ADVERTISEMENT

ಚಾಮರಾಜನಗರದಲ್ಲಿ ಕೆಂಪೇಗೌಡ ಜಯಂತಿ

ಬೆಂಗಳೂರು ನಿರ್ಮಾತೃನ ಕೊಡುಗೆ ನೆನೆದ ಶಾಸಕ, ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 9:28 IST
Last Updated 30 ಜೂನ್ 2020, 9:28 IST
ಕಾರ್ಯಕ್ರಮದಲ್ಲಿ ಗಣ್ಯರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
ಕಾರ್ಯಕ್ರಮದಲ್ಲಿ ಗಣ್ಯರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು   

ಚಾಮರಾಜನಗರ: ‘ರಾಜ್ಯದ ರಾಜಧಾನಿ ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದು ವಿಶೇಷವಾಗಿ ಗುರುತಿಸಿಕೊಳ್ಳುವಲ್ಲಿ ನಾಡಪ್ರಭು ಕೆಂಪೇಗೌಡ ಅವರ ಕೊಡುಗೆ ಅಪಾರ’ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸೋಮವಾರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಇಂದು ಉದ್ಯಾನವನಗಳ ನಗರಿ ಎಂಬ ಕೀರ್ತಿ ಪಡೆದಿದೆ. ಕೆಂಪೇಗೌಡ ಅವರು ಎಲ್ಲಸಮುದಾಯಗಳಿಗೆ ಅಂದೇ ಅನುಕೂಲ ಮಾಡಿಕೊಟ್ಟಿದ್ದರು. ವ್ಯಾಪಾರ, ಉದ್ಯಮ ಬೆಳವಣಿಗೆಗೆ ಬಹುವಾಗಿ ಶ್ರಮಿಸಿದ್ದಾರೆ. ನಗರದಲ್ಲಿ ನಾನಾ ಹೆಸರಿನ ಪೇಟೆಗಳು ಇವರ ಕಾಲದಲ್ಲಿಯೇ ಆರಂಭವಾದವು. ಪ್ರಮುಖ ದ್ವಾರಗಳನ್ನು ನಿರ್ಮಿಸಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ’ ಎಂದರು.

ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಅವರು ಮಾತನಾಡಿ, ‘ಒಂದು ಸುಸಜ್ಜಿತ ನಗರದ ನಿರ್ಮಾಣ ಮಾಡುವಂತಹ ದೂರದೃಷ್ಟಿ ಹಾಗೂ ಕನಸು ಹೊಂದಿದವರಲ್ಲಿ ಕೆಂಪೇಗೌಡರು ಪ್ರಮುಖರು. ಸಮಾಜದಲ್ಲಿರುವ ಎಲ್ಲ ಜನರ ಹಿತವನ್ನು ಯಾರು ಬಯಸುತ್ತಾರೋ ಅಂತಹವರು ಮಾತ್ರ ಬಹಳ ದೊಡ್ಡ ಆಡಳಿತವನ್ನು ನಡೆಸಲು ಸಾಧ್ಯ. ಅಂತಹವರ ಸಾಲಿನಲ್ಲಿ ಕೆಂಪೇಗೌಡರು ಅವರ ಹೆಸರನ್ನು ಕಾಣಬಹುದು’ ಎಂದರು.

ADVERTISEMENT

‘ಸಮಾಜದ ಅಭಿವೃದ್ಧಿ, ಕಾಳಜಿ, ಕಳಕಳಿ ಹಾಗೂ ಸಾಮಾಜಿಕ ಜವಾಬ್ದಾರಿ ಇರುವಂತಹವರು ಸಿಗುವುದು ಬಹಳ ಕಡಿಮೆ. ವಿಶ್ವದಲ್ಲಿಯೇ ಬೆಂಗಳೂರು ನಗರ ಪ್ರಬುದ್ಧ ಸ್ಥಾನದಲ್ಲಿದೆ ಎಂದರೆ, ಅದರ ಹಿಂದೆ ಇದ್ದ ಕೆಂಪೇಗೌಡ ಅವರ ಚಿಂತನೆ ಹಾಗೂ ತ್ಯಾಗ ಅಪಾರವಾದದ್ದು. ಇವರಂತಹ ನಾಯಕರು ಕೇವಲ ಒಂದು ಜಾತಿ, ಜನಾಂಗ, ಸಮುದಾಯ ಹಾಗೂ ಧರ್ಮಕ್ಕೆ ಸೇರಿದವರಲ್ಲ. ಅವರು ಜಾತಿ, ಧರ್ಮ ಮೀರಿ ಬೆಳೆದವರು’ ಎಂದು ಡಾ.ಎಂ.ಆರ್.ರವಿ ಅವರು ಬಣ್ಣಿಸಿದರು.

ಮುಖಂಡರಾದ ಚಾ.ರಂ. ಶ್ರೀನಿವಾಸ ಗೌಡ ಅವರು ಮಾತನಾಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹೊನ್ನೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್‌ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.