ADVERTISEMENT

ಗುಂಡ್ಲುಪೇಟೆ | ಕೇರಳ ಲಾಟರಿ ಮಾರಾಟ, ಬೆಟ್ಟಿಂಗ್‌ ಅವ್ಯಾಹತ

ಗುಂಡ್ಲುಪೇಟೆ: ಸುಲ್ತಾನ್‌ ಬತ್ತೇರಿಯಿಂದ ಲಾಟರಿ ತರುವ ಏಜೆಂಟರು

ಮಲ್ಲೇಶ ಎಂ.
Published 26 ಮೇ 2024, 5:10 IST
Last Updated 26 ಮೇ 2024, 5:10 IST
ಕೇರಳ ಲಾಟರಿ ಸಾಂದರ್ಭಿಕ ಚಿತ್ರ
ಕೇರಳ ಲಾಟರಿ ಸಾಂದರ್ಭಿಕ ಚಿತ್ರ   

ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲ ಗ್ರಾಮದಲ್ಲಿ ಕೇರಳ ಲಾಟರಿ ಮಾರಾಟ, ಐಪಿಎಲ್ ಬೆಟ್ಟಿಂಗ್‌ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ. 

ಗುಂಡ್ಲುಪೇಟೆ, ಹಂಗಳ, ಬೇಗೂರು ಮತ್ತು ತೆರಕಣಾಂಬಿ ವ್ಯಾಪ್ತಿಯಲ್ಲಿ ಹಣದಾಸೆಗೆ ಕೇರಳದ ಲಾಟರಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವಕರು, ಕೂಲಿ ಕಾರ್ಮಿಕರು ಪ್ರತಿದಿನ ಲಾಟರಿ ಖರೀದಿಸಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸಾಲಗಾರರಾಗುತ್ತಿದ್ದಾರೆ. 

‘ಲಾಟರಿ ಅಕ್ರಮ ಮಾರಾಟ ತಾಲ್ಲೂಕಿನಲ್ಲಿ ಹೊಸದಲ್ಲ. ಹಿಂದಿನಿಂದಲೂ ನಡೆಯುತ್ತಿದೆ. ಹಲವೆಡೆ, ಜಿಲ್ಲಾ ಅಪರಾಧ ದಳದ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಲಾಟರಿ ಮಾರುತ್ತಿದ್ದವರನ್ನು ಬಂಧಿಸಿದ್ದರು. ಆದರೆ, ಈಗ ಅಂತಹ ಕ್ರಮಗಳು ಆಗುತ್ತಿಲ್ಲ. ಇದರಿಂದ ಅಕ್ರಮ ಮಾರಾಟ ಹೆಚ್ಚಾಗಿದೆ’ ಎಂಬುದು ಸಾರ್ವಜನಿಕರ ದೂರು. 

ADVERTISEMENT

ಕರ್ನಾಟಕದಲ್ಲಿ ಲಾಟರಿ ಮಾರಾಟ ನಿರ್ಬಂಧಿಸಲಾಗಿದೆ. ಕೇರಳದಲ್ಲಿ ಇದೆ. ತಾಲ್ಲೂಕಿನ ಜನರು ಕೇರಳಕ್ಕೆ ಹೋದಾಗ ಅಲ್ಲಿ ಲಾಟರಿ ಖರೀದಿಸುವುದು ಬೇರೆ. ಆದರೆ, ಕೆಲವು ಸ್ಥಳೀಯ ಏಜೆಂಟರು ಸುಲ್ತಾನ್‌ ಬತ್ತೇರಿಗೆ ಹೋಗಿ ಹೆಚ್ಚು ಲಾಟರಿ ಟಿಕೆಟ್‌ಗಳನ್ನು ಖರೀದಿಸಿ ತಂದು ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. 

ರಾಜ್ಯದ ಗಡಿ ಮೂಲೆಹೊಳೆ ಚೆಕ್‌ಪೋಸ್ಟ್‌ ಮೂಲಕವೇ ಮಾರಾಟಗಾರರು ಬರುತ್ತಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ನಿಯೋಜನೆಗೊಂಡ ಸಿಬ್ಬಂದಿ ತಪಾಸಣೆ ನಡೆಸದಿರುವುದರಿಂದ ಲಾಟರಿ ಟಿಕೆಟ್‌ಗಳನ್ನು ಸುಲಭವಾಗಿ ತಾಲ್ಲೂಕಿಗೆ ತಲುಪುತ್ತಿದೆ ಎಂದು ಮೂಲಗಳು ತಿಳಿಸಿವೆ. 

