
ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಿಂದ ಗೊಬ್ಬಳಿಪುರ ಗ್ರಾಮದವರೆಗೆ ಒತ್ತುವರಿಯಾಗಿರುವ ಜಮೀನು ರಸ್ತೆಯನ್ನು ಮಂಗಳವಾರ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.
ಮುಳ್ಳೂರು ಗ್ರಾಮದ ಸರ್ವೆ ನಂ.66/3, 68, 79, 76ರಲ್ಲಿ ನಕಾಶೆಯಂತೆ ದಾರಿ ಇದ್ದು, ಒತ್ತುವರಿಯಾಗಿರುವುದರಿಂದ ಗ್ರಾಮದ ಶಿವಕುಮಾರ್ ಹಾಗೂ ಪ್ರಗತಿಪರ ರೈತರ ಮನವಿ ಮೇರೆಗೆ ತಹಶೀಲ್ದಾರ್ ಅವರು ದಾಖಲೆಗಳನ್ನು ಪರಿಶೀಲಿಸಿ, ಒತ್ತುವರಿ ಆಗಿರುವ ಜಾಗವನ್ನು ತೆರವುಗೊಳಿಸಲು ಆದೇಶ ನೀಡಿದರು.
‘ನಮ್ಮ ಪೂರ್ವಜರು 50 ವರ್ಷಗಳ ಹಿಂದೆ ಮುಳ್ಳೂರು ಗ್ರಾಮದಿಂದ ಗೊಬ್ಬಳಿಪುರ ಗ್ರಾಮಕ್ಕೆ ಈ ರಸ್ತೆಯ ಮೂಲಕವೇ ಹೋಗುತ್ತಿದ್ದರು. ಕೆಲವು ರೈತರು ಜಮೀನು ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿದ್ದರು. ಹಾಗಾಗಿ ಜಮೀನುಗಳಿಗೆ ಹಾಗೂ ದೇವಸ್ಥಾನಕ್ಕೆ ಹೋಗಲು ತೊಂದರೆಯಾಗುತ್ತಿತ್ತು. ಈಗ ಎಲ್ಲರಿಗೂ ರಸ್ತೆ ಅವಶ್ಯಕತೆ ಇದ್ದು, ಎಲ್ಲ ರೈತರು ಸ್ವಯಂಪ್ರೇರಿತಾವಾಗಿ ಒತ್ತುವರಿ ತೆರವಿಗೆ ಅವಕಾಶ ನೀಡಿದ್ದಾರೆ. ಪ್ರಗತಿಪರ ರೈತರು ಅರ್ಜಿ ಸಲ್ಲಿಸಿದ್ದ ಮೇರೆಗೆ ತಹಶೀಲ್ದಾರ್ ಬಸವರಾಜು ಅವರು ತೆರವುಗೊಳಿಸುತ್ತಿದ್ದಾರೆ. ತಹಶೀಲ್ದಾರ್ ಅವರ ಕಾರ್ಯಕ್ಕೆ ಇಡೀ ಗ್ರಾಮವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂದು ಒತ್ತುವರಿ ತೆರವು ಮಾಡುತ್ತಿರುವುದು ಕಳೆದ 25 ವರ್ಷಗಳಿಂದ ಶಿವಕುಮಾರ್ ಅವರು ನಡೆಸಿದ ಹೋರಾಟದ ಫಲ’ ಎಂದು ಗ್ರಾಮಸ್ಥರು ಹೇಳಿದರು.
ಗ್ರಾಮ ಲೆಕ್ಕಿಗರಾದ ರಕ್ಷಿತಾ, ರಾಜಸ್ವ ನಿರೀಕ್ಷಕ ನಿರಂಜನ್, ಸರ್ವೆಯರ್ ಪುಟ್ಟಸ್ವಾಮಿ ರಸ್ತೆ ತೆರವು ಗೊಳಿಸಿದರು. ಮುಳ್ಳೂರು ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ, ಸದಸ್ಯ ರಾದ ಮಹದೇವಮ್ಮ, ಶೇಖರ್ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.