ದೊಡ್ಡಮ್ಮತಾಯಿ ದೇವಾಲಯದ ಬಳಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರು   

ಸಂತೇಮರಹಳ್ಳಿ:ಸಮೀಪದ ಕಸ್ತೂರು ಗ್ರಾಮದಲ್ಲಿ ಭಾನುವಾರ ದೊಡ್ಡಮ್ಮ ತಾಯಿ ಬಂಡಿ ಜಾತ್ರಾ ಮಹೋತ್ಸವ ಕೋವಿಡ್‌ ನಿರ್ಬಂಧಕ್ಕೆ ಕಾರಣಕ್ಕೆ ಭಕ್ತರ ಅನುಪಸ್ಥಿತಿಯಲ್ಲಿ ಸರಳವಾಗಿ ಪೂಜಾ ವಿಧಾನಗಳಿಗೆ ಸೀಮಿತವಾಗಿ ನಡೆಯಿತು.

ಕಸ್ತೂರು, ಭೋಗಾಪುರ, ಮರಿಯಾಲ, ಕಿರಗಸೂರು, ಸಪ್ಪಯ್ಯನಪುರ, ಕೆಲ್ಲಂಬಳ್ಳಿ, ಮೂಕಹಳ್ಳಿ, ಆನಹಳ್ಳಿ, ತೊರವಳ್ಳಿ, ಪುಟ್ಟೇಗೌಡನ ಹುಂಡಿ, ಹೊನ್ನೇಗೌಡನ ಹುಂಡಿ, ಪುಟ್ಟಯ್ಯನ ಹುಂಡಿ, ದಾಸನೂರು, ಚಿಕ್ಕಹೊಮ್ಮ, ದೊಡ್ಡಹೊಮ್ಮ, ಹೆಗ್ಗವಾಡಿ, ಮರಿಯಾಲದ ಹುಂಡಿ, ಕೆ.ಬಸವನಪುರ, ತೊರವಳ್ಳಿಮೋಳೆ, ಅಂಕುಶಯ್ಯನಪುರ, ಔತಳಪುರ ಸೇರಿದಂತೆ 23 ಊರುಗಳ ಜನರು ಭಾಗವಹಿಸುವ ಈ ಜಾತ್ರೆಯು ಕಳೆದ ವರ್ಷವೂ ಕೋವಿಡ್‌ ಕಾರಣಕ್ಕೆ ಸರಳವಾಗಿ ನಡೆದಿತ್ತು.

ಕಸ್ತೂರು ಸೇರಿದಂತೆ 16 ಗ್ರಾಮಗಳಲ್ಲಿ ಬಂಡಿಗಳನ್ನು ಕಟ್ಟಿ ಊರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೊಡ್ಡತಾಯಮ್ಮ ದೇವಾಲಯವರೆಗೂ ಅದ್ಧೂರಿಯಾಗಿ ಬಂಡಿ ಮೆರವಣಿಗೆ ಮಾಡಿ ಜನರು ಸಂಭ್ರಮಿಸುತ್ತಿದ್ದರು. ಕೋವಿಡ್‌ ನಿರ್ಬಂಧದಿಂದಾಗಿ ಕಳೆದ ವರ್ಷದಂತೆ ಈ ಬಾರಿಯೂ ಗ್ರಾಮಗಳಲ್ಲಿ ಬಂಡಿಗಳನ್ನು ಕಟ್ಟದೆ, ಊರ ದೇವರಿಗೆ ಪೂಜೆ ಮಾಡಿ, ನಂತರ ಮನೆಗಳಿಗೆ ಸೀಮಿತವಾಗಿ ಆಚರಣೆ ಮಾಡಿದರು.

ADVERTISEMENT

ಬಂದೋಬಸ್ತ್‌: ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧ ಇದ್ದುದರಿಂದ ಕಸ್ತೂರು ದೊಡ್ಡತಾಯಮ್ಮ ದೇವಾಲಯ ಹಾಗೂ ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ದೇವಸ್ಥಾನದ ಮುಂಭಾಗವಿರುವ ಸಂತೇಮರಹಳ್ಳಿ-ಕುದೇರು ಮಾರ್ಗ ಹಾಗೂ ಚಾಮರಾಜನಗರದಿಂದ ಕಸ್ತೂರು ಮಾರ್ಗದ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದ ಪೊಲೀಸರು, ಜನರ ಸಂಚಾರಕ್ಕೆ ತಡೆ ಒಡ್ಡಿದರು. ದೇವಾಲಯದ ಆವರಣದಲ್ಲಿ ಪೊಲೀಸ್‌ ಸಿಬ್ಬಂದಿ ಇದ್ದರು.

ದೇವಾಲಯದ ಅರ್ಚಕರು, ಪೊಲೀಸ್‌ ಸಿಬ್ಬಂದಿ ಸೇರಿದಂತೆ ಕೆಲವೇ ಕೆಲವು ಮಂದಿ ಬಿಟ್ಟು, ದೇವಾಲಯದ ಆವರಣದಲ್ಲಿ ಬೇರೆ ಯಾರೂ ಇರಲಿಲ್ಲ. ಜಾತ್ರೆಯ ದಿನ ಸಾವಿರಾರು ಜನರಿಂದ ತುಂಬಿ ತುಳುಕುತ್ತಿದ್ದ ದೇವಾಲಯದ ಸುತ್ತಮುತ್ತಲಿನ ಪ್ರದೇಶ ಬಿಕೋ ಎನ್ನುತ್ತಿತ್ತು.

