ADVERTISEMENT

ಕೊಳ್ಳೇಗಾಲ: ಕಾವೇರಿ ನದಿ ತೀರದಲ್ಲಿ ಮೊಸಳೆ ಆತಂಕ

ನದಿ ಪಾತ್ರದಲ್ಲಿ ಎಚ್ಚರಿಕೆಯ ಫಲಕಗಳಿಲ್ಲ, ಅಪಾಯಕಾರಿಯಾಗಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಯುವಕರು

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 5:45 IST
Last Updated 10 ಜೂನ್ 2025, 5:45 IST
<div class="paragraphs"><p>ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿ ತೀರದಲ್ಲಿ ಕಾಣಿಸಿಕೊಂಡಿರುವ ದೈತ್ಯ ಮೊಸಳೆ</p></div>

ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿ ತೀರದಲ್ಲಿ ಕಾಣಿಸಿಕೊಂಡಿರುವ ದೈತ್ಯ ಮೊಸಳೆ

   

ಕೊಳ್ಳೇಗಾಲ: ತಾಲ್ಲೂಕಿನ ಕಾವೇರಿ ನದಿ ತೀರದ ಗ್ರಾಮಗಳಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಯಡಕುರಿಯ, ಸತ್ತೇಗಾಲ, ವೆಸ್ಲಿ ಸೇತುವೆ, ಶಿವನಸಮುದ್ರ, ಧನಗೆರೆ, ದಾಸನಪುರ ಸೇರಿದಂತೆ ನದಿ ತೀರದಲ್ಲಿ ಪ್ರತಿನಿತ್ಯ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ.

ಯಡಕುರಿಯ ಗ್ರಾಮದಲ್ಲಿ ಮೊಸಳೆಯ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಹಾಗೂ ರೈತರು ನದಿಗೆ ಇಳಿಯಲು ಹಿಂಜರಿಯುತ್ತಿದ್ದಾರೆ. ನದಿ ನೀರನ್ನೇ ನಂಬಿಕೊಂಡು ಕೃಷಿ ಮಾಡುತ್ತಿರುವ ರೈತರು ಹಾಗೂ ದನಕರುಗಳ ಸಾಕಾಣೆದಾರರು ಮೊಸಳೆ ದಾಳಿಯ ಭೀತಿಗೆ ಸಿಲುಕಿದ್ದಾರೆ.

ADVERTISEMENT

ಕುಡಿಯಲು ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗೆ ಹೆಚ್ಚಾಗಿ ಈ ಭಾಗದ ಜನರು ನದಿ ನೀರನ್ನೆ ಅವಲಂಬಿಸುತ್ತಾರೆ ಈಗ ಮೊಸಳೆ ಕಾಣಿಸಿಕೊಳ್ಳುತ್ತಿರುವ ಕಾರಣ ಗ್ರಾಮಸ್ಥರು ಭಯಭೀತರಾಗಿದ್ದಾರೆ. ವಾರದ ಹಿಂದಷ್ಟೆ ಯಡಕುರಿಯ ಗ್ರಾಮದಲ್ಲಿ ಬಾರಿ ಗಾತ್ರದ ಮೊಸಳೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. 

ಕಳೆದ ಡಿಸೆಂಬರ್‌ನಲ್ಲಿ ಗ್ರಾಮದ ಸಿದ್ದರಾಜು ಬಹಿರ್ದೆಸೆಗೆ ಹೋಗಿದ್ದಾಗ ಮೊಸಳೆ ದಾಳಿ ಮಾಡಿತ್ತು. ನಂತರ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ ಶಿವನಸಮುದ್ರದ ಹಿಂಭಾಗದ ನದಿ ತೀರದಲ್ಲಿ ಮೊಸಳೆಯನ್ನು ಹಿಡಿದು ಬೇರೆಡೆಗೆ ಬಿಡಲಾಗಿತ್ತು. ಆದರೂ ಯಡಕುರಿಯ ಗ್ರಾಮಸ್ಥರಿಗೆ ಮೊಸಳೆಯ ಕಾಟ ತಪ್ಪಿಲ್ಲ. ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಮೊಸಳೆ ಹಿಡಿಸದಿದ್ದರೆ ಮುಂದೆ ಪ್ರಾಣಾಪಾಯ ಖಚಿತ ಎಂದು ಯಡಕುರಿಯ ಗ್ರಾಮದ ಮಹದೇವಪ್ಪ ಪ್ರಜಾವಾಣಿಗೆ ತಿಳಿಸಿದರು.

