ADVERTISEMENT

ಕೊಳ್ಳೇಗಾಲ ನಗರಸಭೆ ಉಪಚುನಾವಣೆ: ಬಿಜೆಪಿ ಜಯಭೇರಿ, 6 ಮಂದಿಗೆ ಗೆಲುವು

ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 6:23 IST
Last Updated 31 ಅಕ್ಟೋಬರ್ 2022, 6:23 IST
ಶಾಸಕ ಎನ್.ಮಹೇಶ್, ಗೆದ್ದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಶಾಸಕ ಎನ್.ಮಹೇಶ್, ಗೆದ್ದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.   

ಕೊಳ್ಳೇಗಾಲ (ಚಾಮರಾಜನಗರ): ಇಲ್ಲಿನ ನಗರಸಭೆಯ ಏಳು ವಾರ್ಡ್ ಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.

ಏಳು ವಾರ್ಡ್ ಗಳ ಪೈಕಿ ಆರರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಂದು ವಾರ್ಡ್ ನಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದೆ.

ಸೋಮವಾರ ಬೆಳಿಗ್ಗೆ ಮತ ಎಣಿಕೆ ಕಾರ್ಯ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಎಣಿಕೆ. ಒಂದೂವರೆ ಗಂಟೆಯಲ್ಲಿ ಮುಕ್ತಾಯಕಂಡಿತು.

ADVERTISEMENT

ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಕಾರಣಕ್ಕೆ ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಬಿಎಸ್ ಪಿಯ ಏಳು ಸದಸ್ಯರ ಸದಸ್ವತ್ವ ಅನರ್ಹ ಆಗಿತ್ತು. ಇದರಿಂದ ತೆರವಾದ ಏಳು ವಾರ್ಡ್ ಗಳಿಗೆ (2, 6, 7, 13, 21, 25 ಹಾಗೂ 26) ಉಪಚುನಾವಣೆ ನಡೆದಿತ್ತು.

ಸದಸ್ಯತ್ವ ಅನರ್ಹಗೊಂಡಿದ್ದ ಏಳು ಜನರ ಪೈಕಿ ಆರು ಮಂದಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ಪೈಕಿ ಐವರು ಗೆಲುವು ಸಾಧಿಸಿದ್ದಾರೆ. 2ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ನಾಗಮಣಿ ಅವರು ಮಾತ್ರ ಸೋತಿದ್ದಾರೆ.
6ನೇ ವಾರ್ಡ್ ನಲ್ಲಿ ಮಾನಸ, 7ನೇ ವಾರ್ಡ್ ನಲ್ಲಿ ನಾಸಿರ್ ಷರೀಫ್, 13ರಲ್ಲಿ ಪವಿತ್ರ, 21ರಲ್ಲಿ ಪ್ರಕಾಶ್, 25ರಲ್ಲಿ ರಾಮಕೃಷ್ಣ ಹಾಗೂ 26ನೇ ವಾರ್ಡ್ ನಲ್ಲಿ ನಾಗಸುಂದ್ರಮ್ಮ ಗೆಲುವು ಸಾಧಿಸಿದ್ದಾರೆ.

2ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ನ ಭಾಗ್ಯ‌ ಜಯಗಳಿಸಿದ್ದಾರೆ.

ಶಾಸಕ ಮಹೇಶ್ ಮೇಲುಗೈ: ಬಿಜೆಪಿಯ ಆರು ಅಭ್ಯರ್ಥಿಗಳು ಜಯಗಳಿಸುವುದರೊಂದಿಗೆ ಶಾಸಕ ಎನ್.ಮಹೇಶ್ ಮೇಲುಗೈ ಸಾಧಿಸಿದ್ದಾರೆ.

ಮಹೇಶ್ ಅವರನ್ನು ಬಿಎಸ್ ಪಿಯಿಂದ ಉಚ್ಚಾಟನೆ ಮಾಡಿದ ಬಳಿಕ, ಅವರ ಬೆಂಬಲಿಗರಾಗಿದ್ದ ನಗರಸಭೆ ಸದಸ್ಯರು ಅವರೊಂದಿಗೆ ಬಿಜೆಪಿಗೆ ಸೇರಿದ್ದರು.

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಎಸ್ ಪಿಯ ವಿಪ್ ಉಲ್ಲಂಘಿಸಿದ್ದ ಏಳು ಸದಸ್ಯರು ಬಿಜೆಪಿ ಸದಸ್ಯರೊಂದಿಗೆ ಕೈಜೋಡಿಸಿ ನಗರಸಭೆಯ ಅಧಿಕಾರ ಹಿಡಿದಿದ್ದರು.

ಪಕ್ಷದ ವಿಪ್ ಉಲ್ಲಂಘಿಸಿದ್ದನ್ನು ಬಿಎಸ್ ಪಿ ಜಿಲ್ಲಾಧಿಕಾರಿ‌ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ನ್ಯಾಯಾಲಯವು ಏಳು ಮಂದಿಯ ಸದಸ್ಯತ್ವ ಅನರ್ಹಗೊಳಿಸಿತ್ತು. ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿತ್ತು.

ಆರು ಅಭ್ಯರ್ಥಿಗಳು ಗೆಲ್ಲುತ್ತಿದ್ದಂತೆಯೇ ಶಾಸಕ ಎನ್. ಮಹೇಶ್, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.