ದೇವಾಲಯದಲ್ಲಿ ಪೂಜೆ: ಜಾತ್ರೆಯ ಅಂಗವಾಗಿ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಭಾನುವಾರ ಮುಂಜಾನೆಯೇದೇವಸ್ಥಾನದ ಅರ್ಚಜಕರು ದೊಡ್ಡಮ್ಮ ತಾಯಿ ದೇವರ ಮೂರ್ತಿಯನ್ನು ಶುಚಿಗೊಳಿಸಿ ಕ್ಷೀರಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳನ್ನು ಸಲ್ಲಿಸಿ ವಿವಿಧ ಬಗೆಯ ಹೂಗಳಿಂದ ದೇವಿಯ ವಿಗ್ರಹವನ್ನು ಅಲಂಕಾರಗೊಳಿಸಿದರು. ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಎಲ್ಲ ಪೂಜಾ ಕೈಂಕರ್ಯಗಳು ಮುಗಿದಿದ್ದವು. ನಂತರ ಪೊಲೀಸರು ದೇವಸ್ಥಾನದ ಬಾಗಿಲು ಮುಚ್ಚಿಸಿದರು.

ರಸ್ತೆಯ ಮೂಲಕ ಅಕ್ಕಪಕ್ಕದ ಗ್ರಾಮಗಳಿಗೆ ಹಬ್ಬಕ್ಕೆ ತೆರಳುತ್ತಿದ್ದ ನೆಂಟರು ದೇವಸ್ಥಾನಕ್ಕೆ ಹೋಗಲು ಪ್ರಯತ್ನಿಸಿದರು. ಪೊಲೀಸರು ಇವರನ್ನು ತಡೆದು ವಾಪಾಸ್ ಕಳುಹಿಸುತ್ತಿದ್ದರು.

ಊರುಗಳಲ್ಲಿ ಹಬ್ಬದ ವಾತಾವರಣ ಮಾಯ

ಎರಡನೇ ವರ್ಷವೂ ಜಾತ್ರೆ ರದ್ದಾಗಿರುವುದು ಗ್ರಾಮಸ್ಥರಲ್ಲಿ ನಿರಾಸೆ ಮೂಡಿಸಿದೆ. ಯಾವ ಊರುಗಳಲ್ಲೂ ಹಬ್ಬದ ವಾತಾರಣ ಕಂಡು ಬರಲಿಲ್ಲ.ಮಹಿಳೆಯರು ಹಾಗೂ ಪುರುಷರು ಗ್ರಾಮಗಳ ದೇವಸ್ಥಾನಗಳಲ್ಲಿಯೇ ಪೂಜೆ ಸಲ್ಲಿಸಿದರು. ನಂತರ ಮನೆಗಳಲ್ಲಿ ಹಬ್ಬದ ಅಡುಗೆ ಸಿದ್ಧಪಡಿಸಿದರು. ಮನೆಗೆ ಬಂದಿದ್ದ ಸ್ನೇಹಿತರು, ನೆಂಟರಿಷ್ಟರಿಗೆ ಹಬ್ಬದ ಊಟ ಹಾಕಿ ಕಳುಹಿಸಿದರು.

’ಪ್ರತಿವರ್ಷ ಊರ ಜಾತ್ರೆಯನ್ನು ಪ್ರತಿ ಮನೆಯಲ್ಲೂ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಮಾಡುತ್ತಿದ್ದವು. ಕೋವಿಡ್ ನಿರ್ಬಂಧ ಇದ್ದುದರಿಂದ ಗ್ರಾಮದಲ್ಲಿಯೇ ಸರಳವಾಗಿ ಆಚರಿಸಿದೆವು. ನೆಂಟರನ್ನೂ ಕರೆಯದೇ ಸರಳವಾಗಿ ನಾವೇ ಆಚರಿಸಿದೆವು‘ ಎಂದು ಹೆಗ್ಗವಾಡಿ ಗ್ರಾಮದ ಜಗದೀಶ್ ಹಾಗೂ ಪರಶಿವಮೂರ್ತಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

’ಗ್ರಾಮದ ಜನರಲ್ಲಿ ಬಂಡಿ ಜಾತ್ರೆಯ ದಿನ ಹಬ್ಬದ ಸಂಭ್ರಮ, ಸಡಗರ ಇರುತಿತ್ತು. ಜತೆಗೆ ದೇವರ ಕಾರ್ಯವನ್ನೂ ಅದ್ಧೂರಿಯಾಗಿ ನಡೆಯುತಿತ್ತು. ನೆಂಟರಿಷ್ಟರು ಭಾಗಿಯಾಗಿ ತುಂಬಾ ಸಂತೋಷ ಪಡುತ್ತಿದ್ದೆವು. ಈಗ ಹಬ್ಬದ ವಾತಾವರಣವಿಲ್ಲದೇ ನಿರಾಸೆಯಾಗಿದೆ‘ ಎಂದು ಹೊನ್ನೇಗೌಡನಹುಂಡಿ ಗ್ರಾಮದ ಲೋಕೇಶ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.