‘ಕೂಲಿ ಕಾರ್ಮಿಕರು ಲಾಟರಿ ದಲ್ಲಾಳಿಗಳ ಜೊತೆ ಸಂಪರ್ಕದಲ್ಲಿದ್ದು, ದುಡಿದ ಹಣವನ್ನು ಲಾಟರಿಗೆ ವ್ಯಯಿಸುತ್ತಿದ್ದಾರೆ. ಪೊಲೀಸರು ಲಾಟರಿ ದಂಧೆಗೆ ಕಡಿವಾಣ ಹಾಕಬೇಕು’ ಎಂದು ಗುಂಡ್ಲುಪೇಟೆ ನಿವಾಸಿ ವೆಂಕಟೇಶ್‌ ಒತ್ತಾಯಿಸಿದರು. 

ತಾಲ್ಲೂಕಿನ ಹಂಗಳ ಗ್ರಾಮವೊಂದರಲ್ಲೇ 10ರಿಂದ 12 ಏಜೆಂಟರು ಲಾಟರಿ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 

‘ಪೊಲೀಸರು ಅಪರೂಪಕ್ಕೊಮ್ಮೆ ಒಂದೆರಡು ಪ್ರಕರಣ ದಾಖಲಿಸುತ್ತಾರೆ. ಪ್ರತಿದಿನ ಮಾರಾಟ ಮಾಡುವವರ ಮೇಲೆ ಯಾವುದೇ ಕ್ರಮವಹಿಸುವುದಿಲ್ಲ’ ಎಂದು ಪುರಸಭೆ ಸದಸ್ಯ ರಾಜಗೋಪಾಲ್ ಆರೋಪಿಸಿದರು. 

ಬೆಟ್ಟಿಂಗ್‌ ಹಾವಳಿ: ‘ಐಪಿಎಲ್‌ ಕ್ರಿಕೆಟ್‌ ಆರಂಭವಾದಾಗಿನಿಂದ ಯುವ ಜನರು ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಸಂಜೆ ಪಂದ್ಯ ಶುರುವಾಗುತ್ತಿದ್ದಂತೆ ಒಂದೆಡೆ ಸೇರಿ ಪಂದ್ಯಕ್ಕೆ, ಓವರ್‌ಗೆ, ರನ್‌ಗೆ ಹೀಗೆ ವಿವಿಧ ರೀತಿಯಲ್ಲಿ ಬೆಟ್ಟಿಂಗ್ ಆಡಿ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಗಮನ ಹರಿಸದಿರುವುದು ವಿಪರ್ಯಾಸ’ ಎಂದು ಪಟ್ಟಣದ ನಿವಾಸಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.  

ಪದ್ಮಿನಿ ಸಾಹು
ಅಕ್ರಮ ಲಾಟರಿ ಮಾರಾಟದ ಬಗ್ಗೆ ಈ ಹಿಂದೆ ಪ್ರಕರಣ ದಾಖಲಿಸಿದ್ದೇವೆ. ಈಗಲೂ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇರಿಸಿ ಕ್ರಮ ವಹಿಸಲಾಗುವುದು
ಪದ್ಮಿನಿ ಸಾಹು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಕೋಡ್‌ ಮೂಲಕ ಗಾಂಜಾ ಮಾರಾಟ?

ಗುಂಡ್ಲುಪೇಟೆಯ ಹೊರ ವಲಯ ಸೇರಿದಂತೆ ಪಟ್ಟಣದೊಳಗೆ ಗಾಂಜಾ ಮಾರಾಟವೂ ನಡೆಯುತ್ತಿದೆ ಎಂದು ಹೇಳುತ್ತಾರೆ ಸ್ಥಳೀಯರು. ‘ಗಾಂಜಾ ಮಾರಾಟ ಮಾಡುವವರು ನೇರವಾಗಿ ಯಾರನ್ನೂ ಭೇಟಿ ಮಾಡುವುದಿಲ್ಲ. ಅವರನ್ನು ಫೋನ್‌ ಮೂಲಕವೇ ಸಂಪರ್ಕಿಸಬೇಕು. ಕನ್ನಡದಲ್ಲಿ ಮಾತನಾಡಿದರೆ ಸ್ಥಳೀಯರು ಎಂದುಕೊಂಡು ಗಾಂಜಾ ಕೊಡುವುದಿಲ್ಲ. ತಮಿಳು ಮಲಯಾಳದಲ್ಲಿ ಮಾತನಾಡಿ ಕೋಡ್‌ ಸಂಕೇತ ಹೇಳಿದರೆ ನಿರ್ಜನ ಪ್ರದೇಶಕ್ಕೆ ಬಂದು ಗಾಂಜಾ ಕೊಟ್ಟು ಹೋಗುತ್ತಾರೆ’ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.