ನೀರಿನಾಳ, ಬಂಡೆಗಳ ನಡುವೆ ವಾಸ: 

ಮೊಸಳೆಗಳು ಸಾಮಾನ್ಯವಾಗಿ ನೀರಿನಾಳದಲ್ಲಿ ಹಾಗೂ ಬಂಡೆಗಳ ನಡುವೆ ಕಾಣಿಸುತ್ತವೆ. ಯಡಕುರಿಯ, ಸತ್ತೇಗಾಲ, ವೆಸ್ಲಿ ಸೇತುವೆ, ಶಿವನಸಮುದ್ರ, ಧನಗೆರೆ, ದಾಸನಪುರ ಗ್ರಾಮಗಳು ನದಿ ಪಾತ್ರದಲ್ಲಿರುವುದರಿಂದ ಆಗಾಗ ಬಂಡೆಗಳ ಮೇಲೆ ಮೊಸಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ನದಿಯಲ್ಲಿ ನೀರು ಕಡಿಮೆಯಾದಾಗ ಆಃಆರದ ಕೊರತೆ ಉಂಟಾದಾಗ ಹೆಚ್ಚಾಗಿ ದಡದಲ್ಲಿ ಕಾಣಿಸಿಕೊಳ್ಳುತ್ತವೆ.

ಪ್ರತಿ ವರ್ಷ ಬೇಸಿಗೆಯಲ್ಲಿ ನದಿಯ ನೀರು ಕಡಿಮೆಯಾದಾಗ ಮೊಸಳೆ ಹಾವಳಿ ಹೆಚ್ಚಾಗುತ್ತದೆ. ಧನಗೆರೆ ಗ್ರಾಮದ ಕಾವೇರಿ ನದಿಯ ಕಟ್ಟೆಯಲ್ಲಿ ನಿತ್ಯವೂ ಮೊಸಳೆ ದರ್ಶನವಾಗುತ್ತದೆ. ಇಲ್ಲಿನ ಗ್ರಾಮಸ್ಥರು, ಯುವಕರು ನದಿಗೆ ಇಳಿದು ಈಜುವುದು, ಮೊಸಳೆ ಕಂಡಾಗ ಸೆಲ್ಫಿ ತೆಗೆದುಕೊಳ್ಳುವುದು, ಕಲ್ಲಿನಿಂದ ಹೊಡೆಯುತ್ತಾರೆ. ಈ ಭಾಗದ ಜಮೀನಿಗಳಿಗೂ ನುಗ್ಗುವ ಮೊಸಳೆಗಳು ನಾಯಿ, ಕುರಿ ಮೇಕೆ ಹೊತ್ತೊಯ್ದಿವೆ ಎನ್ನುತ್ತಾರೆ ಗ್ರಾಮದ ನಿವಾಸಿ ಶಿವು.

ಅರಿವು ಅಗತ್ಯ:

ಮೊಸಳೆಗಳು ದಾಳಿ ಮಾಡಿದ್ದರೂ ನದೀತೀರದ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಸಹಿತ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಾಗೃತಿ ಮೂಡಿಸುವ ಎಚ್ಚರಿಕೆಯ ಫಲಕಗಳನ್ನು ಹಾಕದಿರುವುದು ಬೇಸರದ ಸಂಗತಿ. ‘ಮೊಸಳೆ ಇದೆ ಎಚ್ಚರಿಕೆ’ ನದಿಗೆ ಯಾರು ಇಳಿಯಬಾರದು’ ಎಂಬ ನಾಮಫಲಕಗಳನ್ನು ನದಿಪಾತ್ರದಲ್ಲಿ ಹಾಕಿದರೆ ಜನರು ನದಿಗಿಳಿಯುವುದಕ್ಕೆ ಕಡಿವಾಣ ಹಾಕಬಹುದು.

ಅರಣ್ಯ ಇಲಾಖೆಗೆ ಎಚ್ಚರಿಕೆ ಫಲಕ ಹಾಕಲು ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ, ಮೊಸಳೆ ಕಾಣಿಸಿಕೊಂಡಾಗ ಕಾಟಾಚಾರಕ್ಕೆ ಬಂದು ಹೋಗುತ್ತಾರೆಯೇ ಹೊರತು ಹಿಡಿಯುವ ಪ್ರಯತ್ನ ಮಾಡುತ್ತಿಲ್ಲ. ಮುಂದೆ‌ ಅನಾಹುತಗಳು ಸಂಭವಿಸಿದರೆ ಪಂಚಾಯಿತಿ ಪಿಡಿಒ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹೊಣೆಗಾರರಾಗಬೇಕಾಗುತ್ತದೆ ಎಂದು ಎಡಕುರಿಯ ಗ್ರಾಮದ ರುದ್ರಪ್ಪ ಎಚ್ಚರಿಸಿದರು.

ನದಿಗಳಲ್ಲಿ ಮೊಸಳೆಗಳಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ಶೀಘ್ರ ಎಚ್ಚರಿಕೆ ನೀಡುವ ಜಾಗೃತಿ ಫಲಕಗಳನ್ನು ನದಿ ತೀರದಲ್ಲಿ ಅಳವಡಿಸಲಾಗುವುದು.
– ಭರತ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಆರ್‌ಎಫ್‌ಒ
ನದಿಯಲ್ಲಿ ಮೊಸಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ನದಿಪಾತ್ರದ ಗ್ರಾಮಸ್ಥರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಅವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು.
– ದಿವ್ಯರಾಜ್, ಸತ್ತೇಗಾಲ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.