ADVERTISEMENT

ಕೆಂಪೇಗೌಡರ ಕಾರ್ಯ, ಕೊಡುಗೆ ಸ್ಮರಣೀಯ:ರಾಮಚಂದ್ರ

ಜಿಲ್ಲೆಯಾದ್ಯಂತ ಬೆಂಗಳೂರು ನಿರ್ಮಾತೃ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 15:22 IST
Last Updated 27 ಜೂನ್ 2022, 15:22 IST
ಜಿಲ್ಲಾಡಳಿತದ ವತಿಯಿಂದ ಚಾಮರಾಜನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿಯನ್ನು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಆಶಾ, ಎಸ್‌ಪಿ ಶಿವಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಎಎಸ್‌ಪಿ ಸುಂದರ್‌ರಾಜ್‌ ಇದ್ದರು
ಜಿಲ್ಲಾಡಳಿತದ ವತಿಯಿಂದ ಚಾಮರಾಜನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿಯನ್ನು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಆಶಾ, ಎಸ್‌ಪಿ ಶಿವಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಎಎಸ್‌ಪಿ ಸುಂದರ್‌ರಾಜ್‌ ಇದ್ದರು   

ಚಾಮರಾಜನಗರ: ‘ವಿಶ್ವ ಮಟ್ಟದಲ್ಲಿ ಗಮನಸೆಳೆದಿರುವ ರಾಜ್ಯದ ರಾಜಧಾನಿ ಬೆಂಗಳೂರನ್ನು ದೂರದೃಷ್ಟಿಯಿಂದಅತ್ಯಂತ ಸುವ್ಯವಸ್ಥಿತವಾಗಿ ನಿರ್ಮಿಸಿದ ನಾಡಪ್ರಭು ಕೆಂಪೇಗೌಡರು ರಾಜ್ಯಕ್ಕೆ ನೀಡಿರುವ ಕೊಡುಗೆ ಸ್ಮರಣೀಯ’ ಎಂದು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ ಅವರು ಸೋಮವಾರ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೆಂಪೇಗೌಡರ ಹೆಸರು ಕೇಳದವರೇ ಇಲ್ಲ. ಬೆಂಗಳೂರು ಎಂದಾಕ್ಷಣ ಪ್ರತಿಯೊಬ್ಬರಿಗೂ ಕೆಂಪೇಗೌಡರ ನೆನಪಾಗುತ್ತದೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿರುವ ಬೆಂಗಳೂರನ್ನು ಅಂದೇ ತಮ್ಮ ದೂರ ದೃಷ್ಟಿಯಿಂದ ವೇಗವಾಗಿ ಅಭಿವೃದ್ಧಿ ಹೊಂದಿದ ನಗರವನ್ನಾಗಿ ಕಟ್ಟಿದ ಕೀರ್ತಿ ಅವರದ್ದಾಗಿದೆ’ ಎಂದರು.

‘ಪ್ರಜೆಗಳ ಹಿತದೃಷ್ಟಿಯಿಂದ ಕೆಂಪೇಗೌಡರು ಮಾಡಿದ ಕಾರ್ಯಗಳು ಇಂದಿಗೂ ಬೆಂಗಳೂರಿನಲ್ಲಿ ಕಾಣಬಹುದಾಗಿದೆ. ಕೆರೆ- ಕಟ್ಟೆಗಳು, ದೇವಾಲಯಗಳು ಸೇರಿದಂತೆ ಹಲವಾರು ಪ್ರಗತಿ ಕೆಲಸಗಳು ನಮ್ಮ ಕಣ್ಣ ಮುಂದಿದೆ. ಇಂತಹ ಸ್ಮರಣೀಯ ಕಾರ್ಯಗಳನ್ನು ಮಾಡಿದ ಅವರ ಜಯಂತಿಯನ್ನು ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಸಾಧಕರ ಆದರ್ಶಗಳನ್ನು ಅಳವಡಿಸಿಕೊಂಡಾಗ ಜಯಂತಿ ಆಚರಣೆಗೆ ಅರ್ಥ ಬರುತ್ತದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ಮಾತನಾಡಿ, ‘ನಾಡಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕೆಂಪೇಗೌಡರು ಮುಂದಾಲೋಚನೆಯಿಂದ ಸಾರ್ವಕಾಲಿಕವಾಗಿ ನಿಲ್ಲುವ ಎಲ್ಲ ವ್ಯವಸ್ಥೆಯುಳ್ಳ ಬೆಂಗಳೂರು ನಗರವನ್ನು ಅಂದೇ ಅಚ್ಚುಕಟ್ಟಾಗಿ ರೂಪಿಸಿದರು’ ಎಂದರು.

ADVERTISEMENT

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥೆ ಡಾ.ಆರ್.ಎಚ್.ಪವಿತ್ರಾ ಮಾತನಾಡಿ, ‘ತಂತ್ರಜ್ಞಾನ ಯುಗದಲ್ಲಿ ಕರ್ನಾಟಕದ ಹೆಸರು ಬರಲು ಕಾರಣವಾದ ಬೆಂಗಳೂರನ್ನು ಸುಂದರವಾಗಿ ನಿರ್ಮಿಸಿದ ಕೆಂಪೇಗೌಡರನ್ನು ಜನ ನಾಯಕನೆಂದೇ ಕರೆಯಬೇಕಾಗುತ್ತದೆ. ಅಭಿವೃದ್ದಿಗೆ ಪೂರಕವಾದ ಎಲ್ಲ ಆಯಾಮಗಳನ್ನು ಸಾಕಾರಗೊಳಿಸಿದ ಕೆಂಪೇಗೌಡರು ಅಂದೇ ವಿಕೇಂದ್ರಿಕರಣ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು’ ಎಂದು ತಿಳಿಸಿದರು.

‘ಬೆಂಗಳೂರು ಸಮಗ್ರ ಪ್ರಗತಿಗೆ ಕೋಟೆಗಳು, ಕೆರೆ-ಕಟ್ಟೆಗಳು, ದೇವಾಲಯಗಳು, ಉದ್ಯಾನ, ಪೇಟೆಗಳನ್ನು ಕೆಂಪೇಗೌಡರು ನಿರ್ಮಿಸಿದರು. ಕಸುಬು, ವ್ಯಾಪಾರಕ್ಕೆ ಅನುಗುಣವಾಗಿ ವಿವಿಧ ಪೇಟೆಗಳನ್ನು ರೂಪಿಸಿದರು. ನಗರದ ವಿವಿಧೆಡೆ ಹಲವಾರು ಕೆರೆಗಳನ್ನು ಕಟ್ಟಿ ಕೃಷಿ ಚಟುವಟಿಕೆಗಳಿಗೆ ಉತ್ತೇಜಿಸಿದರು. ಮೂಲ ಸೌಕರ್ಯಗಳನ್ನು ಒದಗಿಸಿದರು’ ಎಂದು ಪವಿತ್ರಾ ವಿವರಿಸಿದರು.

ನಗರಸಭಾ ಅಧ್ಯಕ್ಷೆ ಎಂ. ಆಶಾ ಮಾತನಾಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್, ತಹಶೀಲ್ದಾರ್‌ ಬಸವರಾಜು, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಎಚ್.ಎಸ್. ಗಂಗಾಧರ್, ಮುಖಂಡರಾದ ಚಿನ್ನಿಮುತ್ತು, ರಾಜುಗೌಡ, ಚಾ.ರಂ.ಶ್ರೀನಿವಾಸಗೌಡ, ಮಣಿ, ರವಿಗೌಡ, ಮಹೇಶ್‌ಗೌಡ, ನಾಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.